ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಠದೊಂದಿಗೆ ಪರಿಸರ ಪ್ರೀತಿ ಕಲಿಕೆ

ಗ್ರಾಮೀಣ ಭಾಗದ ಮಾದರಿ ಸರ್ಕಾರಿ ಶಾಲೆ
Last Updated 20 ಡಿಸೆಂಬರ್ 2019, 9:48 IST
ಅಕ್ಷರ ಗಾತ್ರ

ಚಿಕ್ಕೋಡಿ: ಶಿಕ್ಷಕರ ಸಮರ್ಪಣಾ ಮನೋಭಾವದ ಸೇವೆ ಮತ್ತು ಸಮುದಾಯದ ಸಹಕಾರ ಸೇರಿದರೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯು ಮಾದರಿಯಾಗಿ ರೂಪುಗೊಳ್ಳಲು ಸಾಧ್ಯ ಎಂಬುದಕ್ಕೆ ತಾಲ್ಲೂಕಿನ ನಾಗರಮುನ್ನೋಳಿ ಗ್ರಾಮ ವ್ಯಾಪ್ತಿಯ ಕಲ್ಮಡ ತೋಟದ ಹಿರಿಯ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ ಉತ್ತಮ ನಿದರ್ಶನವಾಗಿದೆ.

1967ರಲ್ಲಿ ಕಲ್ಮಡ ತೋಟದಲ್ಲಿ ಪ್ರಾಥಮಿಕ ಶಾಲೆ ಆರಂಭಿಸಲಾಗಿದೆ. ಅಲ್ಲಿನ ಕೊಟಬಾಗಿ ಬಂಧುಗಳು ದಾನವಾಗಿ ನೀಡಿದ ಜಾಗದಲ್ಲಿ ಶಾಲೆ ಕಟ್ಟಡ ನಿರ್ಮಿಸಲಾಗಿದೆ. ಸದ್ಯ 1ರಿಂದ 7ನೇ ತರಗತಿವರೆಗೆ 149 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.

ಹಸಿರು ಶಾಲೆ ಪ್ರಶಸ್ತಿ:

ಶಾಲೆ ಆವರಣದಲ್ಲಿ ಕಾಲಿಡುತ್ತಿದ್ದಂತೆಯೇ ಹಸಿರು ಸಿರಿ ಸ್ವಾಗತಿಸುತ್ತದೆ. ವನಸ್ಪತಿ, ವಿವಿಧ ಬಗೆಯ ಹೂವು, ಹಣ್ಣು, ಅಲಂಕಾರಿಕ ಗಿಡಗಳನ್ನು ಬೆಳೆಸಲಾಗಿದೆ. ಮಕ್ಕಳು ಪ್ರಕೃತಿಯ ನಡುವೆ ಆಟ–ಪಾಠ ಕಲಿಯುತ್ತಿದ್ದಾರೆ. ವಿಶೇಷವೆಂದರೆ ಬೇಸಿಗೆಯಲ್ಲಿ ಟ್ಯಾಂಕರ್ ನೀರು ಬಳಸಿ ಈ ಸಸಿಗಳನ್ನು ಜೋಪಾನ ಮಾಡಲಾಗಿದೆ. ಉದ್ಯಾನ ಸಂರಕ್ಷಣೆ ಮತ್ತು ಸಂವರ್ಧನೆಯ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಶಾಲೆಯು 2016-17 ಮತ್ತು 2018-19ನೇ ಸಾಲಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ‘ಹಸಿರು ಶಾಲೆ’ ಪ್ರಶಸ್ತಿಗೆ ಭಾಜನವಾಗಿದೆ. 2018-19ನೇ ಸಾಲಿನಲ್ಲಿ ಉತ್ತಮ ನಲಿ-ಕಲಿ ಶಾಲೆ ಪ್ರಶಸ್ತಿಯನ್ನೂ ಪಡೆದಿದೆ.

ವಿದ್ಯಾರ್ಥಿಗಳ ಸಾಧನೆ:

ಶಾಲೆಯು ಸುಸಜ್ಜಿತವಾದ ಆಟದ ಮೈದಾನ ಹೊಂದಿಲ್ಲ. ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೂ ಇಲ್ಲ. ಆದರೂ, ಶಾಲೆಯ ಗಂಡು ಮತ್ತು ಹೆಣ್ಣು ಮಕ್ಕಳ ತಂಡಗಳೆರೆಡು 2016-17ನೇ ಸಾಲಿನಿಂದ ಸತತ 3 ಬಾರಿ ತಾಲ್ಲೂಕು ಮಟ್ಟದ ಕೊ ಕ್ಕೊ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ವಿಭಾಗ ಮಟ್ಟದ ಸ್ಪರ್ಧೆಗೆ ಶಾಲೆಯ ಮೂವರು ಹೆಣ್ಣು ಮಕ್ಕಳು ಆಯ್ಕೆಯಾಗಿದ್ದರು. ಅಲ್ಲದೇ, ರಾಜ್ಯದ ಮಟ್ಟದ ತಂಡಕ್ಕೂ ಶಾಲೆಯ ಪ್ರಿಯಾ ಈಟಿ ಆಯ್ಕೆಯಾಗಿದ್ದಾರೆ.

2017-18 ರಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಕೊಕ್ಕೊ ಪಂದ್ಯಾವಳಿ ಹಾಗೂ ಪ್ರಸಕ್ತ ವರ್ಷ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲ್ಲೂಕುಮಟ್ಟದ ಕೊಕ್ಕೊ ಟೂರ್ನಿಯನ್ನು ಶಾಲೆಯಿಂದ ನಡೆಸಲಾಗಿದೆ.

ಸಮುದಾಯದ ಸಹಕಾರ:

‘ಶಾಲೆಯ ಅಭಿವೃದ್ಧಿಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು ಹಾಗೂ ಶಿಕ್ಷಣ ಪ್ರೇಮಿಗಳು ಸಹಾಯ, ಸಹಕಾರ ನೀಡುತ್ತಿದ್ದಾರೆ. ಶಾಲೆಗೆ ಕ್ರೀಡಾ ಸಾಮಗ್ರಿ, ಪ್ರೊಜೆಕ್ಟರ್‌, ಸೌಂಡ್ ಸಿಸ್ಟಮ್, ಕಂಪ್ಯೂಟರ್, ಗ್ರೀನ್ ಬೋರ್ಡ್‌, ಪ್ರಿಂಟರ್, ಇನ್ವರ್ಟರ್, ಗೇಟ್, ಸೈರನ್, ಗ್ರಂಥಾಲಯಕ್ಕೆ ಪುಸ್ತಕ ಮೊದಲಾದವುಗಳನ್ನು ವಿವಿಧ ಶಿಕ್ಷಣ ಪ್ರೇಮಿಗಳು ದೇಣಿಗೆಯಾಗಿ ನೀಡಿದ್ದಾರೆ' ಎಂದು ಮುಖ್ಯ ಶಿಕ್ಷಕ ಎ.ಆರ್. ಇಸರಗೊಂಡ ಹೇಳುತ್ತಾರೆ.

ಮುಖ್ಯ ಶಿಕ್ಷಕ ಸೇರಿದಂತೆ ಆರು ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಈಗ ನಾಲ್ವರು ಕಾಯಂ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, 2 ಹುದ್ದೆಗಳು ಖಾಲಿ ಇವೆ. ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಹೆಣ್ಣು ಮಕ್ಕಳಿಗಾಗಿ ಒಂದು ಶೌಚಾಲವಿದೆ. ಹೀಗಾಗಿ, ಹೆಚ್ಚುವರಿ ಶೌಚಾಲಯ ನಿರ್ಮಿಸಿಕೊಡಬೇಕು ಎನ್ನುವ ಬೇಡಿಕೆ ಇದೆ. ಕೊಳವೆಬಾವಿ ದುರಸ್ತಿ ಮಾಡಿಸಬೇಕಾಗಿದೆ. ಐದು ಕೊಠಡಿಗಳು ಶಿಥಿಲಗೊಂಡಿದ್ದು, ಸದ್ಯ ಒಂದು ಕೊಠಡಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿದರೆ ಕಂಪ್ಯೂಟರ್ ಮತ್ತು ಪ್ರೊಜೆಕ್ಟರ್ ಮೂಲಕ ಮಕ್ಕಳಿಗೆ ಇನ್ನೂ ಹೆಚ್ಚಿನ ಅವಧಿಯಲ್ಲಿ ಶಿಕ್ಷಣ ನೀಡಬಹುದಾಗಿದೆ ಎಂದು ಶಾಲೆಯ ಶಿಕ್ಷಕರು ತಿಳಿಸುತ್ತಾರೆ.

‘ಶಾಲೆಯ ಕಟ್ಟಡಗಳ ದುರಸ್ತಿ ಕಾರ್ಯದೊಂದಿಗೆ ಶೌಚಾಲಯಗಳ ನಿರ್ಮಾಣವನ್ನೂ ಮಾಡಿಸಲಾಗುವುದು. ಬೋರ್‌ವೆಲ್‌ ದುರಸ್ತಿಗೊಳಿಸಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯವರು ಆಟದ ಮೈದಾನ ನಿರ್ಮಿಸಿಕೊಡಬೇಕು’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಚೌಗಲಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT