ಸವದತ್ತಿ: ವಿದ್ಯಾಥಿಗಳು ಶ್ರದ್ಧೆ, ನಿರಂತರ ಪರಿಶ್ರಮದಿಂದ ಗುರಿ ತಲುಪಿದಲ್ಲಿ ಮಾತ್ರ ಉತ್ತಮ ಭವಿಷ್ಯ ಹೊಂದಬಹುದು ಎಂದು ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಮುತ್ತಿನ ಹೇಳಿದರು.
ಇಲ್ಲಿನ ಬಿ.ಬಿ. ಮಮದಾಪೂರ ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ಪೋಕ್ಸೊ ಕಾಯ್ದೆಯ ಕುರಿತು ಆಯೋಜಿಸಿದ್ದ ಕಾನೂನು ಸಾಕ್ಷರತಾ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೂ ಎಲ್ಲ ರಂಗದಲ್ಲೂ ಸ್ಥಾನ ದೊರೆಯಬೇಕು. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಅನೇಕ ಕಾನೂನು ಸೇವೆಗಳಿವೆ. ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳಕ್ಕೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದರೆ ಆರೋಪಿಗೆ ಜಾಮೀನು ರಹಿತ ಜೈಲು ಶಿಕ್ಷೆ, ದಂಡ ಇದೆ. ಕೇವಲ ನೌಕರಿ, ಹಣ ಸಂಪಾದನೆಗೆ ಶಿಕ್ಷಣ ಪಡೆಯುವಂತಾಗಬಾರದು. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಲು ಎಲ್ಲರೂ ಸುಶಿಕ್ಷತರಾಗಬೇಕಿದೆ ಎಂದು ತಿಳಿಸಿದರು.
ನ್ಯಾಯವಾದಿ ವಿ.ವಿ. ಪಾಟೀಲ ಮಾತನಾಡಿ, ಹಿಂದಿನಿಂದಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ವಿಶೇಷ ಕಾನೂನುಗಳ ಮೂಲಕ ತಡೆಗಟ್ಟುವ ಕಾರ್ಯ ನಡೆದಿದೆ. ಲೈಂಗಿಕ ಮತ್ತು ಮಾನಸಿಕ ಕಿರುಕುಳಕ್ಕೊಳಗಾದ ಬಾಲಕಿಯರ ರಕ್ಷಣೆಗೆ ಪೋಕ್ಸೊ ಕಾಯ್ದೆ ಜಾರಿಗೆ ಬಂದಿದೆ. ಸಂತ್ರಸ್ತ ಬಾಲಕಿ ಪ್ರಕರಣ ದಾಖಲಿಸಿದರೆ ಆರೋಪಿಗೆ ಜೀವಾವಧಿ ಅಥವಾ ಮರಣ ದಂಡನೆ ಶಿಕ್ಷೆ ಆಗಬಹುದು. ಸ್ಥಳೀಯವಾಗಿ ಮಹಿಳಾ ಅಧಿಕಾರಿ, ಬಾಲಾಪರಾಧಿ ಕೇಂದ್ರದಲ್ಲಿ ದೂರು ದಾಖಲಿಸಬಹುದು ಎಂದು ತಿಳಿಸಿದರು.
ಪ್ರಧಾನ ದಿವಾಣಿ ನ್ಯಾಯಾಧೀಶೆ ಸುಮಲತಾ ಬೆಣ್ಣಿಕಲ್ಲ, ಬಿ.ಬಿ. ಚಿಂಚಗಂಡಿ, ಎಸ್.ಎಂ. ನದಾಫ್, ಜೆ.ಬಿ. ಮುನವಳ್ಳಿ, ಜಯಶ್ರೀ ಪೂಜೇರ, ಆರ್.ಎಂ. ನಿಡೋನಿ, ಎಸ್.ಎಂ. ಗೊಂದಕರ ಇದ್ದರು.