ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಕೇಸರಿ ಸಂಗೊಳ್ಳಿ ರಾಯಣ್ಣ’ ನಾಟಕ ಕೃತಿ ಬಿಡುಗಡೆ

Last Updated 25 ಜನವರಿ 2022, 12:39 IST
ಅಕ್ಷರ ಗಾತ್ರ

ಬೆಳಗಾವಿ: ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಮೊಳಗಿಸಿದ ಕಹಳೆಯು ಸ್ವಾತಂತ್ರ್ಯ ಹೋರಾಟದಲ್ಲಿ ಸಾಮಾನ್ಯರೂ ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು’ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ವಿಶೇಷ ಅಧಿಕಾರಿ ಡಾ.ಎಂ. ಜಯಪ್ಪ ಸ್ಮರಿಸಿದರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನಿಂದ ಮಂಗಳವಾರ ಆಯೋಜಿಸಿದ್ದ ‘ಸಂಗೊಳ್ಳಿ ರಾಯಣ್ಣ: ವೀರ ನಮನ’ ವಿಶೇಷ ಉಪನ್ಯಾಸ ಮತ್ತು ‘ಕನ್ನಡ ಕೇಸರಿ ಸಂಗೊಳ್ಳಿ ರಾಯಣ್ಣ’ ನಾಟಕ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ, ಸಂಸ್ಕೃತಿ, ನಾಡಿನ ರಕ್ಷಣೆಯ ಹೋರಾಟದ ಯಜ್ಞಕ್ಕೆ ಅರ್ಪಿಸಿಕೊಂಡವರು ರಾಯಣ್ಣ. ಸಾಮಾನ್ಯ ಮನುಷ್ಯನ ಅಸಾಮಾನ್ಯ ಹೋರಾಟದ ಧ್ಯೋತಕವಾಗಿ ಅವರ ಚರಿತ್ರೆ ಕಂಡುಬರುತ್ತದೆ. ದೇಶದ ಸ್ವಾತಂತ್ರ್ಯ ಹೋರಾಟದ ಚಾರಿತ್ರಿಕ ಪುಟಗಳಲ್ಲಿ ಶಾಸ್ವತ ಸ್ಥಾನ ಪಡೆದಿದ್ದಾರೆ’ ಎಂದರು.

ಸಂಪನ್ಮೂಲ ವ್ಯಕ್ತಿ ದಾವಣಗೆರೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕ ಡಾ.ಹುಚ್ಚೇಗೌಡ, ‘ರಾಯಣ್ಣನ ಕುರಿತು ಲಿಖಿತ ದಾಖಲೆಗಳ ಕೊರತೆ ಇದೆ. ಮೌಖಿಕ ದಾಖಲೆಗಳ ಮೂಲಕ ಹೋರಾಟದ ಹೆಜ್ಜೆಗಳನ್ನು ಕಟ್ಟಿಕೊಡುವುದು ಸಾಹಸದ ಕೆಲಸ. ರಾಯಣ್ಣ ಸಾಮಾನ್ಯ ಮನುಷ್ಯ. ಇಲ್ಲಗಳ ನಡುವೆ ತನ್ನ ಸಂಕಲ್ಪ ಶಕ್ತಿಯ ಮೂಲಕ ಇರುವಿಕೆ ತೋರಿಸಿದ’ ಎಂದು ಬಣ್ಣಿಸಿದರು.

ಕೃತಿಯ ಸಂಪಾದಕ ಡಾ.ಎಚ್.ಬಿ. ಕೋಲಕಾರ ಪರಿಚಯಿಸಿದರು.

ಆರ್‌ಸಿಯು ಸಿಂಡಿಕೇಟ್ ಸದಸ್ಯರಾದ ಡಾ.ಆನಂದ ಹೊಸೂರ, ‘ಅಧ್ಯಯನ ಪೀಠ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಮರೆಯಾಗಿ ಹೋಗುತ್ತಿದ್ದ ಈ ನಾಟಕವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮರು ಮುದ್ರಣಗೊಂಡಿದ್ದು ಚಾರಿತ್ರಿಕ ದಾಖಲೆಯಾಗಿದೆ’ ಎಂದರು.

ಮುಖಂಡ ಯಲ್ಲಪ್ಪ ಕುರುಬರ, ನಿವೃತ್ತ ಎಸ್ಪಿ ಅಶೋಕ ಸದಲಗೆ, ಮಹಾವಿದ್ಯಾಲಯದ ಪ್ರಭಾರ ಪ್ರಾಚಾರ್ಯ ಆಧಿನಾಥ ಸಿ. ಉಪಾಧ್ಯೆ, ನಿವೃತ್ತ ಅರಣ್ಯಾಧಿಕಾರಿ ಸಿ.ವೈ. ಅಪ್ಪನ್ನರ್, ನಿವೃತ್ತ ಗ್ರಂಥಪಾಲಕ ವಿ.ಜಿ. ಹಿಟ್ಟಿನಗಿ, ಮೀನುಗಾರಿಕೆ ಇಲಾಖೆ ನಿವೃತ್ತ ಉಪನಿರ್ದೇಶಕ ಸಿ.ಜೆ. ಪೂಜಾರಿ ಇದ್ದರು.

ವಿದ್ಯಾರ್ಥಿನಿ ಅಕ್ಷತಾ ಹುಕ್ಕೇರಿ ಪ್ರಾರ್ಥಿಸಿದರು. ಡಾ.ಸಾಹುಕಾರ ಕಾಂಬ್ಳೆ ಸ್ವಾಗತಿಸಿದರು. ಡಾ.ಮಲ್ಲೇಶ ದೊಡ್ಡಲಕ್ಕಣ್ಣವರ ನಿರೂಪಿಸಿದರು. ಉಪನ್ಯಾಸಕ ಸಚಿನ್ ಹಿರೇಮಠ ವಂದಿಸಿದರು.

ಅನೇಕ ಪುಸ್ತಕ

ಅಧ್ಯಯನ ಪೀಠದಿಂದ ಇನ್ನೂ ಅನೇಕ ಪುಸ್ತಕಗಳನ್ನು ಹೊರತರುತ್ತಿದ್ದೇವೆ. ಮೌಖಿಕ ದಾಖಲೆಗಳನ್ನು ಸಂಗ್ರಹಿಸಿ ಪ್ರಕಟಿಸುವ ಯೋಜನೆ ಹಾಕಿಕೊಂಡಿದ್ದೇವೆ.

–ಡಾ.ರಮೇಶ್, ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠ, ಆರ್‌ಸಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT