ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಲಕ್ಷ್ಮಿದೇವಿ ಮಹಿಮೆ ಅಪಾರ: ರಮೇಶ

ಸುಳೇಭಾವಿಯಲ್ಲಿ ‘ಜಾತ್ರಿ ಬಂತು’ ಕಿರುಚಿತ್ರ ಬಿಡುಗಡೆ
Last Updated 23 ಫೆಬ್ರುವರಿ 2020, 13:53 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಮಹಾಲಕ್ಷ್ಮೀದೇವಿ ಹಾಗೂ ಸುಳೇಭಾವಿಯ ಮಹಾಲಕ್ಷ್ಮೀದೇವಿ ಮಧ್ಯೆ ವ್ಯತ್ಯಾಸ ಇಲ್ಲ. ಈ ಎರಡೂ ದೇವಿಯರ ಮಹಿಮೆ ಒಂದೇ ಆಗಿದೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಸುಳೇಭಾವಿಯಲ್ಲಿ ಶ್ರೀಶಿವಶೋಭಾ ಸಿನಿ ಫ್ಯಾಕ್ಟರಿ ನಿರ್ಮಿಸಿರುವ ಮಹಾಲಕ್ಷ್ಮೀದೇವಿ ಮಹಾತ್ಮೆ ಕುರಿತು ‘ಜಾತ್ರಿ ಬಂತು’ ಕಿರುಚಿತ್ರ ಬಿಡುಗಡೆ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಭಾಗದಲ್ಲಿ ಅದ್ಧೂರಿಯಾಗಿ ನಡೆಯುವ ಜಾತ್ರೆ ಯಶಸ್ವಿಯಾಗಲಿ. ದೇವಿ ಮಹಿಮೆ ಎಲ್ಲೆಡೆ ಪಸರಿಸಲಿ’ ಎಂದು ಹಾರೈಸಿದರು.

ಕಿರುಚಿತ್ರ ಬಿಡುಗಡೆ ಮಾಡಿದ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ‘ಸುಳೇಭಾವಿ ಮಹಾಲಕ್ಷ್ಮಿ ಆಶೀರ್ವಾದದಿಂದ ಶಾಸಕಿಯಾಗಿದ್ದೇನೆ. ನಾಮಪತ್ರ ಸಲ್ಲಿಸುವ ಮುನ್ನ ದೇವಿ ದರ್ಶನ ಪಡೆದಿದ್ದೆ. ಅದರ ಫಲ ಫಲಿತಾಂಶದ ದಿನ ಸಿಕ್ಕಿತು’ ಎಂದರು.

‘ಜಾತ್ರೆಗೆ ಅಗತ್ಯ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ನನ್ನದು. ರಸ್ತೆ, ಚರಂಡಿ ಮೊದಲಾದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಯುವಕರು ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು. ಇಲ್ಲಿಗೆ ಬರುವ ಲಕ್ಷಾಂತರ ಭಕ್ತರಿಂದ ಮೆಚ್ಚುಗೆ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

ನಾಟಕಕಾರ ಡಾ.ಡಿ.ಎಸ್. ಚೌಗಲೆ, ‘ಸುಳೇಭಾವಿ ಪಂಡಿತ್‌ ಕುಮಾರ ಗಂಧರ್ವರು ಜನಿಸಿದ ನೆಲ. ಅವರ ಸ್ಮಾರಕ ನಿರ್ಮಿಸಬೇಕು’ ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಬಸನಗೌಡ ಹುಂಕರೀಪಾಟೀಲ ಮಾತನಾಡಿ, ‘ನಾನು ಹಲವು ಜಾತ್ರೆಗಳನ್ನು ಮಾಡಿದ್ದೇನೆ, ನೋಡಿದ್ದೇನೆ. ಜಾತ್ರೆಗೆ ಏನು ಬೇಕೆಂದು ಹಿಂದಿನ ಜನಪ್ರತಿನಿಧಿಗಳು ಕೇಳಿರಲಿಲ್ಲ. ಆದರೆ, ಈಗಿನ ಶಾಸಸರು ಅವರಾಗಿಯೇ ಬಂದು ಮುಖಂಡರ ಸಭೆ ನಡೆಸಿ ಸಹಕಾರ ನೀಡುತ್ತಿದ್ದಾರೆ. ಅನುದಾನ ಕೊಡಿಸಿದ್ದಾರೆ. ಸಮಿತಿಯಲ್ಲಿ ರಾಜಕಾರಣಿಗಳೂ ಇದ್ದೇವೆ. ಆದರೆ, ದೇವಸ್ಥಾನದಲ್ಲಿ ರಾಜಕಾರಣ ಮಾಡುವುದಿಲ್ಲ’ ಎಂದು ತಿಳಿಸಿದರು.

ನಿರ್ಮಾಪಕ ಭೈರೋಬಾ ಕಾಂಬಳೆ ಮಾತನಾಡಿ, ‘ಕಿರುಚಿತ್ರವನ್ನು ಯಾವುದೇ ಲಾಭದ ಉದ್ದೇಶ ಇಟ್ಟುಕೊಂಡು ನಿರ್ಮಿಸಿಲ್ಲ. ದೇವಿಗೆ ಅಳಿಲು ಸೇವೆ ಮಾಡಿದ್ದೇವೆ. ಜನರಿಗೆ ಇಷ್ಟವಾಗುವ ಮೂಲಕ, ನಮ್ಮ ಶ್ರಮ ಸಫಲವಾಗಿದೆ’ ಎಂದರು.

ಪತ್ರಕರ್ತ ಮುರುಗೇಶ ಶಿವಪೂಜಿ ಮಾತನಾಡಿದರು. ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಸಮಿತಿ ಅಧ್ಯಕ್ಷ ದೇವಣ್ಣ ಬಂಗೇನ್ನವರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಬಡಿಗೇರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮುಖಂಡರಾದ ಧನಂಜಯ ಜಾಧವ, ಮುಖಂಡರಾದ ನಾನಪ್ಪ ಪಾರ್ವತಿ, ಕಿರಣಸಿಂಗ್ ರಜಪೂತ, ಶಿಕ್ಷಕ ಶಿವಪ್ಪ ಕೌತಗಾರ ಇದ್ದರು.

ಬಾಲರಾಜ ಭಜಂತ್ರಿ, ಮೇಘನಾ ನಿರೂಪಿಸಿದರು. ರವಿಕುಮಾರ ಪಂಪುನಾಯ್ಕ ವಂದಿಸಿದರು. ನಂತರ ವಿವಿಧ ಸಾಂಸ್ಕೃತಿಕ ಹಾಗೂ ಹಾಸ್ಯ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT