ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಸೋಲಿಸಿದ್ದು ಬಿಜೆಪಿಯೇ?

ಬಿಜೆಪಿಗೆ ಬಿದ್ದ ಒಳಪೆಟ್ಟು, ಮತ್ತೆ ಕ್ಷೇತ್ರದಲ್ಲಿ ಹಿಡಿದ ಸಾಧಿಸಿದ ಪಟ್ಟಣ
Published 16 ಮೇ 2023, 19:31 IST
Last Updated 16 ಮೇ 2023, 19:31 IST
ಅಕ್ಷರ ಗಾತ್ರ

ಇಮಾಮ್‌ಹುಸೇನ್‌ ಗೂಡುನವರ

ರಾಮದುರ್ಗ: ರಾಮದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅತೃಪ್ತ ಗುಂಪಿನ ಬಲದಿಂದಲೇ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಪಟ್ಟಣ ಗೆಲುವು ಸಾಧಿಸಿದರೇ?

-ಕ್ಷೇತ್ರದ ತುಂಬೆಲ್ಲ ಇಂಥದ್ದೊಂದು ಚರ್ಚೆ ನಡೆದಿದೆ. 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಹಾದೇವಪ್ಪ ಯಾದವಾಡ ವಿರುದ್ಧ ಸೋತಿದ್ದ ಅಶೋಕ ಪಟ್ಟಣ, ಈ ಬಾರಿ 11,730 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಮುನಿಸಿಕೊಂಡಿದ್ದ ಮಹಾದೇವಪ್ಪ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಪಕ್ಷದ ನಾಯಕರು ಮನವೊಲಿಸಿದ್ದರಿಂದ ಉಮೇದುವಾರಿಕೆ ಹಿಂದಕ್ಕೆ ಪಡೆದರು. ಆದರೆ, ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲು ಕ್ಷೇತ್ರದಲ್ಲಿ ಕಾಣಿಸಿಕೊಳ್ಳದಿರುವುದು ಮತ್ತು ಅವರ ಬಹುತೇಕ ಬೆಂಬಲಿಗರು ಕಾಂಗ್ರೆಸ್ ಪರವಾಗಿ ಕೆಲಸ ಮಾಡಿರುವುದು ಇಂತಹ ಸಂಶಯಗಳಿಗೆ ಕಾರಣವಾಗಿದೆ.

ಒಳಪೆಟ್ಟಿನಿಂದ ಕೈತಪ್ಪಿದ ಸ್ಥಾನ: ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಈ ಬಾರಿಯೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ತಮ್ಮ ಸಾಂಪ್ರದಾಯಿಕ ಎದುರಾಳಿಯಾಗಿದ್ದ ಪಟ್ಟಣ ಎದುರು ಗೆಲುವಿನ ಓಟ ಮುಂದುವರಿಸಲು ಕಸರತ್ತು ನಡೆಸಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಚಿಕ್ಕರೇವಣ್ಣ ಅವರಿಗೆ ಟಿಕೆಟ್ ಕೊಟ್ಟಿತು. ಇದರಿಂದ ಅಸಮಾಧಾನಗೊಂಡು ಬಂಡಾಯದ ಬಾವುಟ ಹಾರಿಸಿದ್ದ ಮಹಾದೇವಪ್ಪ ಅವರ ಮನವೊಲಿಸುವಲ್ಲಿ ಬಿಜೆಪಿ ನಾಯಕರು ಮೇಲ್ನೋಟಕ್ಕೆ ಸಫಲವಾಗಿದ್ದರು. ಆದರೆ, ಬಿಜೆಪಿಗೆ ಒಳಪೆಟ್ಟು ಬಿತ್ತು. ಹಾಲಿ-ಮಾಜಿ ಶಾಸಕರ ದೋಸ್ತಿಯಿಂದಾಗಿಯೇ ಕಾಂಗ್ರೆಸ್ ಗೆದ್ದಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಪಕ್ಷಕ್ಕೆ ಬಲ ತಂದಿತು. ಪಟ್ಟಣ ಶಾಸಕರಾಗಿದ್ದ ಎರಡು ಅವಧಿಗಳಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳು ಗೆಲುವಿಗೆ ಸಹಕಾರಿಯಾದವು ಎಂಬುದು ಮೂಲಗಳ ಮಾಹಿತಿ.

ಕೈಹಿಡಿಯದ ಸಾಮಾಜಿಕ ಸೇವೆ: 2019ರಲ್ಲಿ ಮಲಪ್ರಭಾ ನದಿ ಪ್ರವಾಹದಿಂದ ರಾಮದುರ್ಗ ತತ್ತರಿಸಿತ್ತು. ಮಾರನೇ ವರ್ಷ ಕೊರೊನಾ ಹಾವಳಿಯಿಂದ ಸಾಕಷ್ಟು ನೋವು ಅನುಭವಿಸಿದ್ದರು. ಆ ಎರಡೂ ಸಂಕಷ್ಟ ಸಮಯದಲ್ಲಿ ರಾಮದುರ್ಗ ಕ್ಷೇತ್ರದ ಜನರಿಗೆ ಚಿಕ್ಕರೇವಣ್ಣ ನೆರವಾಗಿದ್ದರು. ಹಾಗಾಗಿ ಸಾಮಾಜಿಕ ಸೇವೆ ನಿಶ್ಚಿತವಾಗಿಯೂ ಕೈಹಿಡಿಯುತ್ತದೆ ಎಂಬ ವಿಶ್ವಾಸದಲ್ಲಿದ್ದರು. ಆದರೆ, ಬಿಜೆಪಿಯಲ್ಲಿ ಉಂಟಾದ ಒಡಕಿನಿಂದಾಗಿ ಅವರು ಗೆಲುವು ದಕ್ಕಲಿಲ್ಲ.

ಅಶೋಕ ಪಟ್ಟಣ
ಅಶೋಕ ಪಟ್ಟಣ
ಮಹಾದೇವಪ್ಪ ಯಾದವಾಡ
ಮಹಾದೇವಪ್ಪ ಯಾದವಾಡ
ಕಾಂಗ್ರೆಸ್‌ಗೆ ಮತ ನೀಡಿ ನನ್ನನ್ನು ಗೆಲ್ಲಿಸಿದ್ದಾರೆ. ಸ್ವಾಭಿಮಾನ ಎತ್ತಿ ಹಿಡಿದಿದ್ದಾರೆ. ಅವರ ನಿರೀಕ್ಷೆಯಂತೆ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಉದ್ಯೋಗ ಸೃಷ್ಟಿ ನೀರಾವರಿ ಕ್ಷೇತ್ರದ ಸಬಲೀಕರಣಕ್ಕೆ ಒತ್ತು ಕೊಡುತ್ತೇನೆ
-ಅಶೋಕ ಪಟ್ಟಣ ಶಾಸಕ ರಾಮದುರ್ಗ
ನಾನು ಗೆಲ್ಲಲು ಸಾಕಷ್ಟು ಅವಕಾಶಗಳು ಇದ್ದವು. ಆದರೆ ನಮ್ಮದೇ ಪಕ್ಷದವರು ಕುತಂತ್ರ ಮಾಡಿದರು. ಈ ಬಗ್ಗೆ ಪಕ್ಷದ ಹೈಕಮಾಂಡ್‌ ಮುಂದೆ ಎಲ್ಲ ವಿವರ ನೀಡುತ್ತೇನೆ.
-ಚಿಕ್ಕರೇವಣ್ಣ ಬಿಜೆಪಿ ಪರಾಜಿತ ಅಭ್ಯರ್ಥಿ

ಚಿಕ್ಕರೇವಣ್ಣ ಕರೆತಂದಿದ್ದು ಯಾರು?‌

ಬೆಂಗಳೂರು ಉದ್ಯಮಿ ಚಿಕ್ಕರೇವಣ್ಣ ಅವರನ್ನು ಕೋವಿಡ್‌ ಸಂದರ್ಭದಲ್ಲಿ ಕ್ಷೇತ್ರಕ್ಕೆ ಪರಿಚಯಿಸಲಾಯಿತು. ಸಾಮಾಜಿಕ ಕಾರ್ಯಗಳ ಮೂಲಕ ಅವರು ಮನೆ ಮಾತಾದರು. ಆದರೆ ಚಿಕ್ಕರೇವಣ್ಣ ಅವರನ್ನು ದಕ್ಷಿಣ ಧ್ರುವದಿಂದ ಉತ್ತರಕ್ಕೆ ಕರೆತಂದಿದ್ದು ಯಾರು? ಎಂಬ ಪ್ರಶ್ನೆಯೂ ಈಗ ಎಲ್ಲೆಡೆ ಕಾಡುತ್ತಿದೆ. ಆರಂಭದಲ್ಲಿ ಚಿಕ್ಕರೇವಣ್ಣ ಕಾಂಗ್ರೆಸ್‌ ಟಿಕೆಟ್‌ ಕೇಳಿದ್ದರು. ನಾಯಕರ ಬೆನ್ನಿಗೆ ಬಿದ್ದಿದ್ದರು. ಆದರೆ ಬಿಜೆಪಿಗೆ ಯಾವಾಗ ಹೋದರು ಯಾವಾಗ ಟಿಕೆಟ್‌ ಗಿಟ್ಟಿಸಿಕೊಂಡರು ಎಂಬುದೇ ಗೊತ್ತಾಗಲಿಲ್ಲ. ಹೀಗಾಗಿ ಅವರನ್ನು ಕ್ಷೇತ್ರಕ್ಕೆ ಕರೆತಂದು ಎದುರಾಳಿಯನ್ನು ಮಣಿಸಲು ನಿಂತಿದ್ದು ಕಾಂಗ್ರೆಸ್‌ನವರೋ ಅಥವಾ ಬಿಜೆಪಿಯವರೋ ಎಂಬುದು ಇನ್ನೂ ನಿಗೂಢವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT