ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ವಿವಾದಕ್ಕೆ ಯತ್ನ: ಎಂಇಎಸ್‌ನವರಿಗೆ ಚಳಿ ಬಿಡಿಸಿದ ಮಹಿಳಾ ಅಧಿಕಾರಿ ಸುಳಗೇಕರ

ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಭಾಷಾ ವಿವಾದಕ್ಕೆ ಯತ್ನ
Last Updated 20 ಸೆಪ್ಟೆಂಬರ್ 2021, 15:41 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕಪಿಲೇಶ್ವರ ಹೊಂಡ ಬಳಿ ಗಣೇಶ ವಿಸರ್ಜನೆ ಪೆಂಡಾಲ್‌ನಲ್ಲಿ ಹಾಕಿದ್ದ ಬ್ಯಾನರ್‌ನಲ್ಲಿ ಮರಾಠಿ ಭಾಷೆ ಬಳಸಿಲ್ಲವೇಕೆ ಎಂದು ತಗಾದೆ ತೆಗೆದ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಸಂಘಟನೆಯ ಕೆಲವರಿಗೆ ಮಹಾನಗರಪಾಲಿಕೆಯ ಉಪ ಆಯುಕ್ತೆ (ಅಭಿವೃದ್ಧಿ) ಲಕ್ಷ್ಮಿ ಸುಳಗೇಕರ ಚಳಿ ಬಿಡಿಸಿದ್ದಾರೆ.

ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಮೂರ್ತಿಗಳ ವಿಸರ್ಜನೆ ಬಗ್ಗೆ ಗಣೇಶ ಮಂಡಗಳಿಗೆ ನಿರ್ದೇಶನ ನೀಡುವ ಕೆಲಸವನ್ನು ಮಹಾನಗರಪಾಲಿಕೆ ಅಧಿಕಾರಿಗಳು ಮಾಡುತ್ತಿದ್ದರು.

ಬ್ಯಾನರ್‌ನಲ್ಲಿ ಕನ್ನಡ ಬಳಸಿರುವುದಕ್ಕೆಆಕ್ರೋಶ ವ್ಯಕ್ತಪಡಿಸಿದ ಕೆಲವರು, ವೇದಿಕೆಯಲ್ಲಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಕನ್ನಡದಲ್ಲಿ ಮಾತ್ರವೇ ಶುಭಾಶಯ ಕೋರಿ ನಮಗೆ ಅನ್ಯಾಯ ಮಾಡಲಾಗಿದೆ ಎಂದು ತರಕಾರು ತೆಗೆದಿದ್ದಾರೆ. ವೇದಿಕೆ ಮೇಲೇರಿ ಅಧಿಕಾರಿಗಳಿಗೇ ಘೇರಾವ್ ಹಾಕಿದ್ದಾರೆ. ಸಮಾಧಾನದಿಂದ ಹೇಳಿದರೂ ವೇದಿಕೆಯಿಂದ ಕೆಳಗಿಳಿಯದೆ ವಾಗ್ವಾದ ಮುಂದುವರಿಸಿದ್ದ ಅವರನ್ನು ಲಕ್ಷ್ಮಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನೂರಾರು ಜನರ ಸಮ್ಮುಖದಲ್ಲಿ ಎಂಇಎಸ್‌ನವರಿಗೆ ಬುದ್ಧಿ ಕಲಿಸಿದ್ದಾರೆ.

ಮಹಿಳಾ ಅಧಿಕಾರಿಯು ಎಂಇಎಸ್‌ನವರಿಗೆ ತಿರುಗೇಟು ನೀಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಗಡಿಯಲ್ಲಿ ಭಾಷೆಯ ವಿಷಯದಲ್ಲಿ ಪದೇ ಪದೇ ತಕರಾರು ತೆಗೆಯುವ ಎಂಇಎಸ್‌ನವರಿಗೆ ಮಹಿಳಾ ಅಧಿಕಾರಿಯು ಸರಿಯಾದ ಪಾಠವನ್ನೇ ಕಲಿಸಿದ್ದಾರೆ’ ಎಂದು ಕನ್ನಡ ಭಾಷಿಕರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

‘ಗಣಪತಿ ಮೂರ್ತಿಗಳ ವಿಸರ್ಜನೆ ಕಾಲಕ್ಕೆ ಎಂಇಎಸ್‌ಗೆ ಸೇರಿದ ಕೆಲವು ಕಾರ್ಯಕರ್ತರು ಭಾಷಾ ವಿವಾದವನ್ನು ಕೆದಕಲು ಪ್ರಯತ್ನಿಸಿದ ಘಟನೆ ನಡೆದಿರುವುದು ಮತ್ತು ಸ್ಥಳದಲ್ಲಿದ್ದ ಮಹಿಳಾ ಅಧಿಕಾರಿಗೆ ಘೇರಾವ್ ಹಾಕಲು ಯತ್ನಿಸಿದ್ದನ್ನು ಕನ್ನಡ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಈ ಅಧಿಕಾರಿಗೆ ಸಂಪೂರ್ಣ ಬೆಂಬಲ ನೀಡಿವೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕನ್ನಡಿಗರು ಮತ್ತು ಮರಾಠಿಗರು ಸೇರಿಯೇ ಸಂಭ್ರಮದಿಂದ ಗಣೇಶ ಮೂರ್ತಿಗಳ ವಿಸರ್ಜನೆ ಮಾಡುತ್ತಾರೆ. ಅಲ್ಲೂ ಭಾಷೆ ವಿವಾದ ತೆಗೆದಿರುವುದು ಸರಿಯಲ್ಲ. ಈಚೆಗೆ ನಡೆದ ಮಹಾನಗರಪಾಲಿಕೆ ಚುನಾವಣೆಯಲ್ಲಿ ಎಂಇಎಸ್‌ ಬೆಂಬಲಿಗರು ಸೋತು ಸುಣ್ಣವಾದ ನಂತರ ಅವರು ಹತಾಶರಾಗಿದ್ದಾರೆ. ಕಾಲು ಕೆರೆದು ಜಗಳ ತೆಗೆಯಲು ಮುಂದಾಗುತ್ತಿದ್ದಾರೆ. ಧಾರ್ಮಿಕ ಕಾರ್ಯದಲ್ಲೂ ತರಕಾರು ತೆಗೆದಿದ್ದಾರೆ’ ಎಂದು ಟೀಕಿಸಿದರು.

‘ಗಣೇಶ ಉತ್ಸವದ ನಂತರ ಇಲ್ಲಿಗೆ ಬಂದು ಎಂಇಎಸ್‌ಗೆ ಬೆಂಬಲ ಕೊಡಲಾಗುವುದು ಎಂದು ಮಹಾರಾಷ್ಟ್ರದ ಶಿವಸೇನೆಯವರು ತಿಳಿಸಿದಾಗಲೇ, ನಮಗೆ ಇಂತಹ ಕೃತ್ಯಗಳ ಅನುಮಾನ ಬಂದಿತ್ತು’ ಎಂದರು.

‘ಪಾಲಿಕೆಯಲ್ಲಿ ಬಹುಮತ ಗಳಿಸಿರುವ ಬಿಜೆಪಿಯವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅಧಿಕಾರಿಗಳಿಗೆ ಬೆಂಬಲ ನೀಡಬೇಕು. ಪಾಲಿಕೆಯಲ್ಲಿ ಹೊಸ ಆಡಳಿತ ಮಂಡಳಿಯ ಕಾರ್ಯಚಟುವಟಿಕೆ ಆರಂಭವಾದ ಮೇಲೆ ಎಂಇಎಸ್‌ನವರು ಉಪಟಳ ಮಾಡುವ ಸಾಧ್ಯತೆ ಇದೆ. ಆದ್ದರಿಂದ, ಈಗ ಗಲಾಟೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT