ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಧುನಿಕ ನರಶಸ್ತ್ರಚಿಕಿತ್ಸಾ ಕೊಠಡಿ ಉದ್ಘಾಟನೆ

ಕೆಎಲ್‌ಇ ಆಸ್ಪತ್ರೆಯಲ್ಲಿ ಆರಂಭ
Last Updated 8 ಫೆಬ್ರುವರಿ 2021, 17:19 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದಅತ್ಯಾಧುನಿಕ ನರಶಸ್ತ್ರಚಿಕಿತ್ಸಾ ಕೊಠಡಿಯನ್ನು ಯುನಿಯನ್ ಬ್ಯಾಂಕ್‌ ಕಾರ್ಯಕಾರಿ ನಿರ್ದೇಶಕ ಹಾಗೂ ಸಿಇಒ ರಾಜಕಿರಣ ರಾಯ್ ಸೋಮವಾರ ಉದ್ಘಾಟಿಸಿದರು.

ನಂತರ ಮಾತನಾಡಿ, ‘ರಾಷ್ಟ್ರವು ಪ್ರಗತಿಪಥದಲ್ಲಿ ಸಾಗಬೇಕಾದರೆ ಮೂಲ ಸೌಲಭ್ಯಗಳು ಸದಾ ಉನ್ನತೀಕರಣದ ಹಾದಿಯಲ್ಲಿ ಸಾಗಬೇಕಾಗಿಗುತ್ತದೆ. ದೇಶದ ಬೆಳವಣಿಗೆಯಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ’ ಎಂದರು.

‘ಕೋವಿಡ್ ಸಮಯದಲ್ಲಿ ಆರೋಗ್ಯ ಸೇವಾ ಕ್ಷೇತ್ರದವರು ನಿರ್ವಹಿಸಿದ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ವಿಶ್ವವೆ ಸ್ತಬ್ಧಗೊಂಡರೂ ಆರೋಗ್ಯ ಕಾರ್ಯಕರ್ತರು ಕೆಲಸ ನಿಲ್ಲಿಸಲಿಲಲ. ಸಣ್ಣ ಮತ್ತು ಮದ್ಯಮ ಕೈಗಾರಿಕೆಗಳು ದೇಶದ ಅಭಿವೃದ್ಧಿಗೆ ಪರಿಣಾಮಕಾರಿ ಕೊಡುಗೆ ನೀಡುತ್ತಿವೆ. ಅದರಂತೆ ಆರೋಗ್ಯ ಕ್ಷೇತ್ರವೂ ಆರೋಗ್ಯಯುತ ಸಮಾಜ ನಿರ್ಮಿಸುವಲ್ಲಿ ತೊಡಗಿಕೊಂಡಿದೆ’ ಎಂದು ಹೇಳಿದರು.

‘ಡಿಜಿಟಲ್ ಮಾಧ್ಯಮ ಇಂದು ಎಲ್ಲ ಕ್ಷೇತ್ರದಲ್ಲಿಯೂ ಹಾಸುಹೊಕ್ಕಾಗಿದೆ. ಮಾದ್ಯಮದ ಮೂಲಕ ದುರ್ಗಮ ಪ್ರದೇಶದ ಜನರಿಗೂ ಆರೋಗ್ಯ ಸೇವೆ ಕಲ್ಪಿಸಲು ಆರೋಗ್ಯ ಸಂಸ್ಥೆಗಳು ಪರಿಣಾಮಕಾರಿಯಾದ ಯೋಜನೆಗಳನ್ನು ರೂಪಿಸಬೇಕು. ಅದರಂತೆ ಆರೋಗ್ಯ ಪ್ರವಾಸೋದ್ಯಮಕ್ಕೆ ಭಾರತದಲ್ಲಿ ಒಳ್ಳೆಯಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳಬೇಕು. ಅಭಿವೃದ್ದಿಶೀಲ ರಾಷ್ಟ್ರಗಳ ಜನರಿಗೆ ವೈದ್ಯಕೀಯ ಸೇವೆಯನ್ನು ಕಲ್ಪಿಸಲು ಆಕರ್ಷಕ ಸೇವೆ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಸಲಹೆ ನೀಡಿದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘20 ವರ್ಷದ ಹಿಂದೆ ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಾಗಿ ಈ ಭಾಗದ ಜನತೆ ಮಹಾರಾಷ್ಟ್ರದ ಮೀರಜ್, ಮುಂಬೈಗೆ ಹೋಗಬೇಕಾಗಿತ್ತು. ಬೆಂಗಳೂರನ್ನು ಆಶ್ರಯಿಸಬೇಕಾಗಿತ್ತು. ಆದರೆ, 15 ವರ್ಷದಿಂದ ಎಲ್ಲ ಸೌಲಭ್ಯಗಳು ಒಂದೇ ಸೂರಿನಡಿ ಸಿಗುವಂತೆ ಸಂಸ್ಥೆಯಿಂದ ವ್ಯವಸ್ಥೆ ಕಲ್ಪಿಸಿದ್ದೇವೆ. ಹೃದ್ರೋಗ, ನರರೋಗ, ನರಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ’ ಎಂದು ವಿವರಿಸಿದರು.

ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ಡಾ.ವಿ.ಎಸ್. ಸಾಧುನವರ, ಡಾ.ವಿ.ಐ. ಪಾಟೀಲ, ಅಮಿತ ಕೋರೆ, ಡಾ.ಆರ್.ಬಿ. ನೇರ್ಲಿ, ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ವಿವೇಕ ಸಾವೋಜಿ, ಡಾ.ಎಚ್.ಬಿ. ರಾಜಶೇಖರ, ಡಾ.ವಿ.ಡಿ. ಪಾಟೀಲ, ಡಾ.ಎ.ಎಸ್. ಗೋಗಟೆ, ಡಾ.ರಾಜೇಶ ಪವಾರ, ಡಾ.ವಿ.ಎಂ. ಪಟ್ಟಣಶೆಟ್ಟಿ, ಡಾ.ಪ್ರಕಾಶ ಮಹಾಂತಶೆಟ್ಟಿ, ಡಾ.ರಾಜೇಶ ಶೆಣೈ, ಡಾ.ಅಭಿಷೇಕ ಪಾಟೀಲ, ಡಾ.ವಿಕ್ರಮ, ಡಾ.ಪ್ರಕಾಶ ರಾಥೋಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT