ಬುಧವಾರ, ಫೆಬ್ರವರಿ 19, 2020
17 °C
ಬಿಜೆಪಿ ಅಧಿಕಾರ ತಪ್ಪಿಸಲು ಕ್ರಮ– ಗುಮಾನಿ

ನಿಪ್ಪಾಣಿ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಬದಲಾಯಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಈ ಮೊದಲು ಸಾಮಾನ್ಯ ಮಹಿಳೆ ಇದ್ದ ಮೀಸಲಾತಿಯನ್ನು ಎಸ್‌ಟಿಗೆ ಬದಲಾಯಿಸಲಾಗಿದೆ. ಬಿಜೆಪಿಗೆ ಅಧಿಕಾರ ಹೋಗುವುದನ್ನು ತಪ್ಪಿಸುವುದಕ್ಕಾಗಿಯೇ ಕಾಂಗ್ರೆಸ್‌ ಮುಖಂಡರು ಸರ್ಕಾರದ ಮೇಲೆ ಪ್ರಭಾವ ಬೀರಿ, ಮೀಸಲಾತಿ ಬದಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ನಿಪ್ಪಾಣಿ ನಗರಸಭೆಯ 31 ವಾರ್ಡ್‌ಗಳಿಗೆ ಇತ್ತೀಚೆಗೆ ಚುನಾವಣೆ ನಡೆದಿತ್ತು. ಕಾಂಗ್ರೆಸ್‌ ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. 12 ವಾರ್ಡ್‌ಗಳಲ್ಲಿ ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿಗಳು ಪಕ್ಷದ ಹೆಸರಿನಲ್ಲಿಯೇ ಕಣಕ್ಕಿಳಿದಿದ್ದರು. ಶಾಸಕಿ, ಬಿಜೆಪಿಯ ಶಶಿಕಲಾ ಜೊಲ್ಲೆ ಹಾಗೂ ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಅವರ ಸಂಘಟಿತ ಪ್ರಯತ್ನದ ಫಲವಾಗಿ 13 ಸದಸ್ಯರು ಗೆಲುವು ಸಾಧಿಸಿದ್ದರು. ಇನ್ನುಳಿದ 6 ವಾರ್ಡ್‌ಗಳಲ್ಲಿ ಪಕ್ಷೇತರರು ಜಯಗಳಿಸಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು.

ಈ ಮೊದಲು ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದಾಗ ಬಿಜೆಪಿ ಅಭ್ಯರ್ಥಿ ನೀತಾ ಬಾಗಡೆ ಅವರು ಹೆಸರು ಕೇಳಿಬರುತ್ತಿತ್ತು. ಈಗ ಮೀಸಲಾತಿ ಬದಲಾವಣೆಯಾಗಿದ್ದು, ಎಸ್‌ಟಿ ಮೀಸಲಾಗಿದೆ. 14ನೇ ವಾರ್ಡ್‌ನಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ ಬೆಂಬಲಿತ ದತ್ತಾ ನಾಯಿಕ ಅವರೊಬ್ಬರೆ ಎಸ್‌.ಟಿ ವರ್ಗಕ್ಕೆ ಸೇರಿದವರಾಗಿದ್ದಾರೆ.  ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದೆ. ಉಪಾಧ್ಯಕ್ಷ ಸ್ಥಾನವು ಸಾಮಾನ್ಯವಾಗಿದ್ದು, ಬದಲಾವಣೆಯಾಗಿಲ್ಲ.

ದತ್ತಾ ನಾಯಿಕ ಅವರು ಕಾಂಗ್ರೆಸ್‌ ಮುಖಂಡ ಸುಭಾಸ ಜೋಷಿ ಜೊತೆ ಬೆಂಬಲಿಗರಾಗಿದ್ದಾರೆ. ಜೊಲ್ಲೆ ದಂಪತಿ ಜೊತೆ ವೈರತ್ವ ಹೊಂದಿರುವ ಜೋಷಿ ಅವರು, ಅಧ್ಯಕ್ಷ ಸ್ಥಾನ ಬಿಜೆಪಿಗೆ ಹೋಗುವುದನ್ನು ತಪ್ಪಿಸಲು ಕಾಂಗ್ರೆಸ್‌ನ ಪ್ರಭಾವಿ ಮುಖಂಡರನ್ನು ಬಳಸಿಕೊಂಡು ಮೀಸಲಾತಿ ಬದಲಾಯಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು