ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಶಕಾಮತ ಫೌಂಡೇಶನ್ ಮೂಲಕ 1200 ಉದ್ಯೋಗ ಸೃಷ್ಟಿ

ನಿರುದ್ಯೋಗಿಗಳ ಬದುಕು ರೂಪಿಸಿದ ಶರದ
Last Updated 5 ಏಪ್ರಿಲ್ 2019, 19:46 IST
ಅಕ್ಷರ ಗಾತ್ರ

ಖಾನಾಪುರ: ತಾಲ್ಲೂಕಿನ ಗುಂಜಿ ಗ್ರಾಮದ ನಿವಾಸಿ ಶರದ ಕೇಶಕಾಮತ ಎಂಬ ವಿದ್ಯಾವಂತ ಯುವಕ 15 ವರ್ಷಗಳ ಹಿಂದೆ ಪಟ್ಟ ಪರಿಶ್ರಮದ ಫಲವಾಗಿ ಇಂದು ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳ ನೂರಾರು ನಿರುದ್ಯೋಗಿಗಳು ಶಾಶ್ವತ ಉದ್ಯೋಗವನ್ನು ಹೊಂದಿ ತಮ್ಮ ಬದುಕು ರೂಪಿಸಿಕೊಂಡಿದ್ದಾರೆ.

ಶರದ ಅವರು ಕೇಶಕಾಮತ ಫೌಂಡೇಷನ್ ಮೂಲಕ ಟ್ರಾನ್ಸ್‌ಪೋರ್ಟ್, ಬ್ಯಾಂಕಿಂಗ್, ಕಟ್ಟಡ ನಿರ್ಮಾಣದ ಉದ್ಯಮಗಳನ್ನು ಪ್ರಾರಂಭಿಸಿದ್ದಾರೆ. ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳು, ಆರೋಗ್ಯ ಶಿಬಿರಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಮೂಲಕವೂ ಸಕ್ರಿಯರಾಗಿದ್ದಾರೆ. ತಾಲ್ಲೂಕಿನ ಅರಣ್ಯದಂಚಿನ ಗ್ರಾಮಗಳ ಪ್ರತಿಭಾವಂತರಿಗೆ ತಮ್ಮ ಫೌಂಡೇಷನ್ ಮೂಲಕ ನಡೆಯುವ ಉದ್ಯಮಗಳಲ್ಲಿ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ.

ಒಂದೂವರೆ ದಶಕದ ಹಿಂದೆ ಅವರು ತಮ್ಮ ಪದವಿ ವ್ಯಾಸಂಗ ಮುಗಿಸಿದ ಬಳಿಕ ಇತರರಂತೆ ನೌಕರಿಯ ಮೊರೆ ಹೋಗದೇ ಸ್ಥಳೀಯವಾಗಿ ಸಂಗ್ರಹಿಸಿದ ಸ್ವಲ್ಪ ಬಂಡವಾಳವನ್ನು ವಿನಿಯೋಗಿಸಿ ಆರ್ಥಿಕ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಸಂಸ್ಥೆಯ ಶಾಖೆಗಳನ್ನು ಗ್ರಾಮೀಣ ಭಾಗದಲ್ಲಿ ತೆರೆದು ಹಳ್ಳಿಯ ಜನರಲ್ಲಿ ಉಳಿತಾಯ ಮನೋಭಾವ ಮೂಡುವಂತೆ ಮಾಡಿದ್ದರು. ಬಳಿಕ ತಮ್ಮ ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ಸಾರಿಗೆ ಉದ್ಯಮದಲ್ಲಿ ಧುಮುಕಿ ಟ್ರಾವಲ್ಸ್ ಕ್ಷೇತ್ರದಲ್ಲಿ ಬಂಡವಾಳ ವಿನಿಯೋಗಿಸಿದ್ದರು.

ಟ್ರಾವಲ್ಸ್ ಕ್ಷೇತ್ರ ಇವರ ಕೈ ಹಿಡಿಯಿತು. 300ಕ್ಕೂ ಹೆಚ್ಚು ವಾಹನಗಳನ್ನು ಖರೀದಿಸಿ ಅವುಗಳಲ್ಲಿ ಕಾರ್ಯನಿರ್ವಹಿಸಲು ಖಾನಾಪುರ ಮತ್ತು ಬೆಳಗಾವಿ ತಾಲ್ಲೂಕುಗಳ ನಿರುದ್ಯೋಗಿ ಯುವಕರಿಗೆ ಅವಕಾಶ ನೀಡಿದರು. ಇತ್ತೀಚಿನ ವರ್ಷಗಳಲ್ಲಿ ಶ್ರೀಷಾ ಇನ್ಫೊಟೆಕ್‌ ಎಂಬ ಸಂಸ್ಥೆಯ ಮೂಲಕ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೂ ಕಾಲಿರಿಸಿ ಈ ಭಾಗದ ಗಾರೆ ಕೆಲಸದವರು, ಕಟ್ಟಡ ಕಾರ್ಮಿಕರು ಮತ್ತು ಸೆಂಟರಿಂಗ್ ಕ್ಷೇತ್ರದ 200ಕ್ಕೂ ಹೆಚ್ಚು ಯುವಕರ ಪಡೆಗೆ ಪೂರ್ಣ ಪ್ರಮಾಣದ ಉದ್ಯೋಗ ಒದಗಿಸಿದ್ದಾರೆ.

ಕಳೆದ ವರ್ಷ ಕೇಶಕಾಮತ ಫೌಂಡೇಷನ್‌ ಸಂಘಟನೆಯ ಮೂಲಕ ಸ್ಥಳೀಯವಾಗಿ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಪಟ್ಟಣದಲ್ಲಿ, ಗುಂಜಿ, ಚಾಪಗಾಂವ, ಜಾಂಬೋಟಿ ಮತ್ತು ಶಿರೋಲಿ ಗ್ರಾಮಗಳಲ್ಲಿ ಬೆಳಗಾವಿಯ ನೇತ್ರ ರಿಸರ್ಚ್‌ ಫೌಂಡೇಷನ್ ಮತ್ತು ನೇತ್ರದರ್ಶನ ಆಸ್ಪತ್ರೆಗಳ ಸಹಯೋಗದಲ್ಲಿ 10 ಉಚಿತ ನೇತ್ರ ತಪಾಸಣೆ ಶಿಬಿರ ಮತ್ತು 8 ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದಾರೆ. ಈ ಮೂಲಕ ಗ್ರಾಮೀಣ ಭಾಗದ ಬಡವರ್ಗದ ಜನರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗೆ ನೆರವಾಗಿದ್ದಾರೆ.

ಕಳೆದ ವರ್ಷ ಪಟ್ಟಣದಲ್ಲಿ ಈ ಭಾಗದ ಬಡ ಮತ್ತು ಪ್ರತಿಭಾವಂತ ಯುವಕರು, ಯುವತಿಯರಿಗಾಗಿ ಕೌಶಲ್ಯ ಅಭಿವೃದ್ಧಿ
ಮೇಳವನ್ನು ಆಯೋಜಿಸಿ ಮೇಳದಲ್ಲಿ ಭಾಗವಹಿಸಿದ್ದ 250 ನಿರುದ್ಯೋಗಿಗಳಿಗೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ವಿವಿಧೆಡೆ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ.

ಪ್ರಸ್ತುತ ಕೇಶಕಾಮತ ಅವರು 1200ಕ್ಕೂ ಹೆಚ್ಚು ಜನರಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ. ಆಕರ್ಷಕ ಸಂಬಳ, ಭತ್ಯೆ ಮತ್ತು ಉದ್ಯೋಗ ಭದ್ರತೆಗಳನ್ನು ಹೊಂದಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.

‘ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಸಣ್ಣ ಕೈಗಾರಿಕೆಗಳನ್ನು ಮತ್ತು ಉದ್ದಿಮೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಿದ್ದೇನೆ. ತಾಲ್ಲೂಕಿನ ವಿವಿಧ ಕ್ಷೇತ್ರಗಳ ಪರಿಣಿತರಿಗೆ ವಿಶೇಷ ತರಬೇತಿ ನೀಡಿ ಅವರಿಗೆ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡಿದ್ದೇನೆ’ ಎನ್ನುತ್ತಾರೆ ಶರದ ಕೇಶಕಾಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT