‘ಮೋದಿ ಅಲೆಯ ಜೊತೆ ನನ್ನ ಕೆಲಸವೂ ನನಗೆ ಶ್ರೀರಕ್ಷೆ’

ಶನಿವಾರ, ಏಪ್ರಿಲ್ 20, 2019
32 °C
ಅಭ್ಯರ್ಥಿ ಸಂದರ್ಶನ: ಸುರೇಶ ಅಂಗಡಿ

‘ಮೋದಿ ಅಲೆಯ ಜೊತೆ ನನ್ನ ಕೆಲಸವೂ ನನಗೆ ಶ್ರೀರಕ್ಷೆ’

Published:
Updated:
Prajavani

ಬೆಳಗಾವಿ: ಹ್ಯಾಟ್ರಿಕ್‌ ಸಂಸದ, ಬಿಜೆಪಿಯ ಸುರೇಶ ಅಂಗಡಿ ನಾಲ್ಕನೇ ಬಾರಿಗೆ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಬೆಳಗಾವಿ ತಾಲ್ಲೂಕಿನ ಕೆ.ಕೆ. ಕೊಪ್ಪ ಗ್ರಾಮದವರಾದ ಸುರೇಶ ಅವರು, ಎಲ್‌ಎಲ್‌ಬಿ ಪದವೀಧರರಾಗಿದ್ದಾರೆ. ಸಂಸದರಾಗುವ ಮೊದಲು ಪಕ್ಷ ಕಟ್ಟುವಲ್ಲಿಯೂ ಶ್ರಮಿಸಿದ್ದಾರೆ.

2004ರಲ್ಲಿ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದರು. ನಂತರ ಸತತ ಮೂರು ಬಾರಿ ಸಂಸದರಾಗಿ 15 ವರ್ಷ ಪೂರೈಸಿದ್ದಾರೆ. ಈ ಸಲ ಮತ್ತೆ ಚುನಾವಣಾ ಕಣಕ್ಕೆ ಇಳಿದಿದ್ದು, ಕ್ಷೇತ್ರದ ತುಂಬಾ ಪ್ರಚಾರದಲ್ಲಿ ತೊಡಗಿದ್ದಾರೆ. ಚುನಾವಣಾ ವಾತಾವರಣದ ಬಗ್ಗೆ ಅವರು ‘ಪ್ರಜಾವಾಣಿ’ಯ ಸಂದರ್ಶನದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

* ಚುನಾವಣೆ ವಾತಾವರಣ ಹೇಗಿದೆ?
– ಚೆನ್ನಾಗಿದೆ. ಬಿಜೆಪಿಗೆ ಪೂರಕವಾಗಿದೆ. ದೇಶದೆಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇದೆ. ಇದೇ ವಾತಾವರಣ ಬೆಳಗಾವಿಯಲ್ಲೂ ಇದೆ.

* ಮೊದಲ ಸಲ ಸ್ಪರ್ಧಿಸಿದಾಗ ಅಟಲ್‌ ಬಿಹಾರಿ ವಾಜಪೇಯಿ, ಎರಡನೇ ಬಾರಿಗೆ ಸ್ಪರ್ಧಿಸಿದಾಗ ಬಿ.ಎಸ್‌.ಯಡಿಯೂರಪ್ಪ ಹಾಗೂ ಮೂರನೇ ಬಾರಿಗೆ ಸ್ಪರ್ಧಿಸಿದಾಗ ನರೇಂದ್ರ ಮೋದಿ ಅವರ ಅಲೆಯಲ್ಲಿ ಆಯ್ಕೆಯಾಗಿದ್ದೀರಿ. ನೀವು ‘ಅದೃಷ್ಟದ ರಾಜಕಾರಣಿ’ ಎಂದು ಜನರು ಆಡಿಕೊಳ್ಳುತ್ತಾರೆ. ನಿಮ್ಮ ಗೆಲುವಿನಲ್ಲಿ ನಿಮ್ಮ ಶ್ರಮ ಏನೂ ಇಲ್ಲವೇ?
– ಬಿಜೆಪಿ ರಾಷ್ಟ್ರೀಯ ಪಕ್ಷ. ರಾಷ್ಟ್ರದ ಹಿತಾಸಕ್ತಿಗೆ ಅನುಗುಣವಾಗಿ ನಡೆಯುತ್ತದೆ. ಪಕ್ಷದ ವರಿಷ್ಠರ ಅಣತಿಯಂತೆ ನಡೆಯುತ್ತದೆ. ಮನೆಯ ಯಜಮಾನನ ಹೆಸರು ಹೇಳುವಂತೆ ಪಕ್ಷದ ವರಿಷ್ಠರ ಹೆಸರು ಹೇಳುವುದು ಸಾಮಾನ್ಯ. ಈಗ ನರೇಂದ್ರ ಮೋದಿ ನಮ್ಮೆಲ್ಲರ ನಾಯಕ. ಅವರ ಹೆಸರಿನಲ್ಲಿಯೇ ಮತಯಾಚನೆ ಮಾಡುತ್ತಿದ್ದೇವೆ. ಅವರು ಕಳೆದ 5 ವರ್ಷಗಳ ಅವಧಿಯಲ್ಲಿ ಮಾಡಿದ ಕೆಲಸಗಳು ಹಾಗೂ ಕೈಗೊಂಡ ನಿರ್ಧಾರಗಳು ನಮಗೆ ಶ್ರೀರಕ್ಷೆಯಾಗಿವೆ.

ಬೆಳಗಾವಿ ಅಭಿವೃದ್ಧಿ ಪಡಿಸಲು ನಾನು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ. ಉಡಾನ್‌, ರೈಲ್ವೆ ಮೇಲ್ಸೇತುವೆ, ರಫ್ತು ನಿರ್ದೇಶಕರ ಕಚೇರಿ, ಪಾಸ್‌ಪೋರ್ಟ್‌ ಕಚೇರಿ ಸ್ಥಾಪನೆ ಸೇರಿದಂತೆ ಇನ್ನು ಹಲವು ಕೆಲಸಗಳನ್ನು ಮಾಡಿದ್ದೇನೆ.

* ನಾಲ್ಕನೇ ಬಾರಿಗೆ ಕಣಕ್ಕಿಳಿದಿರುವ ನಿಮ್ಮ ಎದುರು ಕಾಂಗ್ರೆಸ್‌ ಪಕ್ಷವು ಡಾ.ವಿ.ಎಸ್‌. ಸಾಧುನವರ ಅವರನ್ನು ಕಣಕ್ಕಿಳಿಸಿದೆ. ಅವರ ಬಗ್ಗೆ ಏನು ಹೇಳುತ್ತೀರಿ?
– ಅವರು ಒಳ್ಳೆಯ ಮನುಷ್ಯರು. ಆದರೆ, ಪಕ್ಷ ಸರಿಯಿಲ್ಲ. ‘ಗುಡ್‌ ಮ್ಯಾನ್‌ ಇನ್‌ ರಾಂಗ್‌ ಪಾರ್ಟಿ’.

* ನಿಮಗಿರುವ ಪಾಸಿಟಿವ್‌, ನೆಗೆಟಿವ್‌ ಗುಣಗಳಾವವು?
– ಪಕ್ಷದ ನಿಷ್ಠಾವಂತ ಕಾರ್ಯಕರ್ತರೇ ನನಗೆ ಶಕ್ತಿಯಾಗಿದ್ದಾರೆ. ಅದೇ ನನಗಿರುವ ಪಾಸಿಟಿವ್‌. ಇನ್ನು ನೆಗೆಟಿವ್‌ ಅಂಶವೆಂದರೆ, ನನಗೆ ಕೋಪ ಬಹಳ ಬೇಗ ಬರುತ್ತದೆ. ತಕ್ಷಣ ಹೊರಹಾಕುತ್ತೇನೆ. ಇದು ಹಲವರಿಗೆ ಬೇಸರ ಉಂಟು ಮಾಡುತ್ತದೆ. ಇದನ್ನು ನಿಯಂತ್ರಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇನೆ.

* ಜನರು ನಿಮಗೆ ಏಕೆ ಮತ ಹಾಕಬೇಕು?
– ಕಳೆದ 15 ವರ್ಷಗಳ ಅವಧಿಯಲ್ಲಿ ಬೆಳಗಾವಿಗೆ ಆಧುನಿಕತೆಯ ಸ್ಪರ್ಶ ನೀಡಿದ್ದೇನೆ. ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆಯಡಿ ಬೆಳಗಾವಿಯನ್ನು ಸೇರ್ಪಡೆಗೊಳಿಸಿದ್ದೇನೆ. ಉಡಾನ್‌ ಯೋಜನೆಯಡಿ ವಿಮಾನಯಾನ ಸೇವೆ ಪುನರಾರಂಭಿಸಿದ್ದೇನೆ. ರೈಲ್ವೆ ನಿಲ್ದಾಣದ ಆಧುನೀಕರಣ, ರೈಲ್ವೆ ಮೇಲ್ಸೇತುವೆಗಳ ನಿರ್ಮಾಣ ಮಾಡಿದ್ದೇನೆ. ನನಗಿಂತ ಮೊದಲು 11 ಸಲ ಕಾಂಗ್ರೆಸ್‌ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆದರೆ ಯಾರೂ ಮಾಡದಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ.

ಕಾಂಗ್ರೆಸ್‌ನವರು ಕೇವಲ ಅಂಬೇಡ್ಕರ್‌ ಹೆಸರು ಹೇಳಿಕೊಂಡು ದಲಿತರ ಮತ ಪಡೆದಿದ್ದಾರೆ. ಬೆಳಗಾವಿಯಲ್ಲೊಂದು ಅಂಬೇಡ್ಕರ್‌ ಭವನ ನಿರ್ಮಿಸಲು ನಾನು ಆಯ್ಕೆಯಾಗಿ ಬರಬೇಕಾಯಿತು. ಮುಂದಿನ ದಿನಗಳಲ್ಲಿ ನೀರಾವರಿ ಹಾಗೂ ಕೈಗಾರಿಕೆ ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತೇನೆ. ಈ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತೇನೆ. ಇವೆಲ್ಲ ಕಾರಣಗಳಿಗಾಗಿ ಜನರು ನನಗೆ ಮತ ನೀಡುತ್ತಾರೆ ಎನ್ನುವ ವಿಶ್ವಾಸ ಇದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !