ಬುಧವಾರ, ಏಪ್ರಿಲ್ 1, 2020
19 °C
ನೆರೆ ಸಂತ್ರಸ್ತರ ಪರಿಹಾರಕ್ಕೆ ಒತ್ತಾಯ

ಖಾತೆ ಹಂಚಿಕೆಯಲ್ಲೇ ಕಾಲಹರಣ; ಲಕ್ಷ್ಮಿ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನೇತೃತ್ವದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಗೊಂಡು ಜನರು ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

’ಕ್ಷೇತ್ರದಲ್ಲಿ ಅಂಗನವಾಡಿ, ಶಾಲೆ, ರಸ್ತೆಗಳು, ಸಮುದಾಯ ಭವನ ಹಾಳಾಗಿವೆ. ನೆರವಿಗೆ ಬರಬೇಕಾದ ಸರ್ಕಾರ, ಖಾತೆ ಹಂಚಿಕೆಯಲ್ಲಿಯೇ ಕಾಲಹರಣ ಮಾಡುತ್ತಿದೆ. ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ’ ಎಂದು ಕಿಡಿಕಾರಿದರು.

‘ಕಳೆದ ಆಗಸ್ಟ್ ಹಾಗೂ ಸೆಪ್ಟೆಂಬರ್‌ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಗ್ರಾಮೀಣ ಕ್ಷೇತ್ರದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿಯನ್ನೇ ನಂಬಿಕೊಂಡಿದ್ದ ಜನರು ಬೀದಿಗೆ ಬಿದ್ದಿದ್ದಾರೆ. ಮಳೆಯಿಂದ ಅಪಾರ ಆಸ್ತಿ– ಪಾಸ್ತಿ ಕಳೆದುಕೊಂಡಿದ್ದಾರೆ. ಆದರೆ 6 ತಿಂಗಳು ಕಳೆಯುತ್ತಾ ಬಂದಿದೆ. ಇಲ್ಲಿಯವರೆಗೂ ಪರಿಹಾರ ನೀಡಿಲ್ಲ’ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಲಕ್ಷ್ಮಿ ಹೆಬ್ಬಾಳಕರ ಆಕ್ರೋಶ ವ್ಯಕ್ತ ಪಡಿಸಿದರು.

’ಕ್ಷೇತ್ರದಲ್ಲಿ 15 ಸಾವಿರ ಮನೆಗಳು ನೆಲಕ್ಕುರುಳಿವೆ. ಸಾವಿರಾರು ಜನರು ನಿರಾಶ್ರಿತ ಗೊಂಡಿದ್ದಾರೆ. ಅಧಿಕಾರಿಗಳು ನಾಲ್ಕು ಬಾರಿ ಸರ್ವೆ ನಡೆಸಿ, ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ಪರಿಹಾರ ದೊರೆತಿಲ್ಲ. ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ. ಜನರ ನೆರವಿಗೆ ಧಾವಿಸುತ್ತಿಲ್ಲ.  ಎ, ಬಿ, ಸಿ ಎಂದು ಪಟ್ಟಿ ಮಾಡುವ ಮೂಲಕ ಗೊಂದಲದ ವಾತಾವರಣ ಸೃಷ್ಟಿ ಮಾಡಿದ್ದಾರೆ’ ಎಂದರು.

’ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸವಾಗಬೇಕಿದೆ. ಬಿಜೆಪಿಯವರು ಬರಿ ಮತಗಳಿಗಾಗಿ, ಸ್ವಾರ್ಥ ರಾಜಕಾರಣಕ್ಕೆ ಭಾಷಣ ಮಾಡುವುದನ್ನು ಬಿಟ್ಟು ಬಡಜನರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಬೇಕು. ನನ್ನ ಕ್ಷೇತ್ರದ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಸರ್ಕಾರದ ಕಣ್ತೆರೆಸಲು ಬೆಂಗಳೂರಿನಲ್ಲಿ ನಡೆಯುವ ಅಧಿವೇಶನದಲ್ಲಿ ಭಾವಿಗಿಳಿದು ಪ್ರತಿಭಟನೆ ಮಾಡುವೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಸುವೆ’ ಎಂದು ಎಚ್ಚರಿಸಿದರು.

’ಬಿಜೆಪಿ ಸರ್ಕಾರ ರಾಮ.. ರಾಮ.. ಎನ್ನುವ ಬದಲಾಗಿ ರಾಮರಾಜ್ಯವನ್ನಾಗಿಸುವ ಕೆಲಸ ಮಾಡಬೇಕು. ನೆರೆಯಿಂದ ಮನೆಗಳನ್ನು ಕಳೆದುಕೊಂಡಿರುವ ಜನರಿಗೆ ಪರಿಹಾರ ಕೊಡಿಸಬೇಕು’ ಎಂದು ಒತ್ತಾಯಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಂಕರಗೌಡ ಪಾಟೀಲ,  ಬ್ಲಾಕ್ ಅಧ್ಯಕ್ಷ ಸಿ.ಸಿ.ಪಾಟೀಲ, ಯಲ್ಲಪ್ಪಾ ಡೆಕುಳಕರ, ಗಾಯತ್ರಿ ಪಾಟೀಲ, ಮನೋಹರ ಬೆಳಗಾವಂಕರ, ಯುವರಾಜ ಕದಂ ಗ್ರಾಮೀಣ ಕ್ಷೇತ್ರದ ನೂರಾರು ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು