ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿಗಾಗಿ ತೀವ್ರ ಹೋರಾಟ: ಪಂಚಮಸಾಲಿ ಶ್ರೀ

Last Updated 7 ಮೇ 2022, 13:58 IST
ಅಕ್ಷರ ಗಾತ್ರ

ಅಥಣಿ: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಹೋರರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಮೀಸಲಾತಿಗೆ ಆಗ್ರಹಿಸಿ ಇಲ್ಲಿ ಶನಿವಾರ ನಡೆದ ಧರಣಿ ಸತ್ಯಾಗ್ರಹ ಹಾಗೂ ಬೈಕ್ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

‘ಬಜೆಟ್ ಅಧಿವೇಶನ ಸಂದರ್ಭದಲ್ಲಿ ಮೀಸಲಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ನಮ್ಮ ಬೇಡಿಕೆ ಈಡೇರಿಲ್ಲ. ಸಮಾಜದವರೆಲ್ಲರೂ ಸೇರಿ ಕ್ರಾಂತಿ ಮಾಡುವ ಮುನ್ನ ಮೀಸಲಾತಿ ಕೊಡಬೇಕು’ ಎಂದು ಎಚ್ಚರಿಕೆ ನೀಡಿದರು.

‘15 ತಿಂಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಪ್ರತಿ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಸತ್ಯಾಗ್ರಹ ಕೈಗೊಳ್ಳಲಾಗುವುದು. ಆಗಲೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಮುಖ್ಯಮಂತ್ರಿ ಮನೆಯ ಎದುರು ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಅಥಣಿ ಶಾಸಕ ಮಹೇಶ ಕುಮಠಳ್ಳಿ ನಮ್ಮ ಹೋರಾಟಕ್ಕೆ ಸಹಕಾರ ನೀಡುವುದಾಗಿ ಪತ್ರ ಕೊಟ್ಟಿದ್ದಾರೆ. ಮೀಸಲಾತಿ ನೀಡುವುದರಿಂದ ನಿಮಗೇನಾದರೂ ಸಮಸ್ಯೆ ಇದ್ದರೆ ಹೇಳಿ’ ಎಂದು ಮುಖ್ಯಮಂತ್ರಿಯನ್ನು ಕೋರಿದರು.

‘ಸಮಾಜಕ್ಕೆ ಮೀಸಲಾತಿ ನೀಡುವಲ್ಲಿ ವಿಳಂಬ ಮಾಡಿದರೆ ತೊಂದರೆ ಆಗುತ್ತದೆ ಎನ್ನುವುದು ಬಿಜೆಪಿ ಹೈಕಮಾಂಡ್‌ಗೆ ಗೊತ್ತಿದೆ. ಆದ್ದರಿಂದ ಕೂಡಲೇ ಎಚ್ಚೆತ್ತುಕೊಳ್ಳಬೇಕು’ ಎಂದರು.

ಮುಖಂಡರಾದ ರಮೇಶಗೌಡ ಪಾಟೀಲ,ಶಶಿಕಾಂತ ಪಡಸಲಗಿ ಮೊದಲಾದವರು ಮಾತನಾಡಿದರು.

ಸಮಾಜದವರು ರಾಣಿ ಚನ್ನಮ್ಮ ವೃತ್ತದಿಂದ ತಹಶೀಲ್ದಾರ್‌ ಕಚೇರಿವರೆಗೆ ಬೈಕ್ ರ‍್ಯಾಲಿ ನಡೆಸಿದರು.

ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಅವಿನಾಶ ನಾಯಿಕ, ಯುವ ಘಟಕದ ಅಧ್ಯಕ್ಷ ಪರಶುರಾಮ ನಂದೇಶ್ವರ, ಮುಖಂಡರಾದ ಪ್ರಕಾಶ ಕುಮಠಳ್ಳಿ, ಧರೆಪ್ಪ ಠಕ್ಕಣ್ಣವರ, ಶಿವು ಸಿಂಧೂರ, ಬಸನಗೌಡ ಪಾಟೀಲ, ರವಿ ಪೂಜಾರಿ, ಮಲ್ಲಪ್ಪ ಹಂಚಿನಾಳ, ಗುರು ಆಜೂರ, ಚಿದಾನಂದ ಪಾಟೀಲ, ಮಲ್ಲಿಕಾರ್ಜುನ ಅಂದಾನಿ, ಸುನೀಲ ಕೆಂಚನ್ನವರ ‍ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT