ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಕ್ಷರಸ್ಥ ಮಹಿಳೆಯರ ಲೋಕಜ್ಞಾನಕ್ಕೂ ಮನ್ನಣೆ ಸಿಗಲಿ’

Last Updated 28 ಜನವರಿ 2018, 19:39 IST
ಅಕ್ಷರ ಗಾತ್ರ

ಬೆಂಗಳೂರು: ಅನಕ್ಷರಸ್ಥ ಮಹಿಳೆಯರ ಲೋಕಜ್ಞಾನಕ್ಕೂ ಸಮಾಜದಲ್ಲಿ ಮನ್ನಣೆ ಸಿಗಬೇಕಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಚಿತ್ರಾ ಸಹಸ್ರಬುದ್ಧೆ ಅಭಿಪ್ರಾಯಪಟ್ಟರು.

ಗ್ರಾಮ ಸೇವಾ ಸಂಘವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಲೋಕವಿದ್ಯೆ ಹಾಗೂ ಮಹಿಳೆ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಮಹಿಳೆ ಜ್ಞಾನದ ಒಡತಿ. ಅದನ್ನು ಗುರುತಿಸಿ, ಸಮಾಜದಲ್ಲಿ ಮೌಲ್ಯ ಸಿಗುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಸಂಕೋಲೆಗಳಲ್ಲಿ ಬಂದಿಯಾಗಿರುವ ಆಕೆಯ ಜ್ಞಾನಕ್ಕೆ ಈ ಮೂಲಕ ಬಿಡುಗಡೆಯ ಭಾಗ್ಯ ಕಲ್ಪಿಸಬೇಕು ಎಂದು ವಿದ್ಯಾ ಆಶ್ರಮದ ಸಂಸ್ಥಾಪಕ ಸದಸ್ಯೆಯೂ ಆಗಿರುವ ಚಿತ್ರಾ ಒತ್ತಾಯಿಸಿದರು.

‘ವಿಶ್ವವಿದ್ಯಾಲಯಗಳಲ್ಲಿನ ಜ್ಞಾನವೇ ಗುಣಮಟ್ಟದ್ದು ಎಂಬ ಭಾವನೆ ಸಮಾಜದಲ್ಲಿದೆ. ಅನಕ್ಷರಸ್ಥ ಮಹಿಳೆ ಓದಿನ ಮೂಲಕ ಜ್ಞಾನ ಪಡೆದಿಲ್ಲ ಎಂಬ ಕಾರಣಕ್ಕೆ ಅದನ್ನು ಅಲ್ಲಗೆಳೆಯಲಾಗುತ್ತಿದೆ. ಇದರಿಂದ ಸಮಾಜದ ಶೇ 80 ರಷ್ಟು ಮಹಿಳೆಯರ ಜ್ಞಾನ ಗುರುತಿಸಲು ವಿಫಲರಾಗಿದ್ದೇವೆ’ ಎಂದರು.

ಮನೆ ನಿರ್ವಹಣೆಯ ಜವಾಬ್ದಾರಿಯನ್ನು ಪರಿಪಕ್ವತೆಯಿಂದ ನಿರ್ವಹಿಸುತ್ತಿರುವ ಮಹಿಳೆ, ಮನೋವೈದ್ಯೆಯೂ ಹೌದು. ಮಕ್ಕಳಿಗೆ ಲೋಕಸತ್ಯವನ್ನು ತಿಳಿಸಿ, ಸಮಾಜದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ದಾರಿಯನ್ನು ಮಹಿಳೆಯೇ ತೋರಿಸಿ ಕೊಡುತ್ತಾಳೆ  ಎಂದು ವಿಶ್ಲೇಷಿಸಿದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ನೇತೃತ್ವದ ಚಳವಳಿಗಳು ವ್ಯಾಪಕಗೊಳ್ಳುತ್ತಿವೆ. ‘ಪಂಜರವನ್ನು ಮುರಿದು ಹಾಕಿ’ ಹಾಗೂ ‘#ಮೀ ಟೂ’ ಜನಾಂದೋಲನಗಳು ಉದಾಹರಣೆ. ಮಾಧ್ಯಮಗಳಿಂದಲೂ ಬೆಂಬಲ ಸಿಗುತ್ತಿದೆ. ಸಮಾನತೆ ಹಾಗೂ ಸ್ವಾಯತ್ತತೆಗಾಗಿ ಅವು ನಡೆಯುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.

ಇಂತಹ ಚಳವಳಿಗಳು ಹಾಗೂ ಜನಾಂದೋಲನಗಳಲ್ಲಿ ರೈತಾಪಿ ವರ್ಗ, ಕುಶಲಕರ್ಮಿಗಳು ಹಾಗೂ ಓದು–ಬರಹದಿಂದ ಆಚೆ ಉಳಿದಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಾಗಬೇಕು. ಆಗ ಮಾತ್ರ ಸ್ವಾಯತ್ತತೆ ಹಾಗೂ ಸಮಾನತೆ ಸಿಗಲು ಸಾಧ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT