ಕೊಡಗಿಗೆ ಪರಿಹಾರ; ನೆರವಿನ ಹಸ್ತ ಚಾಚಿದ ಜನತೆ

7

ಕೊಡಗಿಗೆ ಪರಿಹಾರ; ನೆರವಿನ ಹಸ್ತ ಚಾಚಿದ ಜನತೆ

Published:
Updated:
Deccan Herald

ಬೆಳಗಾವಿ: ದಕ್ಷಿಣ ಭಾರತದ ಕಾಶ್ಮೀರ ಎಂದು ಕರೆಯಿಸಿಕೊಳ್ಳುವ ಕೊಡಗು ಜಿಲ್ಲೆಯು ಅಪಾರ ಮಳೆಯಿಂದಾಗಿ ತತ್ತರಿಸಿಹೋಗಿದೆ. ನೆಲ ಕುಸಿಯುತ್ತಿದೆ, ಮನೆಗಳು ಬೀಳುತ್ತಿವೆ. ಅತಂತ್ರರಾದ ಜನರು ಬೀದಿಗೆ ಬಿದ್ದಿದ್ದಾರೆ. ಹಲವರು ಸರ್ಕಾರ ಆರಂಭಿಸಿರುವ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇವರಿಗೆ ನೆರವಾಗಲು ಕುಂದಾ ನಗರಿಯ ಜನರು ಹಾಗೂ ವಿವಿಧ ಸಂಘ ಸಂಸ್ಥೆಗಳು ಮುಂದಾಗಿವೆ.

ನಗರದ ಹಲವು ಸಂಘ– ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ನಿರಾಶ್ರಿತರಿಗೆ ಅವಶ್ಯಕವಾಗಿರುವಂತಹ ವಸ್ತುಗಳನ್ನು ಸಂಗ್ರಹಿಸುತ್ತಿವೆ. ಕನ್ನಡ ಪರ ವಿವಿಧ ಸಂಘಟನೆಗಳು ಅಶೋಕ ಚಂದರಗಿ ಅವರ ನೇತೃತ್ವದಲ್ಲಿ ₹ 25,000 ಮೊತ್ತದ ಔಷಧಿ, ಸ್ಯಾನಿಟರಿ ಪ್ಯಾಡ್‌, ಮೆಡಿಕಲ್‌ ಕಿಟ್‌, ಹಾಸಿಗೆ, ಹೊದಿಕೆಗಳು, ಪ್ಲೇಟ್‌ಗಳು ಹಾಗೂ ಗ್ಲಾಸ್‌ಗಳನ್ನು ರವಾನಿಸಿದರು.

ಬಿಸ್ಕಿಟ್‌, ಬ್ರೆಡ್‌ ಬೇಡ:

‘ಯಾವ ರೀತಿಯ ನೆರವು ಬೇಕೆಂದು ತಿಳಿದುಕೊಳ್ಳಲು ಮಡಿಕೇರಿಯಲ್ಲಿರುವ ನನ್ನ ಸ್ನೇಹಿತರನ್ನು ಸಂಪರ್ಕಿಸಿದೆ. ಆಹಾರ, ತಿಂಡಿ ತಿನಿಸು ಅಪಾರ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಆದರೆ ತುರ್ತಾಗಿ ಸ್ವೇಟರ್‌, ಮಂಕಿ ಕ್ಯಾಪ್‌, ಕೆಮ್ಮು ನೆಗಡಿಗೆ ಔಷಧಿ, ಮಲಗಲು ಹಾಸಿಗೆ ಬೇಕಾಗಿದೆ ಎಂದು ಹೇಳಿದ್ದಾರೆ. ಬಿಸ್ಕಿಟ್‌, ಬ್ರೆಡ್‌ ಬೇಡವೇ ಬೇಡ ಎಂದು ಹೇಳಿದ್ದಾರೆ. ಅದಕ್ಕಾಗಿ ಸಾರ್ವಜನಿಕರು ಅವರಿಗೆ ಅವಶ್ಯಕ ಇರುವ ವಸ್ತುಗಳನ್ನು ಕಳುಹಿಸಲು ವ್ಯವಸ್ಥೆ ಮಾಡಿಕೊಡಬೇಕು’ ಎಂದು ಅಶೋಕ ಚಂದರಗಿ ಕೋರಿದ್ದಾರೆ.

ಸಾಮಾಜಿಕ ತಾಣಗಳಲ್ಲಿಯೂ ಪ್ರಚಾರ:

ಕೆಲವು ಸಂಘ– ಸಂಸ್ಥೆಗಳು ಹಾಗೂ ವೈಯಕಿಕ್ತವಾಗಿ ಹಲವರು  ಸಾಮಾಜಿಕ ತಾಣಗಳಾದ ವಾಟ್ಸ್‌ ಆ್ಯಪ್‌ ಹಾಗೂ ಫೇಸ್‌ಬುಕ್‌ ಮೂಲಕ ದಾನಿಗಳನ್ನು ಸಂಪರ್ಕಿಸಲು ಮುಂದಾಗಿದ್ದಾರೆ. ನಗರದ ಅನಗೋಳ ನಿವಾಸಿ ಮಹದೇವ ಧರೆಣ್ಣವರ ಅವರು ತಮ್ಮ ‘ಮಿಷನ್‌ ಕ್ರಾಂತಿ ಸೇವಾ ಸಮಿತಿ’ ಮೂಲಕ ನೆರವು ಸಂಗ್ರಹಿಸಲು ಮುಂದಾಗಿದ್ದಾರೆ. ಸೋಮವಾರ ಹಾಗೂ ಮಂಗಳವಾರ ಎರಡು ದಿನಗಳ ಕಾಲ ನಗರದ ವಿವಿಧೆಡೆ ಸಂಚರಿಸಿ, ನೆರವು ಸಂಗ್ರಹಿಸಲಿದ್ದಾರೆ. ನಂತರ ಹುಬ್ಬಳ್ಳಿ ಮಾರ್ಗವಾಗಿ ಮಡಿಕೇರಿ ಕಳುಹಿಸಿಕೊಡಲಿದ್ದಾರೆ.

‘ಸಾಮಾಜಿಕ ಕಾರ್ಯಗಳನ್ನು ಮಾಡುವ ಉದ್ದೇಶದಿಂದಲೇ ನಾನು ‘ಮಿಷನ್‌ ಕ್ರಾಂತಿ ಸೇವಾ ಸಮಿತಿ’ ಸಂಸ್ಥೆಯನ್ನು ಹುಟ್ಟುಹಾಕಿದೆ. ಸುಮಾರು 60 ಜನ ಸದಸ್ಯರಾಗಿದ್ದಾರೆ. ನಾವೆಲ್ಲರೂ ಸಣ್ಣಪುಟ್ಟ ಕೆಲಸ ಮಾಡುತ್ತೇವೆ. ನಮ್ಮ ಆದಾಯದ ಸ್ವಲ್ಪ ಸ್ವಲ್ಪ ಹಣವನ್ನು ಉಳಿಸಿ, ಇಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇವೆ’ ಎಂದರು.

ತಮ್ಮ ವಾಟ್ಸ್‌ ಆ್ಯಪ್‌ ಹಾಗೂ ಫೇಸ್‌ಬುಕ್‌ ಮೂಲಕ ದಾನಿಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಯಾರಾದರೂ ಸ್ವಯಂ ಪ್ರೇರಣೆಯಿಂದ ನೆರವು ನೀಡಲು ಮುಂದಾದರೆ ಅದನ್ನು ನಾವು ಮಡಿಕೇರಿಗೆ ತಲುಪಿಸಲು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.

ಕೇರಳಕ್ಕೂ ನೆರವು:

ಕೇರಳ ರಾಜ್ಯದಲ್ಲಿ ಕಂಡು ಕೇಳರಿಯದ ಪ್ರವಾಹ ಉಂಟಾಗಿದ್ದು, ಸಾವಿರಾರು ಜನರು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇವರಿಗೆ ಜೀವನಾವಶ್ಯಕ ವಸ್ತುಗಳನ್ನು ಸಾರ್ವಜನಿಕರು ನೀಡಿದರೆ ಅವುಗಳನ್ನು ಉಚಿತವಾಗಿ ವಿಮಾನಗಳ ಮೂಲಕ ಸಾಗಿಸುವುದಾಗಿ ಬೆಳಗಾವಿ ವಿಮಾನ ಪ್ರಾಧಿಕಾರದ ವಿಮಾನನಿಲ್ದಾಣದ ನಿರ್ದೇಶಕ ರಾಜೇಶ ಕುಮಾರ ಮೌರ್ಯ ಹೇಳಿಕೆ ನೀಡಿದ್ದಾರೆ.

 

 

 

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !