ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: 80 ದಿನಗಳ ಅಧಿವೇಶನಕ್ಕೆ ₹ 98.80 ಕೋಟಿ ಖರ್ಚು

Last Updated 29 ಆಗಸ್ಟ್ 2021, 9:24 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ 9 ಬಾರಿ ನಡೆದಿರುವ ವಿಧಾನಮಂಡಲ ಅಧಿವೇಶನಕ್ಕೆ ₹ 98.80 ಕೋಟಿ ಖರ್ಚಾಗಿದೆ.

ಮಾಹಿತಿ ಹಕ್ಕು ಕಾಯ್ದೆಯಲ್ಲಿ ಪಡೆದಿರುವ ಈ ಮಾಹಿತಿಯನ್ನು ಮುಖಂಡ ಭೀಮಪ್ಪ ಗಡಾದ ಮಾಧ್ಯಮಕ್ಕೆ ಭಾನುವಾರ ಬಿಡುಗಡೆ ಮಾಡಿದ್ದಾರೆ.

2006ರಿಂದ 2018ರವರೆಗೆ 80 ದಿನಗಳು ಅಧಿವೇಶನ ನಡೆದಿದೆ. ದಿನವೊಂದಕ್ಕೆ ಸರಾಸರಿ ₹ 1.20 ಕೋಟಿ ವೆಚ್ಚ ಮಾಡಿರುವುದು ಸರ್ಕಾರದಿಂದ ಒದಗಿಸಿರುವ ದಾಖಲೆಗಳಿಂದ ಗೊತ್ತಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸುವರ್ಣ ವಿಧಾನಸೌಧದ ಉದ್ಘಾಟನೆ ಕಾರ್ಯಕ್ರಮಕ್ಕೆ ₹ 8 ಕೋಟಿ ವೆಚ್ಚ ಮಾಡಲಾಗಿದೆ. ಪ್ರವಾಸಿಮಂದಿರದಲ್ಲಿ ರಾಷ್ಟ್ರಪತಿ ಅವರಿಗೆ ಆಸನಕ್ಕಾಗಿ ₹ 36 ಲಕ್ಷ ವೆಚ್ಚ ವ್ಯಯಿಸಲಾಗಿದೆ. ಆಗ ಪ್ರವಾಸಿಮಂದಿರದ ಉದ್ಯಾನ ಅಭಿವೃದ್ಧಿಪಡಿಸಲು ₹ 31 ಲಕ್ಷ ಖರ್ಚು ಮಾಡಲಾಗಿದೆ.

ಅಧಿವೇಶನದಲ್ಲಿ ಪಾಲ್ಗೊಳ್ಳುವ ಪ್ರತಿ ಶಾಸಕರಿಗೆ ₹ 2ಸಾವಿರ ದಿನ ಭತ್ಯೆ, ಅವರ ಕ್ಷೇತ್ರಗಳಿಂದ ಇಲ್ಲಿಗೆ ಬರುವುದಕ್ಕಾಗಿ ಪ್ರತಿ ಕಿ.ಮೀ.ಗೆ ₹25 ಪ್ರಯಾಣ ಭತ್ಯೆ ನೀಡಲಾಗಿದೆ. ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದ ಶಾಸಕರು ಸುವರ್ಣ ವಿಧಾನಸೌಧಕ್ಕೆ ಬರಲು ಸಾರಿಗೆ ಭತ್ಯೆಯಾಗಿ ನಿತ್ಯ ₹ 5ಸಾವಿರ ಮತ್ತು ನಗರದಲ್ಲಿ ತಂಗಿದ್ದವರಿಗೆ ಸೌಧ ತಲುಪಲು ದಿನವೊಂದಕ್ಕೆ ₹ 2,500 ಭತ್ಯೆ ಕೊಡಲಾಗಿದೆ.

2017ರ ಅಧಿವೇಶನದ ವೇಳೆ ಪ್ರವಾಸಿಮಂದಿರದಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ, ನಾಲ್ವರು ಸಚಿವರು ಹಾಗೂ ಸಿಬ್ಬಂದಿಯ ಊಟ–ಉಪಾಹಾರಕ್ಕಾಗಿ ₹ 24 ಲಕ್ಷ ವ್ಯಯಿಸಲಾಗಿದೆ. ಸುವರ್ಣ ವಿಧಾನಸೌಧದ ಉದ್ಯಾನ ನಿರ್ವಹಣೆ, ಸಿವಿಲ್ ಕಾಮಗಾರಿ ಹಾಗೂ ವಿದ್ಯುತ್‌ ಬಿಲ್‌ಗಾಗಿ 2017ರ ಏಪ್ರಿಲ್‌ವರೆಗೆ ₹ 8 ಕೋಟಿ ವೆಚ್ಚವಾಗಿದೆ. ಇದೇ ಅವಧಿಯಲ್ಲಿ ಕಟ್ಟಡದ ಪಾಚಿ ತೊಳೆಯಲು ₹ 24 ಲಕ್ಷ ಖರ್ಚಾಗಿದೆ ಎಂದು ಮಾಹಿತಿ ನೀಡಲಾಗಿದೆ.

‘ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಿಲ್ಲ. ಆದರೆ, ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಲಾಗಿದೆ. ಮುಂಬರುವ ಅಧಿವೇಶನವು ಪ್ರತಿಭಟನೆ ನಡೆಸುವವರ ಮನವಿ ಸ್ವೀಕರಿಸುವ ಕಾರ್ಯಕ್ರಮ ಆಗಬಾರದು. ಈ ಭಾಗದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಕಾಳಜಿ ವಹಿಸಬೇಕು. ಸಚಿವ ಸಂಪುಟ ಸಭೆಗಳನ್ನು ಇಲ್ಲಿಯೇ ನಡೆಸುವಂತಾಗಬೇಕು. ರಾಜ್ಯಮಟ್ಟದ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕು’ ಎಂದು ಗಡಾದ ಒತ್ತಾಯಿಸಿದ್ದಾರೆ.

ಖರ್ಚು–ವೆಚ್ಚ

ವರ್ಷ;ಮೊತ್ತ(₹ ಕೋಟಿಗಳಲ್ಲಿ)

2006;5

2009;12.33

2012;7.39

2013;14.40

2014;10.09

2015;6.95

2016;7.20

2017;21.57

2018;13.85

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT