ಬುಧವಾರ, ಸೆಪ್ಟೆಂಬರ್ 29, 2021
21 °C

ಖಾನಾಪುರ: ಮಳೆಯ ಆರ್ಭಟ, ಸಂಪರ್ಕ ಕಳೆದುಕೊಂಡ 60 ಗ್ರಾಮಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖಾನಾಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ, ಪಾಂಡರಿ, ಮಹದಾಯಿ ನದಿಗಳು, ಕೋಟ್ನಿ, ಅಲಾತ್ರಿ, ಮಂಗೇತ್ರಿ, ಕುಂಬಾರ, ತಟ್ಟೀ, ಪಣಸೂರಿ, ಬೈಲ್, ಕಳಸಾ, ಕರೀಕಟ್ಟಿ ಹಾಗೂ ಬಂಡೂರಿ ಹಳ್ಳಗಳು ಪ್ರವಾಹೋಪಾದಿಯಲ್ಲಿ ಉಕ್ಕಿ ಹರಿಯುತ್ತಿವೆ.

ಧಾರಾಕಾರವಾಗಿ ಸುರಿಯುತ್ತಿರುವ ಜಡಿಮಳೆಗೆ ತಾಲ್ಲೂಕಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಸತತ ಮಳೆಯಿಂದಾಗಿ ತಾಲ್ಲೂಕಿನ ಕಾನನದಂಚಿನ ಕಣಕುಂಬಿ, ಗುಂಜಿ, ಲೋಂಡಾ ಮತ್ತು ಜಾಂಬೋಟಿ ಭಾಗದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ಪರಿಣಾಮ 60 ಗ್ರಾಮಗಳಿಗೆ ಮುಖ್ಯ ವಾಹಿನಿಯಿಂದ ಸಂಪರ್ಕ ಕಡಿತಗೊಂಡಿದೆ.

ತಾಲ್ಲೂಕಿನ ನಾಗರಗಾಳಿ, ಗುಂಜಿ, ಲೋಂಡಾ, ಹೆಮ್ಮಡಗಾ, ನೇರಸೆ, ನೀಲಾವಡೆ, ಜಾಂಬೋಟಿ ಮತ್ತು ಕಣಕುಂಬಿ ಅರಣ್ಯಪ್ರದೇಶದ ಬಹುತೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ನೀರು ಹರಿಯುತ್ತಿರುವ ಕಾರಣ ಸಂಚಾರ ಸಮಸ್ಯೆ ಎದುರಾಗಿದೆ.

ರಭಸದಿಂದ ಸುರಿಯುತ್ತಿರುವ ಮಳೆಯಿಂದಾಗಿ ನೀಲಾವಡೆ- ಮಳವ, ದಾರೋಳಿ-ಮೋದೆಕೊಪ್ಪ, ಕುಸಮಳಿ-ಜಾಂಬೋಟಿ, ಕರಂಬಳ-ಚಾಪಗಾಂವ, ಅಸೋಗಾ-ಭೋಸಗಾಳಿ, ತೋರಾಳಿ-ಹಬ್ಬನಹಟ್ಟಿ, ಅಮಟೆ-ಗೋಲ್ಯಾಳಿ, ಚಾಪಗಾಂವ-ಯಡೋಗಾ, ಪಾರವಾಡ-ಕಣಕುಂಬಿ, ದೇಗಾಂವ-ಹೆಮ್ಮಡಗಾ, ಮೋದೆಕೊಪ್ಪ-ಕೌಲಾಪುರವಾಡಾ ಮಾರ್ಗಗಳಲ್ಲಿರುವ ನದಿ, ಹಳ್ಳ-ಕೊಳ್ಳಗಳ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ಈ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಕಂದಾಯ ಇಲಾಖೆಯ ಮೂಲಗಳ ಪ್ರಕಾರ ಗುರುವಾರದವರೆಗೆ ಕಣಕುಂಬಿಯಲ್ಲಿ 16.8 ಸೆಂ.ಮೀ, ಜಾಂಬೋಟಿಯಲ್ಲಿ 9.5 ಸೆಂ.ಮೀ, ಅಸೋಗಾ 6.4 ಸೆಂ.ಮೀ, ಗುಂಜಿ 6.2 ಸೆಂ.ಮೀ, ಲೋಂಡಾ 7.6 ಸೆಂ.ಮೀ, ಖಾನಾಪುರ ಪಟ್ಟಣ 4 ಸೆಂ.ಮೀ, ನಾಗರಗಾಳಿ 5.8 ಸೆಂ.ಮೀ, ಕಕ್ಕೇರಿ 4.5 ಸೆಂ.ಮೀ ಮತ್ತು ಬೀಡಿ ಭಾಗದಲ್ಲಿ 4.7 ಸೆಂ.ಮೀಗಳಷ್ಟು ಮಳೆ ಸುರಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು