ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಮ್ಮೆಲೇ ಕಾಮಗಾರಿ ಅವಸರ: ಸಂಚಾರ ದುಸ್ತರ

ಪ್ರಮುಖ ರಸ್ತೆಗಳಲ್ಲಿ ಓಡಾಡಲು ತೊಂದರೆ; ಜನ ಹೈರಾಣ
Last Updated 20 ಜನವರಿ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಏಕಕಾಲದಲ್ಲಿ ಕೈಗೊಂಡಿರುವುದರಿಂದಾಗಿ ವಾಹನಗಳ ಸಂಚಾರ ದುಸ್ತರವಾಗಿ ಪರಿಣಮಿಸಿದೆ.

ಕೊಲ್ಹಾಪುರ ಹೆದ್ದಾರಿಯಿಂದ ನಗರ ಸಂಪರ್ಕಿಸುವ ಕೆಎಲ್‌ಇ ಆಸ್ಪತ್ರೆಯ ಸಮೀಪದ ರಸ್ತೆಯಿಂದ ಕೃಷ್ಣದೇವರಾಯ ವೃತ್ತ– ರಾಣಿ ಚನ್ನಮ್ಮ ವೃತ್ತದ ಮೂಲಕ ಕಾಲೇಜು ರಸ್ತೆ ಮಾರ್ಗವಾಗಿ ಗೋಗಟೆ ವೃತ್ತದವರೆಗೆ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ‘ವೈಟ್‌ ಟ್ಯಾಪಿಂಗ್‌’ ಕಾಮಗಾರಿ ತೆಗೆದುಕೊಳ್ಳಲಾಗಿದೆ. ನಗರದ ಅತ್ಯಂತ ಪ್ರಮುಖ ಹಾಗೂ ಹೆಚ್ಚು ಜನಸಂದಣಿಯ ರಸ್ತೆಯ ಒಂದು ಬದಿಯನ್ನು ‘ಬಂದ್’ ಮಾಡಲಾಗಿದೆ. ಒಂದು ಬದಿಯಲ್ಲಷ್ಟೇ ವಾಹನಗಳ ಸಂಚಾರಕ್ಕೆ ಅವಕಾಶವಿದೆ. ಹೀಗಾಗಿ, ವಾಹನ ಸವಾರರು ಪರದಾಡುವಂತಾಗಿದೆ. ಪಾದಚಾರಿಗಳಿಗೆ ಜಾಗವೇ ಇಲ್ಲದಂತಾಗಿದೆ!

ಟ್ರಾಫಿಕ್ ಜಾಮ್‌ ಕಿರಿಕಿರಿ:

ಎರಡು ಬದಿಯಲ್ಲಿ ಸಂಚರಿಸಬೇಕಾದ ವಾಹನಗಳು ಒಂದೇ ಬದಿಯಲ್ಲಿ ಓಡಾಡುತ್ತಿರುವುದರಿಂದ ನಿತ್ಯವೂ ಟ್ರಾಫಿಕ್‌ ಜಾಮ್‌ ಕಿರಿಕಿರಿಯನ್ನು ಜನರು ಅನುಭವಿಸಬೇಕಾಗಿದೆ. ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳುವ ಬದಲಿಗೆ ಅಧಿಕಾರಿಗಳು ‘ಒಮ್ಮೆಲೇ ಮುಗಿಸುವ ಅವಸರ’ಕ್ಕೆ ಮುಂದಾಗಿರುವುದರಿಂದ ಸಾರ್ವಜನಿಕರು ಇನ್ನೊಂದಷ್ಟು ತಿಂಗಳು ತೊಂದರೆ ಅನುಭವಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನಕ್ಕೆ ಬಂದು ಹಲವು ವರ್ಷಗಳೇ ಕಳೆದಿವೆ. ಆದರೆ, ಈಗ ದಿಢೀರನೆ ಕಾಮಗಾರಿಯನ್ನು ಅವಸರದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳು ಮುಂದಾಗಿರುವುದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಮುಖ್ಯವಾಗಿ ನಗರದ ಹೃದಯ ಭಾಗವಾದ ರಾಣಿ ಚನ್ನಮ್ಮ ವೃತ್ತದಲ್ಲಿ ಹೆಚ್ಚಿನ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಅದರಲ್ಲೂ ಶಾಲಾ– ಕಾಲೇಜುಗಳು, ಕಚೇರಿಗಳಿಗೆ ಜನರು ಬರುವ ಸಮಯವಾದ ಬೆಳಿಗ್ಗೆ ಹಾಗೂ ಹಿಂತಿರುಗುವ ವೇಳೆಯಾದ ಸಂಜೆ ಬಹಳ ವಾಹನದಟ್ಟಣೆ ಕಂಡುಬರುತ್ತಿದೆ.

ಡಾ.ಬಿ.ಆರ್. ಅಂಬೇಡ್ಕರ್‌ ರಸ್ತೆಯಿಂದ ವಾಹನಗಳಲ್ಲಿ ಬರುವವರು ರಾಣಿ ಚನ್ನಮ್ಮ ವೃತ್ತ ದಾಟಿ ಕಾಕತಿವೇಸ್‌ ಕಡೆಗೋ, ಕಾಲೇಜು ರಸ್ತೆ, ಜಿಲ್ಲಾಧಿಕಾರಿ ಕಚೇರಿ ಅಥವಾ ಕ್ಲಬ್‌ ರಸ್ತೆಗಳ ಕಡೆಗೋ ಹೋಗಲು ಹೈರಾಣಾಗುತ್ತಿದ್ದಾರೆ. ಪರ್ಯಾಯ ರಸ್ತೆಗಳ ಸ್ಥಿತಿಯೂ ಭಿನ್ನವಾಗಿಲ್ಲ. ಜನರು ಹೆಚ್ಚಿನ ಸಮಯವನ್ನು ವಾಹನದಲ್ಲೇ ಕಳೆಯಬೇಕಾದ ಸ್ಥಿತಿ! ಅದರಲ್ಲೂ ಬಸ್ ಹಿಡಿಯಲು ಪ್ರಯಾಣಿಕರು ಪರದಾಡಬೇಕಾಗಿದೆ. ಏಕೆಂದರೆ, ಹೆಚ್ಚಿನ ವೇಳೆ ಬಸ್‌ ನಿಲ್ಲಿಸಲು ಆಗುತ್ತಿಲ್ಲ!

ಯಾವಾಗ ಮುಗಿಯುವುದೋ?:

ಬಹಳ ಕಡೆಗಳಲ್ಲಿ ರಸ್ತೆಯ ಇನ್ನೊಂದು ಬದಿಯನ್ನು ದಾಟುವುದಕ್ಕೆ ಅವಕಾಶವೇ ಇಲ್ಲದಂತೆ ಮಾಡಲಾಗಿದೆ. ವಾಹನಗಳ ಸವಾರರು ಅಥವಾ ಚಾಲಕರಿಗಿರಲಿ ಪಾದಚಾರಿಗಳಿಗೂ ಅನುಕೂಲ ಕಲ್ಪಿಸಿಲ್ಲ. ಹೀಗಾಗಿ, ಸುತ್ತಿ ಬಳಸಿಕೊಂಡು ಹೋಗಬೇಕಾಗಿದೆ. ಕೆಎಲ್‌ಇ ಆಸ್ಪತ್ರೆ ಎದುರಿನಿಂದ ಕೃಷ್ಣದೇವರಾಯ ವೃತ್ತದವರೆಗೂ ಇದೇ ಪರಿಸ್ಥಿತಿ ಇದೆ.

ಹಲವು ಪ್ರಮುಖ ರಸ್ತೆಗಳ ಬದಿಯಲ್ಲಿ ಪೈಪ್‌ಪೈಲ್‌ ಅಳವಡಿಕೆಗಾಗಿ ಗುಂಡಿ ತೋಡಲಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸೂಚನೆ ಅಥವಾ ಎಚ್ಚರಿಕೆಯ ಫಲಕಗಳನ್ನು ಅಳವಡಿಸಿಲ್ಲ. ಇದು ಅಪಘಾತಗಳಿಗೆ, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಜೊತೆಗೆ, ಹಲವು ಕಡೆಗಳಲ್ಲಿ ಇದು ಯಾವ ಕಾಮಗಾರಿ, ನಡೆಸುತ್ತಿರುವವರು ಯಾರು, ಪೂರ್ಣಗೊಳ್ಳುವುದು ಯಾವಾಗ ಎನ್ನುವ ಮಾಹಿತಿಯುಳ್ಳ ಫಲಕವನ್ನೂ ಹಾಕಿಲ್ಲ.

ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಬಾಚಿ–ರಾಯಚೂರು ಹೆದ್ದಾರಿ ಸಂಪರ್ಕಿಸುವ ಬಾಕ್ಸೈಟ್‌ ರಸ್ತೆಯ ಎರಡೂ ಬದಿಗಳಲ್ಲಿ ಅಗೆಯಲಾಗಿದೆ. ಪೈಪ್‌ಗಳನ್ನು ಇಡಲಾಗಿದೆ. ಹನುಮಾನ್‌ನಗರದಿಂದ ಹಿಂಡಲಗಾ ಗಣಪತಿ ದೇವಸ್ಥಾನದವರೆಗಿನ ರಸ್ತೆ ಬದಿಗಳಲ್ಲೂ ಗುಂಡಿ ತೋಡಲಾಗಿದೆ. ಇಲ್ಲೂ ಕಾಮಗಾರಿ ಯಾವುದು ಎನ್ನುವ ಮಾಹಿತಿಯೇ ಇಲ್ಲ.

ವಾಹನಗಳ ಸಂಚಾರ ನಿರ್ವಹಣೆಗೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT