ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತೂರು ಉತ್ಸವ: ಕಣ್ಮನ ಸೆಳೆದ ವೈಭವದ ಮೆರವಣಿಗೆ

Published 23 ಅಕ್ಟೋಬರ್ 2023, 7:33 IST
Last Updated 23 ಅಕ್ಟೋಬರ್ 2023, 7:33 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಇಲ್ಲಿ ಕಿತ್ತೂರು ಉತ್ಸವ ಅಂಗವಾಗಿ ಸೋಮವಾರ ನಡೆದ ಜಾನಪದ ಕಲಾವಾಹಿನಿ ಮೆರವಣಿಗೆ ವೈಭವದಿಂದ ನಡೆಯಿತು. ನಾಡಿನ ವಿವಿಧೆಡೆಯಿಂದ ಬಂದಿದ್ದ ಕಲಾ ತಂಡದವರು ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಿ, ಗ್ರಾಮೀಣ ಸಂಸ್ಕೃತಿ ಅನಾವರಣಗೊಳಿಸಿದರು.

ನಾಡಿನ ವಿವಿಧೆಡೆ ಸಂಚರಿಸಿ, ಕಿತ್ತೂರಿಗೆ ಆಗಮಿಸಿದ ವಿಜಯಜ್ಯೋತಿಯನ್ನು ಜಿಲ್ಲಾ ಉಸ್ತುವಾರಿ ಅದ್ಧೂರಿಯಾಗಿ ಬರಮಾಡಿಕೊಂಡರು. ಬಳಿಕ ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಜಾನಪದ ಕಲಾವಾಹಿನಿ ಮೆರವಣಿಗೆಗೆ ಚಾಲನೆ ಕೊಟ್ಟರು. ಕಿತ್ತೂರು ರಾಜಗುರು ಸಂಸ್ಥಾನದ ಮಡಿವಾಳ ರಾಜಯೋಗೀಂದ್ರ ಸ್ಚಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದೆ ಮಂಗಲಾ ಅಂಗಡಿ, ಶಾಸಕರಾದ ಬಾಬಾಸಾಹೇಬ ಪಾಟೀಲ, ಮಹಾಂತೇಶ ಕೌಜಲಗಿ, ಆಸೀಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಹಬೀಬ್ ಶಿಲೇದಾರ ಇತರರಿದ್ದರು.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಚನ್ನಮ್ಮನ ವೃತ್ತದಿಂದ ಆರಂಭಗೊಂಡ ಮೆರವಣಿಗೆ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೋಟೆ ಆವರಣ ತಲುಪಿತು. ಸುಡು ಬಿಸಿಲಲ್ಲೂ ಜನರು ಉತ್ಸಾಹದಿಂದ ಹೆಜ್ಜೆಹಾಕಿದರು. ಕಿತ್ತೂರು ಕಲಿಗಳ ಪರವಾಗಿ ಜೈಕಾರಗಳನ್ನು ಕೂಗಿ ಸಂಭ್ರಮಿಸಿದರು.

ಕೊಂಬು ಕಹಳೆ, ಚಂಡಿವಾದ್ಯ, ಕೇರಳ ಯಕ್ಷಗಾನ, ಮಹಿಳಾ ಡೊಳ್ಳುಕುಣಿತ, ಕಂಸಾಳೆ, ಚಿಟ್ಟೆಮೇಳ, ಗಾರುಡಿ ಗೊಂಬೆ, ನಗಾರಿ, ಪಟಾ ಕುಣಿತ, ಮಹಿಳಾ ನಗಾರಿ, ಮಹಿಳಾ ವೀರಗಾಸೆ, ಗೊಂಬೆ ಕುಣಿತ, ಕಂಸಾಳೆ, ಸೋಮನ ಕುಣಿತ, ಕೋಲಾಟ, ಕರಗ ನೃತ್ಯ, ಲಂಬಾಣಿ ನೃತ್ಯ, ತಮಟೆ ನೃತ್ಯ ಗಮನಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT