ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷ ಅವಶ್ಯ: ದೇವೇಗೌಡ

ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Last Updated 19 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷ ಅವಶ್ಯವಾಗಿದೆ. ಇದನ್ನು ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿಕೊಡಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದಲ್ಲಿ ಬದಿಗೆ ಸರಿಸಿ ಸಂಘಟನೆಗೆ ಒತ್ತು ನೀಡಬೇಕು’ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ತಿಳಿಸಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ನಾವೀಗ ಝೀರೊ ಪಾಯಿಂಟ್‌ನಲ್ಲಿದ್ದೇವೆ. ಈ ವಾಸ್ತವದ ಅರಿವಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಈ ಜಿಲ್ಲೆಯ 18 ಕ್ಷೇತ್ರಗಳಲ್ಲಿ 14 ಸ್ಥಾನಗಳನ್ನು ಗೆದ್ದಿದ್ದೆವು. ರಾಮಭಾವು ಪೋತದಾರ್ ಹಳ್ಳಿಗೆ ಬಂದು ‘ಬಿ’ ಫಾರಂ ತೆಗೆದುಕೊಂಡು ಹೋಗಿದ್ದರು. ಇಬ್ಬರನ್ನು ಮಂತ್ರಿ ಮಾಡಿದ್ದೆ. ಶಿವಾನಂದ ಕೌಜಲಗಿ ಹಾಗೂ ಲೀಲಾವತಿ ಆರ್‌. ಪ್ರಸಾದ್ ಅವರನ್ನು ಮಂತ್ರಿ ಮಾಡಿದ್ದೆ’ ಎಂದು ಸ್ಮರಿಸಿದರು.

ಪಕ್ಷ ಕಟ್ಟಲು ಪ್ರಯತ್ನ:‘ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕಾಗಿದೆ. ಇದಕ್ಕಾಗಿ ಈಗಾಗಲೇ ಪಕ್ಷದಲ್ಲಿರುವ ನಾಯಕರನ್ನು ಒಗ್ಗೂಡಿಸಿಕೊಂಡು ಕಟ್ಟಲು ಪ್ರಯತ್ನ ಮಾಡುತ್ತೇನೆ. ಕ್ಷೇತ್ರಗಳಲ್ಲಿ ಆಸಕ್ತಿ ಇರುವವರನ್ನು ಅಭ್ಯರ್ಥಿಗಳನ್ನಾಗಿ ಹಾಕಲು, ಇಲ್ಲೇ ಕುಳಿತು ಇಲ್ಲಿನ ಮುಖಂಡರೊಂದಿಗೆ ಚರ್ಚಿಸಿ ಆಯ್ಕೆ ಪ್ರಕ್ರಿಯೆ ನಡೆಸುತ್ತೇನೆ. ಜನರು ತೋರುತ್ತಿರುವ ಪ್ರೀತಿ ಹಾಗೂ ವಿಶ್ವಾಸ ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ’ ಎಂದು ಹೇಳಿದರು.

‘ಈ ಭಾಗಕ್ಕೆ ಇನ್ಮುಂದೆ ಹೆಚ್ಚು ಬರುತ್ತೇನೆ. ಸದಸ್ಯತ್ವ ನೋಂದಣಿಯನ್ನೂ ಆರಂಭಿಸುತ್ತೇವೆ. ಬದ್ಧತೆಯಿಂದ ಇರುವವರನ್ನು ಗುರುತಿಸಲಾಗುವುದು. ಕೋರ್ ಕಮಿಟಿ ಮಾಡಿ ಜವಾಬ್ದಾರಿ ಕೊಡಲಾಗುವುದು. ಒಬ್ಬಿಬ್ಬರಲ್ಲಿ ಅಸಮಾಧಾನ ಇರಬಹುದು. ಶಾಸಕರು ಅಥವಾ ವಿಧಾನಪರಿಷತ್‌ ಸದಸ್ಯರು ಅವರ ಭವಿಷ್ಯವನ್ನು ಅವರು ನೋಡಿಕೊಳ್ಳಬಹುದು. ಅಶೋಕ ಪೂಜಾರಿ ಅವರನ್ನು ಸಂಘಟನೆಯಲ್ಲಿ ಹೆಚ್ಚಾಗಿ ಬಳಸಲಾಗುವುದು’ ಎಂದರು.

ದುಡಿಮೆ ಬೇಕು:‘ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿ ಇರುವುದರಿಂದಾಗಿ, ತಮಿಳುನಾಡು ಬಹಳ ಅಭಿವೃದ್ಧಿ ಆಗಿದೆ. ಅಂತೆಯೇ ಇಲ್ಲೂ ಆಗಬೇಕು. ಸ್ಥಿರವಾದ ಸರ್ಕಾರ ಬಾರದೇ ಇರುವುದರಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ’ ಎಂದು ವಿಶ್ಲೇಷಿಸಿದರು.

‘ಪ್ರಧಾನಿ ಮೋದಿ ಅವರನ್ನು ಪ್ರಶ್ನೆ ಮಾಡುವ ಶಕ್ತಿ ಯಾರಿಗೂ ಇಲ್ಲ. ಭ್ರಷ್ಟಾಚಾರ ಮುಕ್ತ ಸರ್ಕಾರ ಮಾಡುವುದಾಗಿ ದೇಶವನ್ನು ಏಕಾಂಗಿಯಾಗಿ ಸುತ್ತಿದರು. ಮಾಧ್ಯಮಗಳು ಅವರಿಗೆ ಶಕ್ತಿ ತುಂಬಿದವು. ಈಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಜನರು ನೀಡಿದ ತೀರ್ಪು ಕಾಂಗ್ರೆಸ್, ಬಿಜೆಪಿಗೆ ಪ್ರಬಲವಾದ ಪೆಟ್ಟು ಕೊಟ್ಟಿದೆ. ನಮ್ಮಲ್ಲೂ ದುಡಿಮೆ ಮಾಡಬೇಕು. ಈ ನಿಟ್ಟಿನಲ್ಲಿ ಆಶಿಸ್ತು ತೋರುವವರನ್ನು ಪಕ್ಷದಿಂದ ಹೊರಗೆ ಹಾಕುತ್ತೇವೆ’ ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ಮುಖಂಡರಾದ ಎನ್.ಎಚ್. ಕೋನರೆಡ್ಡಿ, ನಾಸಿರ ಬಾಗವಾನ, ಅಶೋಕ ಪೂಜಾರಿ, ಫೈಜುಲ್ಲಾ ಮಾಡಿವಾಲೆ, ಜಿ.ಎಸ್. ಗೋಕಾಕ ‍ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT