ಗುರುವಾರ , ಜನವರಿ 28, 2021
15 °C
ತತ್ವ ಪದ, ಹಾರ್ಮೋನಿಯಂನಲ್ಲಿ ಸಾಧನೆಗೆ ಗೌರವ

ಮುತ್ತಪ್ಪಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ: ತಾಲ್ಲೂಕಿನ ಖಾನಟ್ಟಿ ಗ್ರಾಮದ ಜಾನಪದ ಕಲಾವಿದ ಮುತ್ತಪ್ಪ ಅಲ್ಲಪ್ಪ ಸವದಿ ಅವರು ಕರ್ನಾಟಕ ಜಾನಪದ ಅಕಾಡೆಮಿಯಿಂದ ನೀಡುವ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನವಾಗಿದ್ದಾರೆ.

ಐದು ದಶಕಗಳಿಂದ ಭಜನೆ, ತತ್ವಪದ, ಹಾರ್ಮೋನಿಯಂ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರ ಸಾಧನೆಯನ್ನು ಅಕಾಡೆಮಿ ಗೌರವಿಸಿದೆ.

‘ನಮ್ಮಷ್ಟಕ್ಕ ನಾವು ಕಲಾ ಸೇವೆ ಮಾಡಿಕೋಂತ ಇದ್ದವಿರೀ. ನನ್ನ ಕಲಾ ಸೇವೆ ಗುರುತಿಸಿ ಪ್ರಶಸ್ತಿ ಕೊಟ್ಟಿದ್ದು ಬಾಳ್‌ ಸಂತೋಷವಾಗಿದೆ’ ಎಂದು ಅವರು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

10–12 ವರ್ಷದ ಬಾಲಕನ್ನಿದ್ದಾಗಲೇ ಅವರಿಗೆ ಹಾಡುವ ಗೀಳು. ಕರಡಿ ವಾದನ ಮಾಡುತ್ತಿದ್ದ ತಂದೆ ಅಲ್ಲಪ್ಪ ಮತ್ತು ತಾಯಿ ಸಾಂವಕ್ಕಾ ಅವರ ಪ್ರೇರಣೆಯಿಂದ ಶಾಲೆ ಮತ್ತು ಗ್ರಾಮದ ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ವಚನ, ದಾಸರ ಪದ ಮತ್ತು ತತ್ವಪದಗಳನ್ನು ಹಾಡಿ ಪ್ರಶಂಸೆ ಪಡೆಯುತ್ತಿದ್ದರು. ಮನೆ  ಪಕ್ಕದಲ್ಲಿದ್ದ ಗಂಗಪ್ಪ ನಿಂಗನೂರ ಮಾಸ್ತರ್‌ ಅವರು ಹೇಳಿಕೊಟ್ಟ ಹಾಡುವ ಗತ್ತುಗಳು ಮತ್ತು ಹಾರ್ಮೋನಿಯಂ ನುಡಿಸುವ ಬಗ್ಗೆ ಕರಗತ ಮಾಡಿಕೊಂಡರು. ಮುಂದೆ ಮುತ್ತಪ್ಪ ಸಾಗಿದ್ದೇ ಕಲಾದಾರಿಯಾಯ್ತು.

ಖಾನಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹತ್ತಾರು ಭಜನಾ ತಂಡಗಳಲ್ಲಿ ತತ್ವ ಪದಗಳನ್ನು ಹಾಡುವುದು ಮತ್ತು ಹಾರ್ಮೋನಿಯಂ ನುಡಿಸುವುದನ್ನೆ ಕಾಯಕ ಮಾಡಿಕೊಂಡರು. ನಿಜಗುಣರು, ಸರ್ಪಭೂಷಣ ಶಿವಯೋಗಿ, ಪುರಂದರ, ಕನಕದಾಸರ ಪದ್ಯಗಳು, ಶಿಶುನಾಳ ಶರೀಫರ ತತ್ವಪದಗಳು, ವಚನ ಎಲ್ಲವನ್ನೂ ಭಾವತುಂಬಿ ಹಾಡುತ್ತಾರೆ. ಹಾರ್ಮೋನಿಯಂ ಮುಂದೆ ಕುಳಿತು ಹಾಡುತ್ತಿದ್ದರೆ ಪ್ರೇಕ್ಷಕರು ತಲೆದೂಗುತ್ತಾರೆ. ಶಿವಲಿಂಗೇಶ್ವರ ಭಜನಾ ತಂಡ ಕಟ್ಟಿಕೊಂಡು ನೂರಾರು ಕಾರ್ಯಕ್ರಮ ನೀಡಿದ್ದಾರೆ. 67 ವರ್ಷದ ಮುತ್ತಪ್ಪ ಅವರಿಗೆ ಈಗಲೂ ಹಾಡುಗಾರಿಕೆಯಲ್ಲಿ ಬತ್ತದ ಉತ್ಸಾಹ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾ ಮೇಳ, ನಾಡಹಬ್ಬ, ಹಂಪಿ ಉತ್ಸವ, ಚಾಲುಕ್ಯ ಉತ್ಸವ, ಮೈಸೂರು ಸುತ್ತೂರ ಉತ್ಸವ, ಆಳ್ವಾಸ್‌ ನುಡಿಸಿರಿ, ಪುಣೆಯ ಬಸವ ಉತ್ಸವ ಹೀಗೆ... ನೂರಾರು ಕಾರ್ಯಕ್ರಮಗಳಲ್ಲಿ ಕಲೆ ಪ್ರದರ್ಶಿಸಿದ್ದಾರೆ. ಜಾತ್ರೆಗಳು, ಶರಣ ಉತ್ಸವ, ವಚನ ಉತ್ಸವ, ಜಾನಪದ ಮೇಳದಲ್ಲೂ  ಪಾಲ್ಗೊಂಡಿದ್ದಾರೆ. 2017ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿದ್ದರು. ಆಕಾಶವಾಣಿಯ ‘ಬಿ’ ಗ್ರೇಡೆ ಕಲಾವಿದರಾಗಿದ್ದಾರೆ. ‘ಕಲಾ ಮುಕುಟ ರಾಷ್ಟ್ರೀಯ ಪ್ರಶಸ್ತಿ, ರಾಜ್ಯಮಟ್ಟದ ಭಜನಾ ಸ್ಪರ್ಧೆಗಳಲ್ಲಿ ಪ್ರಶಸ್ತಿ ಮೊದಲಾದವರು ಅವರಿಗೆ ಸಂದಿವೆ.

ಜಾನಪದ ಅಕಾಡೆಮಿ ಪ್ರಕಟಿಸಿರುವ ಪ್ರಶಸ್ತಿಯ ₹25 ಸಾವಿರ ಮತ್ತು ಫಲಕವ ಒಳಗೊಂಡಿದೆ. ಫೆಬ್ರುವರಿಯಲ್ಲಿ ಚಾಮರಾಜನಗದಲ್ಲಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.