ಗುರುವಾರ , ಜುಲೈ 7, 2022
22 °C

ಎಸಿಬಿ ರದ್ದುಗೊಳಿಸಿ, ಲೋಕಾಯುಕ್ತ ಬಲಗೊಳಿಸಿ: ಕರ್ನಾಟಕ ರಾಷ್ಟ್ರ ಸಮಿತಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದುಪಡಿಸಬೇಕು ಮತ್ತು ಲೋಕಾಯುಕ್ತ ಬಲಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದವರು ತಾಲ್ಲೂಕಿನ ಸುವರ್ಣ ವಿಧಾನಸೌಧದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

‘ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಎಸಿಬಿಯು ಕೇವಲ ಕೆಳಹಂತದ ಕೆಲವೇ ಅಧಿಕಾರಿಗಳು ಅಥವಾ ನೌಕರರ ಮೇಲೆ ದಾಳಿ ಮಾಡುತ್ತದೆ. ಆದರೆ, ನಂತರ ಬಹುತೇಕ ಪ್ರಕರಣಗಳಲ್ಲಿ ಶಿಕ್ಷೆಯಾಗುವುದಿಲ್ಲ. ಇನ್ನು ಭ್ರಷ್ಟ ಐಎಎಸ್‌ ಮತ್ತು ಐಪಿಎಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಹಾಗೂ ಪ್ರಕರಣ ದಾಖಲಿಸಿದ ಉದಾಹರಣೆಗಳಿಲ್ಲ. ದೂರು ಕೊಟ್ಟರೆ ಸರಿಯಾದ ಸಾಕ್ಷಿಗಳಿಲ್ಲ ಎಂದು ಮುಚ್ಚಿ ಹಾಕಲಾಗುತ್ತಿದೆ’ ಎಂದು ಆರೋಪಿಸಿದರು.

‘4 ವರ್ಷಗಳಲ್ಲಿ ಎಸಿಬಿಯು 1,445 ಪ್ರಕರಣಗಳನ್ನು ದಾಖಲಿಸಿ, ಕೇವಲ ನಾಲ್ವರಿಗೆ ಶಿಕ್ಷೆ ಆಗುವಂತೆ ನೋಡಿಕೊಂಡಿದೆ. ಹೀಗಾಗಿ, ಇದರಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗುತ್ತಿಲ್ಲ’ ಎಂದು ದೂರಿದರು.

‘ಲೋಕಾಯುಕ್ತವನ್ನು ಬಲಪಡಿಸುವವರೆಗೂ ಪಕ್ಷದಿಂದ ಹೋರಾಟ ಮುಂದುವರಿಸಲಾಗುವುದು’ ಎಂದು ತಿಳಿಸಿದರು.

ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಬಿ. ಅರವಿಂದ, ಬಿ.ಎಸ್. ಮಲ್ಲಿಕಾರ್ಜುನ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ .ಕುಂಬಾರ ಪಾಲ್ಗೊಂಡಿದ್ದರು.

ಛಲವಾದಿ ಮಹಾಸಭಾ ಪ್ರತಿಭಟನೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಛಲವಾದಿ ಮಹಾಸಭಾದ ಪದಾಧಿಕಾರಿಗಳು ‍ಬುಧವಾರ ಪ್ರತಿಭಟನೆ ನಡೆಸಿದರು.

‘ಸುವರ್ಣ ವಿಧಾನಸೌಧದ ಎದುರು ಡಾ.ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಬೇಕು. ನಗರದಲ್ಲಿ ಛಲವಾದಿ ಸಾಂಸ್ಕೃತಿಕ ಭವನ, ವಿದ್ಯಾರ್ಥಿನಿಲಯ ಮತ್ತು ವಾಚನಾಲಯ ನಿರ್ಮಾಣಕ್ಕೆ 2 ಎಕರೆ ಜಮೀನು ಹಾಗೂ ₹ 5 ಕೋಟಿ ಅನುದಾನ ಒದಗಿಸಬೇಕು. ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ–ಮಂಡಳಿ ರಚಿಸಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ದುರ್ಗೇಶ ಮೇತ್ರಿ, ಪರಶುರಾಮ ಕಾಂಬಳೆ, ಸಂಜಯ ಕೋಲಕಾರ,‌ ಧನಪಾಲ ಅಗಸಿಮನಿ, ಸರೋಜಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು