ಬೆಳಗಾವಿ: 'ಅಂಗನವಾಡಿ ಕಾರ್ಯಕರ್ತೆಯರ ನೇಮಕದಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಯಾವುದೇ ಒತ್ತಡಕ್ಕೆ ಒಳಗಾದೆ, ಅರ್ಹರಿಗಷ್ಟೇ ನೌಕರಿ ನೀಡಲಾಗಿದೆ' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ನಗರದಲ್ಲಿ ಗುರುವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಗನವಾಡಿಗಳಿಗೆ ನೇಮಕಗೊಂಡ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದರು.
'ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ 35 ಮಹಿಳೆಯರಿಗೆ ಅದೇಶ ಪತ್ರ ನೀಡಲಾಗಿದೆ. ಅನುಕಂಪದ ಆಧಾರದ ಮೇಲೆ ಮೂವರಿಗೆ ನೌಕರಿ ನೀಡಲಾಗಿದೆ' ಎಂದು ಹೇಳಿದರು.
'ಅಂಗನವಾಡಿ ಕೇಂದ್ರಗಳಲ್ಲಿ ಮಾಂಟೆಸ್ಸರಿ ಶೀಘ್ರವೇ ರಾಜ್ಯದಾದ್ಯಂತ ವಿಸ್ತರಗೊಳ್ಳಲಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳು ಅನುದಾನ ನೀಡಲಿದ್ದು, ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರದ ಜೊತೆಗೆ ಗುಣಮಟ್ಟದ ಶಿಕ್ಷಣ ಕೂಡ ಸಿಗಲಿದೆ' ಎಂದು ತಿಳಿಸಿದರು.
ಸಹಾಯಕಿ ಹುದ್ದೆಯಿಂದ ಕಾರ್ಯಕರ್ತೆ ಹುದ್ದೆಗೆ ಪದೋನ್ನತಿ ಹೊಂದಿದ ಹಾಗೂ ಅನುಕಂಪ ಆಧಾರದ ಮೇಲೆ ಆಯ್ಕೆಗೊಂಡವರಿಗೂ ಸಚಿವೆ ಆದೇಶ ಪತ್ರ ವಿತರಿಸಿದರು.
ಇಲಾಖೆಯ ಉಪ ನಿರ್ದೇಶಕ ನಾಗರಾಜ್, ಸಿಡಿಪಿಒ ಸುಮಿತ್ರಾ ಇದ್ದರು.