ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇನ್ವೆಸ್ಟ್‌ ಕರ್ನಾಟಕ’ಕ್ಕೆ 50ಸಾವಿರ ಎಕರೆ ಭೂ ಬ್ಯಾಂಕ್: ನಿರಾಣಿ

Last Updated 6 ಏಪ್ರಿಲ್ 2022, 12:21 IST
ಅಕ್ಷರ ಗಾತ್ರ

ಬೆಳಗಾವಿ: ‘ಇದೇ ವರ್ಷದ ನ.2ರಿಂದ 4ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇನ್ಟೆಸ್ಟ್‌ ಕರ್ನಾಟಕ (ಜಾಗತಿಕ ಹೂಡಿಕೆದಾರರ ಸಮಾವೇಶ) ನಡೆಯಲಿದ್ದು, ಅದಕ್ಕೆ ಪೂರಕವಾಗಿ 4ರಿಂದ 5 ತಿಂಗಳಲ್ಲಿ ರಾಜ್ಯದಾದ್ಯಂತ 50 ಸಾವಿರ ಎಕರೆ ‘ಲ್ಯಾಂಡ್ ಬ್ಯಾಂಕ್‌’ ಸಿದ್ಧಪಡಿಸಲಾಗುವುದು’ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘50ಸಾವಿರ ಎಕರೆ ಭೂಮಿಯನ್ನು ರೈತರ ಸಮ್ಮತಿ ಮೇರೆಗೆ ಸ್ವಾಧೀನಪಡಿಸಿಕೊಳ್ಳಲಾಗುವುದು. ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಸಾವಿರ ಎಕರೆ ಪಡೆಯಲಾಗುವುದು. ಬೆಂಗಳೂರು ಸುತ್ತಮುತ್ತ 20ಸಾವಿರ ಎಕರೆ ಸ್ವಾಧೀನಪಡಿಸಿಕೊಳ್ಳಲಾಗುವುದು’ ಎಂದು ಹೇಳಿದರು.

‘ಸಮಾವೇಶಕ್ಕೆ ಸಂಬಂಧಿಸಿದಂತೆ ನೀತಿಗಳನ್ನೂ ರೂಪಿಸಲಾಗುವುದು. ಸೆಮಿ ಕಂಡಕ್ಟರ್‌ ನೀತಿಯನ್ನು ದೇಶದಲ್ಲೇ ಮೊದಲಿಗೆ ತರಲಾಗುತ್ತಿದೆ. ಏರೋಸ್ಪೇಸ್ ಅಂಡ್ ಡಿಫೆನ್ಸ್‌ ಪಾರ್ಕ್‌ ಅನ್ನು ದೇವನಹಳ್ಳಿ ವಿಮಾನನಿಲ್ದಾಣದ ಬಳಿ 3ಸಾವಿರ ಎಕರೆಯಲ್ಲಿ 2ನೇ ಹಂತವನ್ನು ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಎಫ್‌ಡಿಎ (ವಿದೇಶಿ ಬಂಡವಾಳ ಹೂಡಿಕೆಯಲ್ಲಿ) ಕರ್ನಾಟಕ ನಂ.1 ಸ್ಥಾನದಲ್ಲಿದೆ. ಇದು ಹೆಮ್ಮೆಯ ಸಂಗತಿ’ ಎಂದರು.

ರೋಡ್ ಷೋ:

‘ಹೂಡಿಕೆದಾರರ ಸಮಾವೇಶದ ಬಗ್ಗೆ ಪ್ರಮುಖ ರಾಜ್ಯಗಳು ಹಾಗೂ ದೇಶಗಳಲ್ಲಿ ರೋಡ್ ಷೋ ನಡೆಸಿ, ಉದ್ಯಮಿಗಳನ್ನು ಆಕರ್ಷಿಸಲಾಗುವುದು’ ಎಂದು ತಿಳಿಸಿದರು.

‘ಕೈಗಾರಿಕೆ ಅನುಷ್ಠಾನದಲ್ಲಿ ಉದ್ಯಮಿಗಳಿಗೆ ಎದುರಾಗುವ ಸಮಸ್ಯೆಗಳ ನಿವಾರಣೆಗೂ ಕ್ರಮ ವಹಿಸಿದ್ದೇವೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ 2 ಎಕರೆ ಭೂಮಿಯನ್ನು ಶೇ 75ರಷ್ಟು ಸಹಾಯಧನದಲ್ಲಿ ನೀಡುತ್ತಿದ್ದೇವೆ. ಕೈಗಾರಿಕೆ ಸ್ಥಾಪನೆಗೆ ಮುಂದೆ ಬರುವ, ಆರ್ಥಿಕವಾಗಿ ಹಿಂದುಳಿದ ಸಮಾಜದವರಿಗೆ ಶೇ 75ರಷ್ಟು ಸಹಾಯಧನ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಸಾಲ ಸೌಲಭ್ಯ ಮತ್ತು ಮಾರುಕಟ್ಟೆಗೆ ಜೋಡಣೆ ಕಾರ್ಯವನ್ನೂ ಕಲ್ಪಿಸಲಾಗುವುದು’ ಎಂದರು.

ಕಿತ್ತೂರಿನಲ್ಲಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ:

‘ಕಾರವಾರ ಬಂದರನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಅಭಿವೃದ್ಧಿಪಡಿಸಲಾಗುವುದು. ಬೆಳಗಾವಿಯ ಸಾಂಬ್ರಾ ಹಾಗೂ ಹುಬ್ಬಳ್ಳಿಯನ್ನು ಡೊಮೆಸ್ಟಿಕ್ ವಿಮಾನನಿಲ್ದಾಣಗಳನ್ನಾಗಿ ಮಾಡಿ ಇವೆರಡರ ನಡುವಿರುವ ಜಿಲ್ಲೆಯ ಚನ್ನಮ್ಮನ ಕಿತ್ತೂರಿನಲ್ಲಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣಕ್ಕೆ ಹೂಡಿಕೆದಾರರನ್ನು ಸಂಪರ್ಕಿಸಲಾಗುತ್ತಿದೆ. ಇದರಿಂದ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

‘ನಗರದ ವಿಟಿಯು ಸಭಾಂಗಣದಲ್ಲಿ ಏ.8ರಂದು ಇಲಾಖೆಯಿಂದ ‘ಉದ್ಯಮಿಯಾಗು, ಉದ್ಯೋಗ ನೀಡು’ ಕಾರ್ಯಾಗಾರ ಆಯೋಜಿಸಲಾಗಿದೆ. ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವುದಕ್ಕಾಗಿ ಅದಾಲತ್ ಅನ್ನೂ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT