ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ: ಜಾತ್ರೆಗೆ ಸಜ್ಜಾದ ಮಸಗುಪ್ಪಿ

ಮಹಾಲಕ್ಷ್ಮಿ ದೇವಿ, ಬಸವೇಶ್ವರ ಜಾತ್ರೆ: ವಿವಿಧ ಕಾರ್ಯಕ್ರಮ ಇಂದಿನಿಂದ
Published 26 ಫೆಬ್ರುವರಿ 2024, 1:16 IST
Last Updated 26 ಫೆಬ್ರುವರಿ 2024, 1:16 IST
ಅಕ್ಷರ ಗಾತ್ರ

ಮೂಡಲಗಿ: ತಾಲ್ಲೂಕಿನ ಮಸಗುಪ್ಪಿಯಲ್ಲಿ ಫೆ.26ರಿಂದ 28ರವರೆಗೆ ಮಹಾಲಕ್ಷ್ಮಿ ದೇವಿ ಮತ್ತು ಬಸವೇಶ್ವರ ಜಾತ್ರೆ ಸಡಗರದಿಂದ ಜರುಗಲಿದೆ. ಇದಕ್ಕಾಗಿ ಸುಣ್ಣ–ಬಣ್ಣಗಳಿಂದ ಮನೆಗಳನ್ನು ಸಿಂಗರಿಸಿದ ಗ್ರಾಮಸ್ಥರು, ಜಾತ್ರೆಯ ತೇರು ಎಳೆಯಲು ಸಜ್ಜಾಗಿದ್ದಾರೆ.

ಘಟಪ್ರಭಾ ನದಿಯ ತಟದಲ್ಲಿ ಪ್ರತಿಷ್ಠಾಪಿಸಿದ ಮಹಾಲಕ್ಷ್ಮಿ ದೇವಿ ಮೂರ್ತಿ ಮೊದಲು ಮಲೆನಾಡಿನ ಕಾಡಿನಲ್ಲಿತ್ತು. ಇಲ್ಲಿನ ಕೆಂಚಣ್ಣವರ ಮನೆತನದವರು ಮಲೆನಾಡಿನಲ್ಲಿ ಅಕ್ಕಿ ಖರೀದಿಸಿ, ಮರಳಿ ಬರುವಾಗ ಕಾಡಿನಲ್ಲಿ ಕಂಗೊಳಿಸುತ್ತಿದ್ದ ಮೂರ್ತಿಯನ್ನು ತಮ್ಮ ವಾಹನದಲ್ಲಿ ಹಾಕಿಕೊಂಡು ಊರಿಗೆ ತಂದರು. ಆದರೆ, ಕೆಂಚಣ್ಣವರ ಅವರಿಗೂ ಗೊತ್ತಾಗದಂತೆ ಗ್ರಾಮದ ಈಶಾನ್ಯ ಭಾಗದಲ್ಲಿ ಮೂರ್ತಿ ಜಾರಿ ಬಿದ್ದಿತ್ತು.

ಹಲವು ವರ್ಷಗಳ ನಂತರ ಗ್ರಾಮದ ಭರಮಪ್ಪ ಅಜ್ಜನ ಕನಸಿನಲ್ಲಿ ಬಂದು, ‘ನಾನು ಮಲೆನಾಡಿನ ಕೊರವಿ ಇದ್ದೇನೆ. ನನ್ನನ್ನು ಭಕ್ತಿಯಿಂದ ಪೂಜಿಸುವವರಿಗೆ ಎಲ್ಲ ಭಾಗ್ಯ ಪ್ರಾಪ್ತಗೊಳಿಸುವೆ’ ಎಂದು ವಾಣಿಯಾಯಿತು. ಆಗ ಜಾರಿಬಿದ್ದ ಸ್ಥಳದಲ್ಲೇ ಮೂರ್ತಿ ಪ್ರತಿಷ್ಠಾಪಿಸಿ, ಗ್ರಾಮಸ್ಥರು ಪುಟ್ಟ ಗುಡಿ ನಿರ್ಮಿಸಿದರು. 1914ರಲ್ಲಿ ಘಟಪ್ರಭಾ ನದಿ ಪ್ರವಾಹದಲ್ಲಿ ಪೂಜೆ ಮಾಡುತ್ತಿದ್ದ ಸ್ಥಳ ಕೊಚ್ಚಿಕೊಂಡು ಹೋಯಿತು. ಆದರೆ, ಮೂರ್ತಿ ಮಾತ್ರ ಅದೇ ಸ್ಥಳದಲ್ಲಿ ಪವಾಡ ಸದೃಶ್ಯವಾಗಿ ಉಳಿದಿತ್ತು. ಹಾಗಾಗಿ ಅದೇ ಸ್ಥಳದಲ್ಲಿ ಹೊಸ ದೇವಸ್ಥಾನ ನಿರ್ಮಿಸಿ, ಪ್ರತಿವರ್ಷ ಭಾರತ ಹುಣ್ಣಿಮೆಯಲ್ಲಿ ಜಾತ್ರೆ ನಡೆಸಿಕೊಂಡು ಬಂದಿದ್ದಾರೆ.

ಜೀರ್ಣೋದ್ಧಾರ: ₹3 ಕೋಟಿಗೂ ಅಧಿಕ ವೆಚ್ಚದಲ್ಲಿ ಮಹಾಲಕ್ಷ್ಮಿ ದೇವಸ್ಥಾನವನ್ನು ಗ್ರಾಮಸ್ಥರು ಜೀರ್ಣೋದ್ಧಾರಗೊಳಿಸಿದ್ದಾರೆ. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ದೇವಸ್ಥಾನದ ಆವರಣಕ್ಕೆ ಪೇವರ್ಸ್ ಮತ್ತು ಯಾತ್ರಿ ನಿವಾಸಕ್ಕೆ ಆರ್ಥಿಕ ನೆರವು ಒದಗಿಸಿದ್ದಾರೆ. ವಾಸ್ತುಶಿಲ್ಪ ದೃಷ್ಟಿಯಿಂದ ಶ್ರೀಮಂತವಾದ ದೇವಸ್ಥಾನ ಕಣ್ಮನ ಸೆಳೆಯುತ್ತದೆ. ದೇವಸ್ಥಾನದಲ್ಲಿ ನಿತ್ಯವೂ ಅಂಬಲಿ ದಾಸೋಹ ಮತ್ತು ಪ್ರತಿ ಅಮಾವಾಸ್ಯೆಗೆ ಅನ್ನಪ್ರಸಾದ ಸೇವೆ ಇರುತ್ತದೆ. ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನವೂ ಇದ್ದು, ಮಹಾಲಕ್ಷ್ಮಿ ದೇವಿ ಜಾತ್ರೆಯೊಂದಿಗೆ ಬಸವೇಶ್ವರ ರಥೋತ್ಸವವನ್ನು ಜತೆಯಾಗಿಯೇ ನಡೆಸಿಕೊಂಡು ಬರುತ್ತಿರುವುದು ವಿಶೇಷ.

ಏನೇನು ಕಾರ್ಯಕ್ರಮ?: ಫೆ.26ರಂದು ಬೆಳಿಗ್ಗೆ 5 ಗಂಟೆಗೆ ಮಹಾಲಕ್ಷ್ಮಿ ದೇವಿ, ಬಸವೇಶ್ವರ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಲಿದೆ. ಮಧ್ಯಾಹ್ನ 12ಕ್ಕೆ ಅರಭಾವಿಯ ದುರದುಂಡೀಶ್ವರ ಮಠದ ಬಸವಲಿಂಗ ಸ್ವಾಮೀಜಿ ಊರನ್ನು ಪ್ರವೇಶಿಸುವರು. ಸಂಜೆ 4ಕ್ಕೆ ಟಗರಿನ ಕಾಳಗ ಸ್ಪರ್ಧೆ, 5ಕ್ಕೆ ರಥೋತ್ಸವ, ರಾತ್ರಿ 9.30ಕ್ಕೆ ದೇಶನೂರಿನ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

27 ರಂದು ಬೆಳಿಗ್ಗೆ 8ಕ್ಕೆ ಗ್ರಾಮ ದೇವತೆಗಳಿಗೆ ಉಡಿ ತುಂಬುವ ಕಾರ್ಯಕ್ರಮ, ನಂತರ ತೆರೆಬಂಡಿ ಸ್ಪರ್ಧೆ ನಡೆಯಲಿದೆ. ಹೊಸದುರ್ಗದ ಭಗೀರಥ ಪೀಠದ ಪುರಷೋತ್ತಮಾನಂದಪುರಿ ಸ್ವಾಮೀಜಿ, ಸುಣಧೋಳಿಯ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಶಾಸಕ ಬಾಲಚಂದ್ರ ಜಾರಕಿಹೊಳಿ  ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಆಗಮಿಸುವರು. ಸಂಜೆ 6ಕ್ಕೆ ವಾಲಗ ಮೇಳಗಳನ್ನು ಬರ ಮಾಡಿಕೊಳ್ಳಲಾಗುವುದು. 28ರಂದು ಬೆಳಿಗ್ಗೆ 9ಕ್ಕೆ ದಟ್ಟಿ ಕುಣಿತ, ಮಧ್ಯಾಹ್ನ 12ಕ್ಕೆ ಪಲ್ಲಕ್ಕಿ ಉತ್ಸವ ಮತ್ತು ರಥೋತ್ಸವ ನಡೆಯಲಿದೆ. ಮಧ್ಯಾಹ್ನ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 9.30ಕ್ಕೆ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT