ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾನೂನು ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಹಾಜರಾತಿ’

ರಾಷ್ಟ್ರಮಟ್ಟದ ಕಾನೂನು ಉತ್ಸವಕ್ಕೆ ಚಾಲನೆ
Last Updated 22 ಮಾರ್ಚ್ 2019, 14:05 IST
ಅಕ್ಷರ ಗಾತ್ರ

ಬೆಳಗಾವಿ: ‘ವಕೀಲರ ಪರಿಷತ್ತಿನ ಸೂಚನೆ ಪ್ರಕಾರ, ಕಾನೂನು ವಿದ್ಯಾರ್ಥಿಗಳಿಗೂ ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಕಾನೂನು ಕಾಲೇಜುಗಳವರು ಇದನ್ನು ಅನುಷ್ಠಾನಗೊಳಿಸಿ, ಸಹಕಾರ ನೀಡಬೇಕು’ ಎಂದು ಹುಬ್ಬಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಈಶ್ವರ್‌ ಭಟ್ ತಿಳಿಸಿದರು.

ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಕಾಲೇಜು ಹಾಗೂ ಕೆಎಲ್‌ಇ ಲಾ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಕಾನೂನು ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ತರಗತಿಗಳಲ್ಲಿ ಕ್ರಿಯಾಶೀಲವಾಗಿ ಹಾಜರಾಗಬೇಕು. ಬೋಧಕರೊಂದಿಗೆ ಸಂವಾದ ನಡೆಸಿ, ಜ್ಞಾನ ವೃದ್ಧಿಸಿಕೊಳ್ಳಬೇಕು ಹಾಗೂ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಇದೆಲ್ಲದಕ್ಕೂ ‍ಪೂರಕವಾಗಿ ತರಗತಿಗಳನ್ನು ತ‍ಪ್ಪಿಸಿಕೊಳ್ಳಬಾರದು’ ಎಂದು ಸಲಹೆ ನೀಡಿದರು.

‘ವೃತ್ತಿಪರ ಕೌಶಲಗಳನ್ನು ವೃದ್ಧಿಸಿಕೊಳ್ಳುವಲ್ಲಿ ಅಣಕು ನ್ಯಾಯಾಲಯದಂಥ ಸ್ಪರ್ಧಾ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಯಶಸ್ವಿ ವಕೀಲರಾಗಬೇಕಾದರೆ ಅತ್ಯುತ್ತಮ ಗುಣಮಟ್ಟದ ಕಾನೂನು ಶಿಕ್ಷಣ ಪಡೆಯಬೇಕಾಗುತ್ತದೆ. ಕೆಎಲ್‌ಇ ಸಂಸ್ಥೆಯು ಕಾನೂನು ಅಕಾಡೆಮಿ ಮೂಲಕ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದು ಹಾಗೂ ವಿದ್ಯಾರ್ಥಿಗಳನ್ನು ವೃತ್ತಿಪರವಾಗಿ ಸಿದ್ಧಗೊಳಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ಅವಕಾಶಗಳಿವೆ:

‌‘ಕಾನೂನು ಶಿಕ್ಷಣವು ಇಂದು ಜಾಗತಿಕವಾಗಿ ವಿಸ್ತರಿಸಿದೆ. ಹಲವಾರು ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಇದಕ್ಕಾಗಿ ಆಳವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಪೂರಕವಾಗಿ ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಕೆ.ಬಿ. ನಾಯಕ್ ಮಾತನಾಡಿ, ‘ನಾವು ಕಾನೂನು ಪದವಿ ಓದುತ್ತಿದ್ದ ಕಾಲದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಪಾಸಾಗುವವರು ಕೂಡ ಬೆರಳೆಣಿಕೆ ಸಂಖ್ಯೆಯಲ್ಲಷ್ಟೇ ಇರುತ್ತಿದ್ದರು. ಆದರೆ, ಕಾಲಕ್ರಮೇಣ ವಕೀಲರ ಪರಿಷತ್ತು ರೂಪಿಸಿದ ನಿಯಮಗಳಿಂದಾಗಿ ಹಾಜರಾತಿ ಹಾಗೂ ಫಲಿತಾಂಶ ವೃದ್ಧಿಸಿದೆ. ಅಲ್ಲದೇ, ಪ‍್ರಸ್ತುತ ಕಾನೂನು ಪದವಿ ಓದಿದವರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ’ ಎಂದರು.

ಅಕಾಡೆಮಿಯಿಂದ:

‘ಪರಿಷತ್ತಿನಿಂದ ರಾಜ್ಯ ಕಾನೂನು ಅಕಾಡೆಮಿ ಆರಂಭಿಸಿ, ನವ ವಕೀಲರಿಗೆ ಕಾನೂನು ಶಿಕ್ಷಣ ನೀಡುತ್ತಿದ್ದೇವೆ. ಕಾನೂನು ವಿದ್ಯಾರ್ಥಿಗಳು ಹೊಸ ಕಾಯ್ದೆಗಳು ಹಾಗೂ ತಿದ್ದುಪಡಿಗಳನ್ನು ತಿಳಿದುಕೊಳ್ಳಬೇಕು. ಇದಕ್ಕಾಗಿ ಪರಿಷತ್ತಿನಿಂದಲೂ ವಿಚಾರಸಂಕಿರಣ, ಕಾರ್ಯಾಗಾರ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.‌

ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣವರ ಮಾತನಾಡಿದರು. ವಕೀಲ ಹಾಗೂ ಬೆಲ್ಲದ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ರಾಜೇಂದ್ರ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಶ್ರೀ ನಾಯಕ ಹಾಗೂ ತಂಡದವರು ಪ್ರಾರ್ಥಿಸಿದರು. ಬೆಲ್ಲದ ಕಾನೂನು ಕಾಲೇಜಿನ ಪ್ರಾಚಾರ್ಯ ಬಿ. ಜಯಸಿಂಹ ಸ್ವಾಗತಿಸಿದರು. ಪ್ರೊ.ವಿ.ವಿ. ಮುರದಂಡೆ ಪರಿಚಯಿಸಿದರು. ಡಾ.ಶಾರದಾ ಪಾಟೀಲ ಅಕಾಡೆಮಿಯ ವಾರ್ಷಿಕ ವರದಿ ಮಂಡಿಸಿದರು. ಮಾಣಿಕ ನೇಸರಕರ ನಿರೂಪಿಸಿದರು. ಪ್ರೊ.ಅಶ್ವಿನಿ ಪರಬ್ ವಂದಿಸಿದರು.

ಮಾರ್ಚ್‌ 24ರವರೆಗೆ ನಡೆಯುವ ಈ ಉತ್ಸವದಲ್ಲಿ ದೇಶದ ವಿವಿಧ 22 ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT