ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯ ಸಾಹಿತ್ಯ ಸಂಘಟನೆಯಿಂದ ಸಿದ್ದಲಿಂಗಯ್ಯ ಅವರಿಗೆ ನುಡಿನಮನ

Last Updated 12 ಜೂನ್ 2021, 13:42 IST
ಅಕ್ಷರ ಗಾತ್ರ

ಬೆಳಗಾವಿ: ‘ಕವಿ ಡಾ.ಸಿದ್ದಲಿಂಗಯ್ಯ ಅವರು ಬಡವರ ನಗುವಿನ ಶಕ್ತಿಯಾಗಿದ್ದರು’ ಎಂದು ಬಂಡಾಯ ಸಾಹಿತಿ ಡಾ.ಹೊಂಬಯ್ಯ ಹೊನ್ನಲಗೆರೆ ಹೇಳಿದರು.

ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಬಂಡಾಯ ಸಾಹಿತ್ಯ ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ಝೂಮ್ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ‘ಕ್ರಾಂತಿ ಪದಗಳ ಕವಿ ಸಿದ್ದಲಿಂಗಯ್ಯ ಅವರಿಗೆ ನುಡಿ ನಮನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಹುಟ್ಟಿದವರೆಲ್ಲರೂ ತಾವು ಹೋದ ಬಳಿಕ ಚರಿತ್ರೆಯಾಗಿ ಉಳಿಯುವುದಿಲ್ಲ. ಕೆಲವು ಕಾಲದಲ್ಲಿ ಕೆಲವರು ತಾವಿರುವಾಗಲೇ ಸೃಷ್ಟಿಸುತ್ತಾರೆ. ಮರಣದ ಬಳಿಕ ಚರಿತ್ರೆಯಾಗುತ್ತಾರೆ. ಅಂಥವರಲ್ಲಿ ನಮ್ಮ ಕಾಲದ ಬಂಡಾಯ ಕವಿ ಸಿದ್ದಲಿಂಗಯ್ಯ ಪ್ರಮುಖರು. 1970ರ ದಶಕದಲ್ಲಿ ಬಿ. ಬಸವಲಿಂಗಪ್ಪನವರ ಬೂಸಾ ಚಳವಳಿಯಲ್ಲಿ ಹೋರಾಟಗಾರರಾಗಿ ರೂಪುಗೊಂಡ ಅವರು ಬಡತನವನ್ನೇ ಹೋರಾಟದ ಶಕ್ತಿಯನ್ನಾಗಿಸಿಕೊಂಡರು’ ಎಂದು ನೆನೆದರು.

‘ದಲಿತ ಚಳವಳಿಯಲ್ಲಿ ಭಾಗವಹಿಸುತ್ತಲೇ ಅವರು 1975ರಲ್ಲಿ ಹೊಲೆಮಾದಿಗರ ಹಾಡು ಕವನಸಂಕಲನ ಪ್ರಕಟಿಸಿದರು. ಬರೆಯುತ್ತಲೇ ಹೋರಾಟದಲ್ಲಿ ಭಾಗವಹಿಸುತ್ತಾ, ಹೋರಾಡುತ್ತಲೇ ಬರೆದ ಈ ಸಂಕಲನ ಶೋಷಿತರ ಲೋಕವನ್ನು ಪ್ರತಿನಿಧಿಸುವ ಪ್ರಖರ ಧ್ವನಿಯಾಗಿ ಮೂಡಿ ಬಂತು. ಅದಕ್ಕಾಗಿಯೇ ಅವರನ್ನು ಕ್ರಾಂತಿ ಪದಗಳ ಕವಿ ಕರೆಯಲಾಗುತ್ತಿದೆ’ ಎಂದರು.

ನುಡಿ ನಮನ ಸಲ್ಲಿಸಿದ ಡಾ.ಅಶೋಕ ಡಿಸೋಜಾ, ‘ಕೋಮುವಾದ, ಖಾಸಗೀಕರಣದ ಪರಿಣಾಮ ಈಗ ನ್ಯಾಯ ಕೇಳುವುದೇ ಅಪರಾಧ ಎನ್ನುವಂತಾಗಿದೆ. ಈ ವೇಳೆ ಸಿದ್ದಲಿಂಗಯ್ಯನವರ ಕೆಲವು ಬರಹಗಳನ್ನು ಬಳಸಿಕೊಂಡು ಹಕ್ಕೊತ್ತಾಯದ ರೀತಿ, ತಮಿಳುನಾಡಿನ ಪೆರಿಯಾರ್ ಮಾದರಿಯಲ್ಲಿ ಬಂಡಾಯ ಹೂಡಬೇಕು ಮತ್ತು ನ್ಯಾಯ ಕೇಳಬೇಕು. ಇದೇ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ’ ಎಂದು ಹೇಳಿದರು.

ಸಂಶೋಧಕ ಡಾ.ಎಸ್.ಎಸ್. ಅಂಗಡಿ, ಸಾಹಿತಿಗಳಾದ ಡಾ.ಸುಬ್ಬರಾವ್ ಎಂಟೆತ್ತಿನವರ, ಡಾ.ಪಿ. ನಾಗರಾಜ, ಸಿದ್ದರಾಮ ತಳವಾರ, ರಾಜು ಸನದಿ, ಸಂತೋಷ ನಾಯಕ, ಅಕ್ಷತಾ ಯಳ್ಳೂರ ನುಡಿನಮನ ಸಲ್ಲಿಸಿದರು.

ಮಾನವ ಬಂಧುತ್ವ ವೇದಿಕೆಯ ರವೀಂದ್ರ ನಾಯ್ಕರ, ಕಮ್ಯುನಿಸ್ಟ್ ಚಳವಳಿಯ ಜಿ.ವಿ. ಕುಲಕರ್ಣಿ, ಎಲ್.ಎಸ್. ನಾಯಕ, ಎಸ್.ಕೆ. ಕುಲಕರ್ಣಿ, ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕ ಡಾ.ಅಡಿವೆಪ್ಪ ಇಟಗಿ, ಸುಧಾ ಕೊಟಬಾಗಿ, ವಿದ್ಯಾರ್ಥಿ ಸಂಘಟನೆಯ ಸಂಚಾಲಕರಾದ‌ ಮಂಜುನಾಥ ಪಾಟೀಲ, ಬಾಲಕೃಷ್ಣ ನಾಯಕ, ಸಚಿನ ಮಾಳಗೆ, ತೇಜಸ್ವಿನಿ ಲೋಕುರೆ, ಸಾಹಿತಿಗಳಾದ ಡಾ.ಚಂದ್ರು ತಳವಾರ, ಡಾ.ಕವಿತಾ ಕುಸಗಲ್ಲ, ಹಾಲಪ್ಪ ಪರೀಟ, ಶಿವರಾಜ ಬಳೆ, ಸಂಜೀವ ತಳವಾರ, ವಿಲಾಸ ಕಾಂಬಳೆ, ಸಂಜೀವ ಕಿವಡಗೋಳ, ಸಿದ್ಧಾರ್ಥನ್ ಚಿದಂಬರಮ್ ಭಾಗವಹಿಸಿದ್ದರು.

ಕವಿ ನದೀಮ್ ಸನದಿ ಸ್ವಾಗತಿಸಿದರು. ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ ಪ್ರಾಸ್ತಾವಿಕ ಮಾತನಾಡಿದರು. ಕಾವೇರಿ ಬುಕ್ಯಾಳಕರ ಕ್ರಾಂತಿ ಗೀತೆ ಹಾಡಿದರು. ಮಹೇಶ್ ಸಿಂಗೆ ವಂದಿಸಿದರು. ಜಿಲ್ಲಾ ಸಂಚಾಲಕ ದೇಮಣ್ಣ ಸೊಗಲದ ಹಾಗೂ ಆತೀಶ್ ಢಾಲೆ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT