ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಉದ್ಯಾನಗಳ ಸ್ಥಿತಿ ನಗರದಲ್ಲಿ ಪರವಾಗಿಲ್ಲ, ಪಟ್ಟಣದಲ್ಲಿ ಕೇಳೋರಿಲ್ಲ!

ತಾಲ್ಲೂಕು ಕೇಂದ್ರಗಳಲ್ಲಿ ಉದ್ಯಾನಗಳ ನಿರ್ವಹಣೆ ಕೊರತೆ
Last Updated 30 ನವೆಂಬರ್ 2020, 3:39 IST
ಅಕ್ಷರ ಗಾತ್ರ
ADVERTISEMENT
"ಗೋಕಾಕ ನಗರಸಭೆ ವ್ಯಾಪ್ತಿಯ ಹೈಸ್ಕೂಲ್ ರಸ್ತೆಯಲ್ಲಿ ಉದ್ಯಾನಕ್ಕೆ ಮೀಸಲಿರಿಸಿದ ಜಾಗದಲ್ಲಿ ನೆರೆ ಸಂತ್ರಸ್ತರಿಗೆ ಶೆಡ್ ಹಾಕಲಾಗಿದೆ"
""
""
"ಹುಕ್ಕೇರಿಯಲ್ಲಿನ ಪುರಸಭೆ ಉದ್ಯಾನ ಹಾಳಾಗಿದೆ"
"ಮೂಡಲಗಿಯ ಪೊಲೀಸ್‌ ವಸತಿ ಗೃಹಗಳ ಬಳಿ ಉದ್ಯಾನ ದುಸ್ಥಿತಿಯಲ್ಲಿದೆ"

ನಗರ, ಪಟ್ಟಣಗಳು ಬೆಳೆದಂತೆಲ್ಲಾ ಹಸಿರು ಕಣ್ಮರೆ ಆಗುತ್ತಿರುವುದರಿಂದಾಗಿ ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಉದ್ಯಾನಗಳಿಗೆ ಬೇಡಿಕೆ ಹೆಚ್ಚಿದೆ. ಬೆಳಗಾವಿ ಜಿಲ್ಲೆಯಲ್ಲಿ ಅವುಗಳ ‘ಪರಿಸ್ಥಿತಿ’ ಹೇಗಿದೆ ಎನ್ನುವುದನ್ನು ’ಪ್ರಜಾವಾಣಿ’ ಇಲ್ಲಿ ಕಟ್ಟಿಕೊಟ್ಟಿದೆ.

ಬೆಳಗಾವಿ: ಜನರ ವಾಯುವಿಹಾರ, ವ್ಯಾಯಾಮ ಹಾಗೂ ವಿಶ್ರಾಂತಿಗೆ, ಮಕ್ಕಳ ಆಟಕ್ಕೆ ಅಗತ್ಯವಾಗಿರುವ ಉದ್ಯಾನಗಳ ಸ್ಥಿತಿ ನಗರದಲ್ಲಿ ಪರವಾಗಿಲ್ಲ. ಆದರೆ, ತಾಲ್ಲೂಕು ಕೇಂದ್ರಗಳು ಮತ್ತು ಪಟ್ಟಣಗಳಲ್ಲಿ ನಿರ್ವಹಣೆ ಕೊರತೆಯಿಂದ ನಲುಗುತ್ತಿದೆ.

ಬೆಳಗಾವಿ ನಗರದಲ್ಲಿ 108 ಉದ್ಯಾನಗಳಿವೆ. ಅವುಗಳಲ್ಲಿ ಇತ್ತೀಚೆಗೆ ಅಭಿವೃವೃದ್ಧಿಪಡಿಸಿದ ಪಾರ್ಕ್‌ಗಳ ಸ್ಥಿತಿ ಚೆನ್ನಾಗಿದೆ. ಹನುಮಾನ್‌ ನಗರದ ಬಾಕ್ಸೈಟ್‌ ರಸ್ತೆಯಲ್ಲಿ ಕೇಂದ್ರ ಪುರಸ್ಕೃತ ‘ಅಮೃತ್’ ಯೋಜನೆಯಲ್ಲಿ ₹ 2.52 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಹೊಸ ಉದ್ಯಾನ ಆಕರ್ಷಿಸುತ್ತಿದೆ. ಅಲ್ಲಿ, ತೆರೆದ ಜಿಮ್ ಸೇರಿದಂತೆ ಹಲವು ಸೌಲಭ್ಯಗಳಿವೆ. ಈಜುಕೊಳ ಇದೆಯಾದರೂ ನೀರಿಲ್ಲ! ಶೌಚಾಲಯಗಳ ಬೀಗ ತೆಗೆದಿಲ್ಲ.

ದಕ್ಷಿಣದಲ್ಲಿ ಛತ್ರಪತಿ ಶಿವಾಜಿ ಉದ್ಯಾನ ಸೇರಿದಂತೆ ಹಲವು ಉತ್ತಮವಾಗಿವೆ. ವಿವಿಧೆಡೆ ಜಿಮ್‌ ಉಪಕರಣಗಳನ್ನು ಅಳವಡಿಸಲಾಗಿದೆ. ಮಕ್ಕಳಿಗೆ ಆಟೋಪಕರಣಗಳನ್ನೂ ಹಾಕಲಾಗಿದೆ. ಅರಣ್ಯ ಇಲಾಖೆಯು ವಿಟಿಯು ರಸ್ತೆಯಲ್ಲಿ ನಗರ ಉದ್ಯಾನ ಅಭಿವೃದ್ಧಿಪಡಿಸಿದೆ.

ವಡಗಾವಿ, ಶಾಹೂನಗರ, ಹನುಮಾನ್‌ನಗರ, ಸದಾಶಿವನಗರ, ನೆಹರೂ ನಗರ, ಶಹಾಪುರ, ಮಹಾಂತೇಶ ನಗರ, ರಾಮತೀರ್ಥ ನಗರ ಮೊದಲಾದ ಕಡೆಗಳಲ್ಲಿ ಉದ್ಯಾನಗಳು ನಿರ್ವಹಣೆ ಕೊರತೆ ಎದುರಿಸುತ್ತಿವೆ. ಆಟೋಪಕರಣಗಳು ಮುರಿದು ಬಿದ್ದಿವೆ. ಕಾಂಪೌಂಡ್‌ಗಳಿಲ್ಲ. ವಿದ್ಯುತ್ ದೀಪಗಳ ವ್ಯವವ್ಥೆ ಇಲ್ಲ.

ಮೂಡಲಗಿಯಲ್ಲಿ ನಿರ್ಲಕ್ಷ್ಯ

ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಏಳು ಉದ್ಯಾನಗಳಿವೆ. ಅವುಗಳಲ್ಲಿ ಬಹುತೇಕವು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಬಿಇಒ ಕಚೇರಿ ಬಳಿಯ ಉದ್ಯಾನ ಒಂದಿಷ್ಟು ಉತ್ತಮವಾಗಿದ್ದು, ಜನರು ಬಳಸುತ್ತಿದ್ದಾರೆ. ಪಿಎಸ್‌ಐ ವಸತಿ ಗೃಹ ಪಕ್ಕದಲ್ಲಿರುವ 2 ಉದ್ಯಾನಗಳಲ್ಲಿ ಕಳೆಗಿಡಗಳು ಬೆಳೆದಿವೆ. ಆಟೋಪಕರಣಗಳು ಹಾಳಾಗಿವೆ. ದುರಸ್ತಿಗೆ ಪುರಸಭೆ ಕ್ರಮ ಕೈಗೊಂಡಿಲ್ಲ.

‘ಕಾಂಪೌಂಡ್ ಇಲ್ಲದಿರುವುದರಿಂದ ಹಂದಿ, ಕತ್ತೆಗಳು ಓಡಾಡುತ್ತಿವೆ. ಉದ್ಯಾನಗಳಿಗೆ ಜೀವ ನೀಡಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಸ್ಥಳೀಯರು.

ಮೂಡಲಗಿಯ ಪೊಲೀಸ್‌ ವಸತಿ ಗೃಹಗಳ ಬಳಿ ಉದ್ಯಾನ ದುಸ್ಥಿತಿಯಲ್ಲಿದೆ

ಮೀಸಲಿಟ್ಟಿದ್ದ ಜಾಗ ನಿರಾಶ್ರಿತರ ತಾಣ!

ಗೋಕಾಕದ ಹೈಸ್ಕೂಲ್ ರಸ್ತೆಗೆ ಹೊಂದಿಕೊಂಡಿರುವ ಜಾಗವನ್ನು ಉದ್ಯಾನಕ್ಕೆ ಮೀಸಲಿಡಲಾಗಿತ್ತು. 2008ರಲ್ಲಿ ಘಟಪ್ರಭಾ ನದಿಗೆ ಮಹಾಪೂರ ಬಂದಾಗ, ನಿರಾಶ್ರಿತರಾದ ಜನರಿಗೆ ಉದ್ಯಾನದ ಜಾಗದಲ್ಲಿ ಶೆಡ್ ಹಾಕಿ ಆಶ್ರಯ ಕಲ್ಪಿಸಲಾಗಿದೆ. ಅವರಿಗೆ ಶಾಶ್ವತ ನೆಲೆ ಕಲ್ಪಿಸಿ, ಇಲ್ಲಿ ಉದ್ಯಾನ ಅಭಿವೃದ್ಧಿಪಡಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಇದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಗೋಕಾಕ ನಗರಸಭೆ ವ್ಯಾಪ್ತಿಯ ಹೈಸ್ಕೂಲ್ ರಸ್ತೆಯಲ್ಲಿ ಉದ್ಯಾನಕ್ಕೆ ಮೀಸಲಿರಿಸಿದ ಜಾಗದಲ್ಲಿ ನೆರೆ ಸಂತ್ರಸ್ತರಿಗೆ ಶೆಡ್ ಹಾಕಲಾಗಿದೆ

19ರಲ್ಲಿ 17 ಹಾಳಾಗಿವೆ

ಸವದತ್ತಿಯ ಯಲ್ಲಮ್ಮ ಪುರಸಭೆ ವ್ಯಾಪ್ತಿಯಲ್ಲಿ 19 ಉದ್ಯಾನಗಳಿವೆ. ರಾಮಾಪೂರ ಸೈಟ್ ಮಕ್ಕಳ ಉದ್ಯಾನ, ಗೋಕಾಕ ಮಿಲ್ ಹತ್ತಿರದವು ಮಾತ್ರ ಪರವಾಗಿಲ್ಲ. ಉಳಿದ 17 ಚಿಂತಾಜನಕ ಸ್ಥಿತಿಯಲ್ಲಿವೆ. ಹೊಸ ಬಡಾವಣೆಗಳಲ್ಲಿ ಉದ್ಯಾನಗಳಿಲ್ಲ. ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಆನಂದ ಮಾಮನಿ ಉದ್ಯಾನಗಳ ವಿಷಯದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ರಾಮಾಪೂರ ಸೈಟ್ ಉದ್ಯಾನ ಕಾಮಗಾರಿ ಕಳಪೆಯಾಗಿದ್ದು, ಪರಿಶೀಲಿಸುವಂತೆ ಸೂಚಿಸಿದ್ದರು. ಆದರೆ, ಅಧಿಕಾರಿಗಳು ಗಮನಹರಿಸಿಲ್ಲ ಎನ್ನುತ್ತಾರೆ ಜನರು.

ತಾಲ್ಲೂಕಾದರೂ ಉತ್ತಮ ಉದ್ಯಾನವಿಲ್ಲ

ಹುಕ್ಕೇರಿ ತಾಲ್ಲೂಕು ಕೇಂದ್ರವಾದರೂ ಉತ್ತಮ ಉದ್ಯಾನವಿಲ್ಲ. ಜಯನಗರ ಬಡಾವಣೆಯಲ್ಲಿ 2 ಉದ್ಯಾನಗಳಿದ್ದು, ನಿರ್ವಹಣೆ ಇಲ್ಲದೆ ಹಾಳಾಗಿವೆ. ಆಸನಗಳು, ಆಟೋಪಕರಣಗಳು ಬಳಕೆಗೆ ಬಾರದಂತಿವೆ.

‘ಪುರಸಭೆ ಆಡಳಿತ ಮಂಡಳಿ ರಚನೆ ವಿಳಂಬವಾಗಿದೆ. ಉಸ್ತುವಾರಿಯು ಅಧಿಕಾರಿಗಳ ಬಳಿ ಇತ್ತು. ಅವರು ಇತ್ತ ಗಮನಿಸಿಯೇ ಇಲ್ಲ’ ಎಂದು ನಿವಾಸಿ, ನಿವೃತ್ತ ಉಪ ತಹಶೀಲ್ದಾರ್ ಬಿ.ಎಸ್. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

‘ಈಚೆಗೆ ಆಡಳಿತ ಮಂಡಳಿ ರಚನೆಯಾಗಿದೆ. ಅವರು ಮುತುವರ್ಜಿ ವಹಿಸಿ ಉದ್ಯಾನಗಳನ್ನು ಸ್ವಚ್ಛಗೊಳಿಸಿ, ನೀರು ಮತ್ತು ವಿದ್ಯುತ್‌ದೀಪದ ವ್ಯವಸ್ಥೆ ಮಾಡಬೇಕು’ ಎಂದು ನಿವೃತ್ತ ಪ್ರಾಧ್ಯಾಪಕ ಚಂದ್ರಗೌಡ ಭರಮಗೌಡರ ಹಾಗೂ ನಿವೃತ್ತ ಶಿಕ್ಷಕ ಕುಂಬಾರ, ಡಿ.ಬಿ. ಹುಗ್ಗಿ ಒತ್ತಾಯಿಸಿದರು.

ಹುಕ್ಕೇರಿಯಲ್ಲಿನ ಪುರಸಭೆ ಉದ್ಯಾನ ಹಾಳಾಗಿದೆ

ಕಿತ್ತೂರಲ್ಲಿ: ನಕ್ಷೆಯಲ್ಲಷ್ಟೇ ಉದ್ಯಾನ!

ಏಳು ವರ್ಷಗಳ ಹಿಂದೆ ಕಿತ್ತೂರು ತಾಲ್ಲೂಕು ಘೋಷಣೆಯಾದ ಕೂಡಲೇ ಪಟ್ಟಣದ ಸುತ್ತಮುತ್ತ ಹೊಸ ಬಡಾವಣೆಗಳು ಆದವು. ಬಡಾವಣೆಯಲ್ಲಿ ಅಂಗನವಾಡಿ, ದೇವಸ್ಥಾನ ಮತ್ತು ಉದ್ಯಾನಗಳಿಗೆ ಜಾಗ ಬಿಡಬೇಕು ಎನ್ನುವುದು ನಿಯಮ. ಆದರೆ ಅದು ನಕ್ಷೆಗಳಿಗೆ ಸೀಮಿತವಾಗಿವೆ ಎಂಬ ದೂರುಗಳಿವೆ. ಪರಿಣಾಮ, ಹಲವು ಕಡೆಗಳಲ್ಲಿ ಉದ್ಯಾನಗಳಿಲ್ಲ.

ಹಾಳು ಕೊಂಪೆಯಂತಾಗಿದೆ

ಬೈಲಹೊಂಗಲದ ಮಿನಿ ವಿಧಾನಸೌಧ ಪಕ್ಕದ 28 ಗುಂಟೆ ಜಾಗದಲ್ಲಿ ಅಭಿವೃದ್ಧಿಪಡಿಸಿದ ಜಗಜ್ಯೋತಿ ಬಸವೇಶ್ವರರ ಉದ್ಯಾನ ಪುರಸಭೆ ನಿರ್ಲಕ್ಷ್ಯದಿಂದ ಹಾಳು ಕೊಂಪೆಯಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲ. ಬಸವೇಶ್ವರ ಪ್ರತಿಮೆ ಪ್ರತಿಷ್ಠಾಪಿಸಲಾಗಿದ್ದು, ಅದೂ ನಿರ್ವಹಣೆ ಕಂಡಿಲ್ಲ! ಆಸನಗಳು, ಜಾರು ಬಂಡೆ, ಉಯ್ಯಾಲೆಗಳು ತುಕ್ಕು ಹಿಡಿದಿವೆ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಬೈಲಹೊಂಗಲ ಮಿನಿ ವಿಧಾನಸೌಧ ಪಕ್ಕದ ಜಗಜ್ಯೋತಿ ಬಸವೇಶ್ವರ ಉದ್ಯಾನ ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಾಗಿದೆ

ಸೌಲಭ್ಯ ವಂಚಿತವಾಗಿವೆ

ರಾಮದುರ್ಗದ 27 ವಾರ್ಡ್‌ಗಳಲ್ಲಿ 39 ಸಾರ್ವಜನಿಕ ಉದ್ಯಾನಗಳಿವೆ. ಅವುಗಳಲ್ಲಿ ಒಂಬತ್ತನ್ನು ಪುರಸಭೆ ನಿರ್ವಹಿಸುತ್ತಿದೆ. ಅವು ಕೂಡ ಸೌಲಭ್ಯ ವಂಚಿತವಾಗಿವೆ. 30 ಉದ್ಯಾನಗಳು ಹಂದಿಗಳ ತಾಣವಾಗಿವೆ!

ಕೆಲವೆಡೆ ಮಕ್ಕಳ ಆಟಿಕೆ ಸಾಮಗ್ರಿ ಅಳವಡಿಸಿದ್ದನ್ನು ಬಿಟ್ಟರೆ ಇತರ ಸೌಲಭ್ಯಗಳಿಲ್ಲ. ಹೊಸ ಬಡಾವಣೆಗಳಲ್ಲಿ ಮಾತ್ರ ಉದ್ಯಾನಕ್ಕೆ ಜಾಗ ಕಾಯ್ದಿರಿಸಲಾಗಿದೆ. ಹಿಂದೆ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ಉದ್ಯಾನಗಳಿಲ್ಲ.

ಖಾನಾಪುರದಲ್ಲಿ ನಾಲ್ಕು ಸಾರ್ವಜನಿಕ ಪಾರ್ಕ್‌ಗಳಿವೆ. ಬಸ್ ನಿಲ್ದಾಣ ಬಳಿಯ ಡಾ.ಅಂಬೇಡ್ಕರ್ ಉದ್ಯಾನ ಚೆನ್ನಾಗಿದೆ. ದುರ್ಗಾನಗರ, ವರ್ದೇ ಕಾಲೊನಿ, ಹಾಗೂ ಮಿಷನ್ ಕಂಪೌಂಡ್ ಪ್ರದೇಶದಲ್ಲಿರುವ ಉದ್ಯಾನಗಳ ನಿರ್ವಹಣೆ ನಿರ್ಲಕ್ಷಿಸಲಾಗಿದೆ. ಇವುಗಳ ನಿರ್ವಹಣೆ ಜವಾಬ್ದಾರಿಯನ್ನು ಪ.ಪಂ. ಸರಿಯಾಗಿ ನಿಭಾಯಿಸುತ್ತಿಲ್ಲ. ಇವುಗಳನ್ನೂ ಅಭಿವೃದ್ಧಿಪಡಿಸಬೇಕು ಎನ್ನುವುದು ನಿವಾಸಿಗಳ ಆಗ್ರಹ.

ರಾಮದುರ್ಗದ ವಿಠ್ಠಲ ಪೇಟೆಯಲ್ಲಿ ಪುರಸಭೆಯ ಉದ್ಯಾನದ ಸ್ಥಿತಿ ಇದು...

ಜನರೇ ನಿರ್ವಹಿಸುತ್ತಿದ್ದಾರೆ

ನಿಪ್ಪಾಣಿ ಬೆಳೆಯುತ್ತಿದ್ದರೂ ಕೆಲವೇ ಉದ್ಯಾನಗಳಿವೆ. ಲೋಕಮಾನ್ಯ ತಿಲಕ್ ಉದ್ಯಾನ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪ್ರತಿಭಾ ನಗರದ ಉದ್ಯಾನವೂ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಕೆಲ ನಾಗರಿಕರು ನೇಚರ್ ಕ್ಲಬ್ ಸ್ಥಾಪಿಸಿ ನಿರ್ವಹಿಸುತ್ತಿದ್ದಾರೆ.

ಎಂ.ಕೆ. ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಉದ್ಯಾನ ನಿರ್ಮಾಣ ಕಾರ್ಯ ಈಚೆಗೆ ಆರಂಭಗೊಂಡಿದೆ. ಕಾಂಪೌಂಡ್ ಕಟ್ಟಲಾಗಿದೆ. 15ನೇ ಹಣಕಾಸು ಯೋಜನೆ ಅನುದಾನದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಾಧಿಕಾರಿ ಐ.ಸಿ‌. ಸಿದ್ನಾಳ ತಿಳಿಸಿದರು.

***

‍ಪ್ರತಿಕ್ರಿಯೆಗಳು

ಉದ್ಯಾನಗಳ ನಿರ್ವಹಣೆಗೆ ಅನುದಾನ ಅಥವಾ ಸಿಬ್ಬಂದಿ ಕೊರತೆ ಇಲ್ಲ. ನಿಯಮಿತವಾಗಿ ನಿರ್ವಹಿಸಲಾಗುತ್ತಿದೆ. ದೂರು ಬಂದ ಕೂಡಲೇ ಕ್ರಮ ವಹಿಸಲಾಗುತ್ತಿದೆ. ಆದರ್ಶ ನಗರದಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.

-ಸಚಿನ್ ಕಾಂಬ್ಳೆ, ಎಇಇ, ಮಹಾನಗರಪಾಲಿಕೆ, ಬೆಳಗಾವಿ

ಸರ್ಕಾರ ತುರ್ತು ಸಂದರ್ಭಗಳಲ್ಲಿ ತನ್ನ ನಿವೇಶನಗಳನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತದೆ. ಆದರೆ, ಸಹಜ ಸ್ಥಿತಿಗೆ ಮರಳಿದ ಮೇಲೆ ಜಾಗವನ್ನು ಮೀಸಲಿಟ್ಟಿದ್ದರ ಉದ್ದೇಶ ಮರೆಯುತ್ತದೆ. ಗೋಕಾಕದ ಹೈಸ್ಕೂಲ್ ರಸ್ತೆಯಲ್ಲಿ ಉದ್ಯಾನ ನಿರ್ಮಿಸಿ, ಆ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು.

-ಅಡಿವೆಪ್ಪ ತೋಟಗಿ, ಗೋಕಾಕ

ಬೈಲಹೊಂಗಲದ ಬಸವೇಶ್ವರ ಉದ್ಯಾನದ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಜನರಿಗೆ ಅನುಕೂಲ ಮಾಡಿಕೊಡಬೇಕು.

-ವೀರೇಶ ಹಲಕಿ, ಮುಖಂಡ, ಬೈಲಹೊಂಗಲ

ರಾಮದುರ್ಗದಲ್ಲಿ ಈ ಹಿಂದೆ ಅಭಿವೃದ್ಧಿಪಡಿಸಿದ ಉದ್ಯಾನಗಳಲ್ಲಿ ಸಮರ್ಪಕ ಸೌಲಭ್ಯಗಳಿಲ್ಲ. ಪುರಸಭೆಯಿಂದ ನಿರ್ವಹಿಸುವ ಉದ್ಯಾನಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು

-ಎಸ್‌.ಜಿ. ಅಂಬಿಗೇರ, ಮುಖ್ಯಾಧಿಕಾರಿ, ಪುರಸಭೆ, ರಾಮದುರ್ಗ

***

(ಪ್ರಜಾವಾಣಿ ತಂಡ: ಪ್ರದೀಪ ಮೇಲಿನಮನಿ, ಎನ್.ಪಿ. ಕೊಣ್ಣೂರ, ಚನ್ನಪ್ಪ ಮಾದರ, ರವಿ ಎಂ. ಹುಲಕುಂದ, ಪ್ರಸನ್ನ ಕುಲಕರ್ಣಿ, ಸುನೀಲ ಗಿರಿ, ಬಾಲಶೇಖರ ಬಂದಿ, ಬಸವರಾಜ ಶಿರಸಂಗಿ, ಎಸ್. ವಿಭೂತಿಮಠ, ರಾಮೇಶ್ವರ ಕಲ್ಯಾಣಶೆಟ್ಟಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT