ಮಂಗಳವಾರ, ಜೂನ್ 2, 2020
27 °C
18 ದಿನ ಕಳೆದರೂ ಬಾರದ ಮಾರ್ಗಸೂಚಿ

ಬೆಳಗಾವಿ | ಸಹಾಯ ಧನ ಪಡೆಯಲು ಧೋಬಿ, ಕ್ಷೌರಿಕರ ಪರದಾಟ !

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಲಾಕ್‌ಡೌನ್‌ ಅವಧಿಯಲ್ಲಿ ಜರ್ಝರಿತವಾಗಿರುವ ಧೋಬಿಗಳು ಹಾಗೂ ಕ್ಷೌರಿಕರಿಗೆ ₹ 5,000 ಸಹಾಯಧನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿ 18 ದಿನಗಳು ಕಳೆದಿದ್ದರೂ ಸ್ಪಷ್ಟ ಮಾರ್ಗಸೂಚಿ ರಚನೆಯಾಗಿಲ್ಲ. ಇದರಿಂದಾಗಿ ಸಹಾಯಧನ ಪಡೆಯಲು ಧೋಬಿಗಳು ಹಾಗೂ ಕ್ಷೌರಿಕರು ಪರದಾಡುತ್ತಿದ್ದಾರೆ.

ಮಾರಕ ರೋಗ ಕೋವಿಡ್‌–19 ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮಾರ್ಚ್‌ 20ರಿಂದಲೇ ಲಾಕ್‌ಡೌನ್‌ ಘೋಷಣೆಯಾಗಿತ್ತು. ಬಹುತೇಕ 2 ತಿಂಗಳ ಕಾಲ ಮುಂದುವರಿಯಿತು. ಈ ಅವಧಿಯಲ್ಲಿ ಕೆಲಸವಿಲ್ಲದ್ದರಿಂದ ಧೋಬಿಗಳು ಹಾಗೂ ಕ್ಷೌರಿಕರು ತೀವ್ರ ಸಂಕಷ್ಟ ಅನುಭವಿಸಿದರು. ಇವರ ನೆರವಿಗೆ ಧಾವಿಸಿದ ಯಡಿಯೂರಪ್ಪ ಅವರು ವಿವಿಧ ಶ್ರಮಿಕ ವರ್ಗದವರಿಗೆ ಸಹಾಯ ಧನ ನೀಡಲು ₹ 1,610 ಕೋಟಿ ಮೊತ್ತದ ಪ್ಯಾಕೇಜ್‌ ಘೋಷಣೆ ಮಾಡಿದರು. ಕಟ್ಟಡ ಕಾರ್ಮಿಕರು, ಆಟೊ, ಟ್ಯಾಕ್ಸಿ ಚಾಲಕರು, ನೇಕಾರರು, ಹೂವು– ಹಣ್ಣು ಬೆಳೆಗಾರರು ಹಾಗೂ ಧೋಬಿ– ಕ್ಷೌರಿಕರಿಗೆ ಸಹಾಯ ಧನ ಘೋಷಿಸಿದ್ದರು.

ಗೊಂದಲದಲ್ಲಿ ಧೋಬಿಗಳು: ಯೋಜನೆಯ ಫಲಾನುಭವಿಗಳನ್ನು ಯಾವ ರೀತಿ ಆಯ್ಕೆ ಮಾಡಬೇಕು, ಯಾವ ಇಲಾಖೆಯ ಮೂಲಕ ಇವರನ್ನು ಗುರುತಿಸಬೇಕು ಎನ್ನುವುದರ ಬಗ್ಗೆ ಸರ್ಕಾರದಲ್ಲಿ ಸ್ಪಷ್ಟವಾದ ಚಿತ್ರಣ ಇಲ್ಲ. ಧೋಬಿಗಳು ಹಾಗೂ ಕ್ಷೌರಿಕರ ಕುರಿತಾದ ನಿಖರವಾದ ಅಂಕಿ– ಅಂಶಗಳು ಯಾವ ಇಲಾಖೆಯಲ್ಲೂ ಇಲ್ಲ. ಇವರ ಮಾಹಿತಿಯನ್ನು ಸರ್ಕಾರ ಎಲ್ಲಿಂದ ಪಡೆಯುತ್ತದೆ? ಯಾವ ಇಲಾಖೆ, ನಿಗಮದ ಮೂಲಕ ಇವರನ್ನು ಗುರುತಿಸುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ತಾವೇ ಸ್ವಯಂ ಪ್ರೇರಿತರಾಗಿ ಮಾಹಿತಿ ನೀಡಲು ಬಯಸಿದರೆ ಯಾರಿಗೆ ಮಾಹಿತಿ ನೀಡಬೇಕು? ಯಾವು ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬೇಕು? ಆಧಾರ್‌ ಕಾರ್ಡ್‌ ಸಂಖ್ಯೆ, ಬ್ಯಾಂಕ್‌ ಖಾತೆ ಸಂಖ್ಯೆ ಅಥವಾ ತಮ್ಮ ವೃತ್ತಿ ಸಂಬಂಧ ಯಾವ ದಾಖಲೆಗಳನ್ನು ನೀಡಬೇಕು ಎನ್ನುವ ಗೊಂದಲದಲ್ಲಿ ಧೋಬಿಗಳು ಹಾಗೂ ಕ್ಷೌರಿಕರೂ ಇದ್ದಾರೆ.

‘ಎರಡು ತಿಂಗಳ ಕಾಲ ಕೆಲಸವಿಲ್ಲದೇ ಬಹಳ ಕಷ್ಟದಲ್ಲಿ ಬದುಕುತ್ತಿದ್ದೇವೆ. ಇಂತಹ ಸಮಯದಲ್ಲಿ ಸಹಾಯ ಧನ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿರುವುದು ಖುಷಿ ಎನಿಸಿತು. ಆದರೆ, ಇದುವರೆಗೆ ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೂ ಇದರ ಬಗ್ಗೆ ತಿಳಿದಿಲ್ಲ. ಹೀಗಾಗಿ ನಮಗೆ ಗೊಂದಲವಾಗಿದೆ. ಸಹಾಯ ಧನ ಪಡೆಯಲು ಏನು ಮಾಡಬೇಕು, ಯಾರನ್ನು ಸಂಪರ್ಕಿಸಬೇಕು ಎನ್ನುವುದು ಗೊತ್ತಾಗುತ್ತಿಲ್ಲ’ ಎಂದು ಕ್ಷೌರಿಕ ಶಂಕರ ಅಳಲು ತೋಡಿಕೊಂಡರು.

ವಿವಿಧ ಶ್ರಮಿಕರ ಮಾಹಿತಿ ಸಂಗ್ರಹ
ಲಾಕ್‌ಡೌನ್‌ ಪ್ಯಾಕೇಜ್‌ ಅಡಿ ಟ್ಯಾಕ್ಸಿ ಹಾಗೂ ಆಟೊ ಚಾಲಕರಿಗೂ ₹ 5,000 ಸಹಾಯ ಧನ ನೀಡಲಾಗುತ್ತಿದೆ. ಸೇವಾ ಸಿಂಧು ಆ್ಯಪ್‌ ಮೂಲಕ ಇವರ ಮಾಹಿತಿಯನ್ನು ಪಡೆಯಲಾಗುತ್ತಿದೆ. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸಹಾಯ ಧನ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಸುಮಾರು 86 ಸಾವಿರ ಜನ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು, ಇವರಲ್ಲಿ ಸುಮಾರು 30 ಸಾವಿರ ಕಾರ್ಮಿಕರಿಗೆ ಸಹಾಯಧನವನ್ನು ಅವರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. ಇನ್ನುಳಿದವರಿಗೂ ಹಂತಹಂತವಾಗಿ ಹಣ ನೀಡಲಾಗುತ್ತಿದೆ.

ಜವಳಿ ಇಲಾಖೆ ಮೂಲಕ ನೇಕಾರರಿಗೆ ₹ 2,000 ಸಹಾಯಧನ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಪ್ರತಿ ಹೆಕ್ಟೇರ್‌ಗೆ ₹ 25,000 ಸಹಾಯ ಧನ ನೀಡಲು ಹೂವು ಬೆಳೆಗಾರರ ಮಾಹಿತಿಯನ್ನು ತೋಟಗಾರಿಕೆ ಇಲಾಖೆಯು ಸಂಗ್ರಹಿಸುತ್ತಿದೆ. ಸದ್ಯದಲ್ಲಿಯೇ ಇವರಿಗೆ ಹಣ ಪಾವತಿಯಾಗುವ ನಿರೀಕ್ಷೆಯಿದೆ.

‘ತರಾತುರಿಯಲ್ಲಿ ಘೋಷಣೆ’
‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತರಾತುರಿಯಲ್ಲಿ ಲಾಕ್‌ಡೌನ್‌ ಪ್ಯಾಕೇಜ್‌ ಘೋಷಿಸಿದಂತಿದೆ. ಧೋಬಿಗಳು ಹಾಗೂ ಕ್ಷೌರಿಕರ ಬಗ್ಗೆ ಅಂಕಿ ಅಂಶ ಸಂಗ್ರಹಿಸದೆ, ಯಾವುದೇ ಪೂರ್ವ ತಯಾರಿ ಇಲ್ಲದೇ ಸಹಾಯಧನ ಘೋಷಿಸಿಬಿಟ್ಟಿದ್ದಾರೆ. ಈಗ 18 ದಿನಗಳು ಕಳೆದಿದ್ದರೂ ಇನ್ನೂ ಮಾರ್ಗಸೂಚಿ ರಚನೆಯಾಗಿಲ್ಲ. ಸಹಾಯಧನ ವಿತರಿಸುವ ಹೊಣೆ ಯಾವ ಇಲಾಖೆಗೆ ಇದೆ ಎನ್ನುವುದು ಸ್ಪಷ್ಟವಾಗಿಲ್ಲ. ಧೋಬಿಗಳು ಹಾಗೂ ಕ್ಷೌರಿಕರು ಯಾರ ಬಳಿ ಹೋಗಿ ತಮ್ಮ ಮಾಹಿತಿ ನೀಡಬೇಕು?’ ಎಂದು  ಕಾರ್ಮಿಕ ಮುಖಂಡ ಎನ್‌.ಆರ್‌. ಲಾತೂರ ಪ್ರಶ್ನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು