ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಕೃತಿಗಳು ಇಂಗ್ಲಿಷ್‌ಗೆ ಅನುವಾದಗೊಳ್ಳಲಿ: ಎಚ್‌.ಎಸ್.ವೆಂಕಟೇಶಮೂರ್ತಿ ಆಶಯ

Last Updated 8 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಳಗಾವಿ: ‘ಕನ್ನಡದ ಮಹತ್ವದ ಕೃತಿಗಳು ಇಂಗ್ಲಿಷ್‌ಗೆ ಅನುವಾದಗೊಳ್ಳಬೇಕು’ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರೂ ಆಗಿರುವ ಹಿರಿಯ ಕವಿ ಡಾ.ಎಚ್‌.ಎಸ್. ವೆಂಕಟೇಶಮೂರ್ತಿ ಹೇಳಿದರು.

ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನದಿಂದ ಇಲ್ಲಿನ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಯುವ ಕಾವ್ಯ–ಕಥಾ–ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಅಖಿಲ ಭಾರತ ಮಟ್ಟದ ಮಾನ್ಯತೆ ಸಿಗುವಂತಾಗಲು ಕನ್ನಡದ ಕೃತಿಗಳು ಇಂಗ್ಲಿಷ್‌ಗೆ ಅನುವಾದವಾಗಬೇಕು. ಡಿವಿಜಿ ಅವರ ಮಂಕುತಿಮ್ಮನ ಕಗ್ಗಕ್ಕೆ ಜ್ಞಾನಪೀಠ ಪ್ರಶಸ್ತಿ‌ ಸಿಗಲಿಲ್ಲ. ಅದು ಇಂಗ್ಲಿಷ್‌ನಲ್ಲಿ ಇರಲಿಲ್ಲ ಎನ್ನುವುದೇ ಕಾರಣವಾಗಿತ್ತು. ಆನಂದಕಂದರ (ಬೆಟಗೇರಿ ಕೃಷ್ಣಶರ್ಮ) ವಿಷಯದಲ್ಲೂ ಇದೇ ರೀತಿಯಾಗಿದೆ. ಹೀಗಾಗಿ, ಮಹತ್ವದ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸುವ ಕೆಲಸ ಹೆಚ್ಚಾಗಿ ನಡೆಯಬೇಕು. ಇಂಗ್ಲಿಷ್ ಭಾಷೆಯು ಕನ್ನಡದ ಪ್ರತಿಷ್ಠೆ ಮೇಲೆತ್ತಲು ಮಹತ್ವದ ಸಾಧನವಾಗಿದೆ. ಕನ್ನಡವು ಇಂಗ್ಲಿಷ್ ಮೇಲೆ ಸವಾರಿ ಮಾಡಬೇಕು. ಇಂಗ್ಲಿಷ್‌ ಕನ್ನಡದ ಪಲ್ಲಕ್ಲಿಯಾಗಬೇಕು’ ಎಂದು ಆಶಿಸಿದರು.

ಕನ್ನಡದ ಕ್ರಿಯಾಶಕ್ತಿ ನಾಶವಾಗಿಲ್ಲ:‘ಆಧುನಿಕ ಭಾರತಕ್ಕೆ ಆನಂದಕಂದರ ಕೊಡುಗೆ ಏನು ಎನ್ನುವುದನ್ನು ಇಡೀ ಜಗತ್ತಿಗೆ ತಿಳಿಸಬೇಕಾಗಿದೆ. ಹೀಗಾಗಿ ಅವರ ರಚನೆಗಳನ್ನು ಸಮರ್ಥವಾಗಿ ಇಂಗ್ಲಿಷ್‌ಗೆ ಅನುವಾದಿಸಬೇಕು. ಈ ನಿಟ್ಟಿನಲ್ಲಿ ಪ್ರತಿಷ್ಠಾನ ಹೆಜ್ಜೆ ಇಟ್ಟಿರುವುದು ಅಭಿನಂದನಾರ್ಹ’ ಎಂದರು.

‘ನಾವೆಷ್ಟೇ ಹೇಳಿದರೂ, ಮುದಿತನದಲ್ಲಿ ಉತ್ಸಾಹ ಇರುವುದಿಲ್ಲ. ವಯಸ್ಸಾದಂತೆ, ಸಾಹಿತ್ಯದ ಮಾತೃಶಕ್ತಿಯಾದ ನೆನಪು ಅಥವಾ ಸ್ಮರಣೆ ಕಡಿಮೆಯಾಗುತ್ತಾ ಹೋಗುತ್ತದೆ. ಆಗ ಸೃಜನಶೀಲ ಶಕ್ತಿಯೂ ಕುಂದುತ್ತದೆ. ಕವಿ, ಸಾಹಿತಿಗಳಿಗೆ ಇಂದ್ರಿಯಗಳು ಚುರುಕಾಗಿರಬೇಕಾಗುತ್ತದೆ’ ಎಂದರು.

‘ಕನ್ನಡದ ಕ್ರಿಯಾಶಕ್ತಿ ನಾಶವಾಗಿಲ್ಲ ಹಾಗೂ ಆತ್ಮಶಕ್ತಿ ಇನ್ನೂ ಇದೆ ಎನ್ನುವುದನ್ನು ಯುವ ಬರಹಗಾರರು ನಿರೂಪಿಸುತ್ತಿದ್ದಾರೆ. ಬರೆಯುತ್ತಿರುವ ತರುಣ, ತರುಣಿಯರನ್ನು ನೋಡಿದರೆ ಆಶಾಭಾವ ಮೂಡುತ್ತದೆ. ಇದಕ್ಕಾಗಿ ಯುವಜನರನ್ನು ಪ್ರೋತ್ಸಾಹಿಸಬೇಕು’ ಎದು ಸಲಹೆ ನೀಡಿದರು.

‘ಕನ್ನಡದ ಶಕ್ತ ಪರಂಪರೆಯು ಹೊಸ ಲೇಖಕರನ್ನು ಆಸೆಗಣ್ಣಿನಿಂದ‌ ನೋಡುತ್ತಿದೆ’ ಎಂದರು.

ನೊಬೆಲ್‌ಗೆ ಸಿದ್ಧತೆ ಬೇಕು:ವಿಮರ್ಶಕ ಪ್ರೊ.ಸಿ. ನಾಗಣ್ಣ ಮಾತನಾಡಿ, ‘ಕನ್ನಡ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ದೊರೆಯಲು ಅಗತ್ಯವಾದ ಅನುವಾದ ಹಾಗೂ ಪೂರ್ವಸಿದ್ಧತೆಯ ಅಗತ್ಯವಿದೆ’ ಎಂದು ಅವರು ರಾಷ್ಟ್ರಕವಿ ಕುವೆಂಪು ಅವರಿಗೆ ನೊಬೆಲ್‌ ಸಿಗುವಂತೆ ಮಾಡಲು ತರಾತುರಿಯಲ್ಲಿ ನಡೆದಿದ್ದ ಅನುವಾದ ಕಾರ್ಯದ ಪ್ರಸಂಗವನ್ನು ನೆನಪಿಸಿದರು.

‘ಮೈಸೂರು ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದಲ್ಲಿ 600ಕ್ಕೂ ಹೆಚ್ಚು ಜನ ಪ್ರಮಾಣಪತ್ರ ಪಡೆದುಕೊಂಡು ಹೋಗಿದ್ದಾರೆ. ಆದರೆ, ನಾಡಿನಲ್ಲಿ ಭಾಷಾಂತರಕಾರರು ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಭಾಷಾಂತರ ವಿಷಯದಲ್ಲಿ ತರಬೇತಿ ಹಾಗೂ ಪದವಿ ಪಡೆದವರು ಅದೇ ಕ್ಷೇತ್ರದಲ್ಲಿ ಮುಂದುವರಿಯಬೇಕು’ ಎಂದು ಸಲಹೆ ನೀಡಿದರು.

‘ಪ್ರಸ್ತುತ ಇಂಗ್ಲಿಷ್ ಭಾಷೆಯು ಸಮುದ್ರದಂತೆ ನಮ್ಮನ್ನು ಸುತ್ತುವರಿದಿದೆ. ಹೀಗಾಗಿ ಕನ್ನಡದ ಉತ್ಕೃಷ್ಟ ಸಾಹಿತ್ಯ ಇಂಗ್ಲಿಷ್ ಹಾಗೂ ಸ್ಪ್ಯಾನಿಷ್‌ನಂಥ ಭಾಷೆಗಳಿಗೆ ಭಾಷಾಂತರಗೊಳ್ಳಬೇಕು’ ಎಂದು ಪ್ರತಿಪಾದಿಸಿದರು.

ಆನಂದಕಂದ ಕೃತಿಯ ಇಂಗ್ಲಿಷ್ ಅನುವಾದ ಕೃತಿ (ಅನುವಾದ: ಶಶಿಧರ ವೈದ್ಯ) ಬಿಡುಗಡೆ ಮಾಡಲಾಯಿತು. ಸಮಕಾಲೀನ ಕನ್ನಡ ಕಾವ್ಯ, ಸಣ್ಣಕಥೆ ಹಾಗೂ ಕಾದಂಬರಿ ವಿಚಾರ ಕುರಿತು ಚನ್ನಪ್ಪ ಅಂಗಡಿ, ಪ್ರೊ.ಮಲ್ಲಿಕಾರ್ಜುನ ಹಿರೇಮಠ ಹಾಗೂ ಡಾ.ಬಾಳಾಸಾಹೇಬ ಲೋಕಾಪುರ ಮಾತನಾಡಿದರು.

ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ರಾಘವೇಂದ್ರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆ ಆಶಾ ಕಡಕಟ್ಟಿ ಇದ್ದರು.

ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಪ್ರೊ.ಸಿ.ಕೆ. ನಾವಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ಕುಲಕರ್ಣಿ ನಿರೂಪಿಸಿದರು. ಸದಸ್ಯ ಸರಜೂ ಕಾಟ್ಕರ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT