ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರಿನ ದೇವತೆಗೆ ಕುರಿಮರಿ, ಕೋಳಿಪಿಳ್ಳಿ ಅರ್ಪಿಸಿ ಹರಕೆ ತೀರಿಸಿದ ಮಹಿಳೆಯರು

ಮಂಗಾಯಿ ಜಾತ್ರೆಗೆ ಹರಿದುಬಂದ ಭಕ್ತಸಾಗರ
Last Updated 26 ಜುಲೈ 2022, 8:24 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ವಡಗಾವಿಯ ಪಾಟೀಲ ಗಲ್ಲಿಯಲ್ಲಿರುವ ಮಂಗಾಯಿ ದೇವಿ ಜಾತ್ರೆಗೆ ಮಂಗಳವಾರ ಅಪಾರ ಸಂಖ್ಯೆಯ ಭಕ್ತರ ನಡುವೆ ಚಾಲನೆ ದೊರೆಯಿತು. ‘ತವರು ಮನೆಯ ದೇವತೆ’ ಎಂದೇ ಪರಿಗಣಿಸಲಾಗುವ ಈ ದೇವಿಯ ಜಾತ್ರೆಗೆ ಹೆಣ್ಣು ಮಕ್ಕಳೇ ಹೆಚ್ಚಾಗಿ ಸೇರುತ್ತಾರೆ.

ಬೆಳಗಾವಿ ಜಿಲ್ಲೆಯಿಂದ ಬೇರೆ ಬೇರೆ ಊರುಗಳಿಗೆ ಮದುವೆಯಾಗಿ ಹೋದ ಬಹುಪಾಲು ಹೆಣ್ಣುಮಕ್ಕಳು ಈ ಜಾತ್ರೆಗೆ ಬರುವುದು ಸಂಪ್ರದಾಯ. ಐದು ದಿನ ನಡೆಯುವ ಉತ್ಸವದಲ್ಲಿ ಜಿಲ್ಲೆ, ನೆರೆಯ ಜಿಲ್ಲೆ, ಗೋವಾ, ಮಹಾರಾಷ್ಟ್ರದಿಂದ ಕೂಡ ಅಪಾರ ಸಂಖ್ಯೆಯ ಭಕ್ತರು ಈ ಜಾತ್ರೆಗೆ ಸೇರುತ್ತಾರೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಸಂಕ್ಷಿಪ್ತವಾಗಿದ್ದ ಈ ಜಾತ್ರೆಯನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ನಸುಕಿನ 5ರಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾದವು. ಅಭಿಷೇಕ, ಪುಷ್ಪಾಲಂಕಾರ, ಉಡಿ ತುಂಬುವ ಕಾರ್ಯಕ್ರಮಗಳನ್ನು ಭಕ್ತರು ನೆರವೇರಿಸಿದರು.

ಬೆಳಿಗ್ಗೆಯಿಂದಲೇ ಕಿಲೋ ಮೀಟರ್‌ ಉದ್ದಕ್ಕೂ ಸರದಿಯಲ್ಲಿ ನಿಂತು ಜನ ದೇವಿಯ ದರ್ಶನ ಪಡೆದರು. ಸೀರೆ, ರವಿಕೆ, ಬಳೆ, ನೈವೇದ್ಯ ಅರ್ಪಿಸಿ ಹರಕೆ ತೀರಿಸಿದರು. ಮತ್ತೆ ಕೆಲವರು ಹರಕೆ ಹೊತ್ತುಕೊಂಡರು. ಇಷ್ಟಾರ್ಥಗಳು ಈಡೇರಿದ ಹಲವು ಭಕ್ತರು ದೇವಸ್ಥಾನದ ಸುತ್ತ ‘ದೀಡ್‌ ನಮಸ್ಕಾರ’ ಹಾಕಿದರು.

ಕುರಿ, ಕೋಳಿ ಹಾರಿಸುವ ಪದ್ಧತಿ:

ಸಂಪ್ರದಾಯದಂತೆ ಈ ಬಾರಿಯೂ ಕುರಿ, ಆಡು, ಕೋಳಿಗಳನ್ನು ಅಪಾರ ಸಂಖ್ಯೆಯಲ್ಲಿ ಅರ್ಪಿಸಲಾಯಿತು. ಮಹಿಳೆಯರು, ಮಕ್ಕಳು, ವೃದ್ಧರು ಕೂಡ ಕುರಿಮರಿ ಹಾಗೂ ಕೋಳಿಪಿಳ್ಳಿಗಳನ್ನು ದೇವಸ್ಥಾನದ ಮೇಲಿನಿಂದ ಎಸೆದು ಭಕ್ತಿ ಸಮರ್ಪಿಸಿದರು.

ಮಂಗಾಯಿ ದೇವಿ ಆರಾಧಕರು ಕುರಿ, ಕೋಳಿಗಳ ಬಲಿ ಅರ್ಪಿಸುವ ಸಂಪ್ರದಾಯ ಮೊದಲಿನಿಂದಲೂ ಇದೆ. ಹೀಗಾಗಿ, ಈ ಬಾರಿಯೂ ಜಾತ್ರೆಗೂ ಮುನ್ನ ಒಂದು ವಾರದವರೆಗೆ ಆಡು, ಕುರಿ, ಕೋಳಿಗಳ ಖರೀದಿ ಭರಾಟೆ ಇತ್ತು.

ದಿನದ 24 ಗಂಟೆಯೂ ದೇವಿಗೆ ಉಡಿ ತುಂಬುವ, ನೈವೇದ್ಯ ಅರ್ಪಿಸುವ, ಭಕ್ತರಿಗೆ ಮಾಂಸಾಹಾರದ ಊಟ ಹಾಕುವ ಪದ್ಧತಿ ಇಲ್ಲಿ ಮೊದಲಿನಿಂದಲೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT