ಬೆಳಗಾವಿ: ಕೊಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಘಟನೆ ಖಂಡಿಸಿ ನಗರದಲ್ಲಿ ಶನಿವಾರ ಸರಣಿ ಪ್ರತಿಭಟನೆಗಳು ನಡೆದವು. ಜಿಲ್ಲೆ ಎಲ್ಲ ಖಾಸಗಿ ಆಸ್ಪತ್ರೆಗಳು ತಮ್ಮ ಹೊರ ರೋಹೊಗಳ ವಿಭಾಗ (ಒಪಿಡಿ) ಬಂದ್ ಮಾಡಿದವು. ಸಿಬ್ಬಂದಿ ಇಡೀ ದಿನ ಧರಣಿ ನಡೆಸಿದರು.
ಇಲ್ಲಿನ ಭಾರತೀಯ ವೈದ್ಯಕೀಯ ಸಂಘ, ಭಿಮ್ಸ್ ವೈದ್ಯಾಧಿಕಾರಿಗಳು– ವಿದ್ಯಾರ್ಥಿಗಳು, ಆಯುಷ್ ಫೆಡರೇಷನ್ ಆಫ್ ಇಂಡಿಯಾ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಸಂಚಾರ ಬಂದ್ ಮಾಡಲಾಯಿತು. ಅತ್ಯಾಚಾರಿಯನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ವೈದ್ಯರು, ವೈದ್ಯಕೀಯ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.
ನಾಟಕ ಪ್ರದರ್ಶನ: ಜಿಲ್ಲಾಸ್ಪತ್ರೆ ಆವರಣದಿಂದ ಮರವಣಿಗೆ ನಡೆಸಿದ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು, ರಾಣಿ ಚನ್ನಮ್ಮವೃತ್ತಕ್ಕೆ ಆಗಮಿಸಿ ಧರಣಿ ನಡೆಸಿದರು. ಪ್ಲೇ ಕಾರ್ಡ್‌ಗಳನ್ನು ಪ್ರದರ್ಶಿಸಿ, ನಿರಂತರ ಘೋಷಣೆ ಮೊಳಿಸಿದರು. ಚನ್ನಮ್ಮವೃತ್ತದಲ್ಲಿ ಕಿರು ನಾಟಕ ಪ್ರದರ್ಶನ ಮಾಡಿ ಅತ್ಯಾಚಾರ ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಿದರು.
‘ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹೇಯ ಕೃತ್ಯ. ಸಮಾಜವೇ ತಲೆ ತಗ್ಗಿಸುವಂಥದ್ದು. ಪ್ರಾಣ ಉಳಿಸುವ ವೈದ್ಯರೇ ತಮಗೆ ಪ್ರಾಣ ರಕ್ಷಣೆಗಾಗಿ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಡಾ.ವಂದನಾ ಪ್ರಭಾಕರ ಬೇಸರ ವ್ತಕ್ತಪಡಿಸಿದರು.
ಡಾ.ಅರುಣಾ ಭಾವನೆ ಮಾತನಾಡಿ, ‘ಸಮಾಜದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಬೇಕು. ಅದರಲ್ಲಿಯೂ ರಾತ್ರಿ ಎಲ್ಲ ಆಸ್ಪತ್ರೆಗಳಲ್ಲಿ ಮಹಿಳೆಯರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕೊಲೆಯಾದ ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು’ ಎಂದರು.
ಗಲ್ಲು ಶಿಕ್ಷೆಗೆ ಆಗ್ರಹ: ‘ದೇಶದಲ್ಲಿ ಪದೇಪದೇ ಅತ್ಯಾಚಾರ, ಕೊಲೆ ಘಟನೆಗಳು ಮರುಕಳಿಸುತ್ತಿವೆ. ಸರ್ಕಾರ ಕಠಿಣ ಕಾನೂನು ಜಾರಿಗೊಳಿಸುವ ಮೂಲಕ ಮುಂದೆ ಯಾರೂ ಇಂಥಹ ಕೃತ್ಯ ಎಸಗದಂತೆ ಎಚ್ಚರಿಕೆಯ ಸಂದೇಶ ನೀಡಬೇಕು’ ಎಂದು ಆಯುಷ್ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ಪದ್ಮರಾಜ ಪಾಟೀಲ ಆಗ್ರಹಿಸಿದರು.
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರವೀಂದ್ರ ಅನಗೋಳಕರ ಮಾತನಾಡಿ, ‘ಇಂತಹ ಹೇಯ ಕೃತ್ಯಗಳು ಇದೀಗ ವೈದ್ಯರ ಮೇಲೆಯೂ ನಡೆಯುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಪ್ರತ್ಯೇಕ ಕಾನೂನು ರಚಿಸಿ, ವೈದ್ಯರಿಗೆ ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿದರು.
ಡಾ.ಎ.ಎಸ್.ಕೋಣೆ, ಡಾ.ವಿನೋದ್ ಪಟ್ಟಣ, ಡಾ.ವಿಶ್ವನಾಥ್ ಕುಲಕರ್ಣಿ, ಡಾ.ಪದ್ಮರಾಜ್ ಪಾಟೀಲ, ಡಾ.ಸುರೇಶ ಚೌಗಲಾ, ಶ್ರೀಕಾಂತ ಕೊಂಕಣಿ ಡಾ.ಖೊತ್ ನೇತೃತ್ವ ವಹಿಸಿದ್ದರು.
ಒಪಿಡಿಗಳು ಖಾಲಿಖಾಲಿ
ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಕೊಲೆ ಖಂಡಿಸಿ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಬಂದ್ ಮಾಡಿ ಪ್ರತಿಭಟಿಸಲಾಯಿತು. ಯಾವಾಗಲೂ ರೋಗಿಗಳಿಂದ ಗಿಜಿಗುಡುತ್ತಿದ್ದ ಇಲ್ಲಿನ ಜಿಲ್ಲಾಸ್ಪತ್ರೆಯ ಒಪಿಡಿ ಶನಿವಾರ ಖಾಲಿಯಾಗಿತ್ತು. ಕೆಎಲ್‌ಇ ಆಸ್ಪತ್ರೆಯೂ ಸೇರಿದಂತೆ ಹಲವು ಖಾಸಗಿ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದ ಕೊಠಡಿಗಳು ಬಿಕೊ ಎಂದವು. ಒಳರೋಗಿಗಳ ವಿಭಾಗ ಅಪಘಾತ ಮತ್ತು ತುರ್ತುಸೇವೆ ವಿಭಾಗಗಳು ಎಂದಿನಂತೆ ಸೇವೆ ನೀಡಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.