ಶನಿವಾರ, ಆಗಸ್ಟ್ 13, 2022
26 °C

ಬೆಳಗಾವಿ: ಸಮರ್ಪಕ ನೀರು ಪೂರೈಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರವು ಆರಂಭದಿಂದಲೂ ರಾಮತೀರ್ಥನಗರಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತ ಬಂದಿದೆ. ನಗರದ ಅನೇಕ ಕಡೆ ದಿನದ 24 ಗಂಟೆಯೂ ನೀರು ಪೂರೈಕೆಯಾಗುತ್ತಿದೆ. ನಿರಂತರ ಯೋಜನೆ ಇರದ ಪ್ರದೇಶದಲ್ಲಿ ನಾಲ್ಕು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ರಾಮತೀರ್ಥ ನಗರಕ್ಕೆ ತಿಂಗಳಲ್ಲಿ ಮೂರು ಬಾರಿ ಮಾತ್ರ ನೀರು ಬಿಡಲಾಗುತ್ತಿದೆ.

ಆಸ್ತಿ ತೆರಿಗೆ, ನೀರಿನ ತೆರಿಗೆ ಪಾವತಿಸುವಲ್ಲಿ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಈ ಬಡಾವಣೆ ಮುಂಚೂಣಿಯಲ್ಲಿ ಇದೆ. ಆದರೆ, ‘ಬುಡಾ’ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಕನಿಷ್ಠ ನಾಲ್ಕು ದಿನಕ್ಕೊಮ್ಮೆಯಾದರೂ ನೀರು ಪೂರೈಸಿ ಎಂದು ಪದೇಪದೇ ಮನವಿ ಮಾಡಿದರೂ ಅಧಿಕಾರಿಗಳು ಗಮನ ಕೊಟ್ಟಿಲ್ಲ.

ಮೇಲಾಗಿ, ಇಲ್ಲಿನ ಕನ್ನಡ ಪ್ರಾಥಮಿಕ ಶಾಲೆ, ಸ್ಟೇಡಿಯಂ, ಮತ್ಸ್ಯಭವನ ಹಾಗೂ ಉದ್ಯಾನ ಸಮೀಪದ ಮನೆಗಳ ಜನ ದಿನವೂ ಕೊಡ ಹೊತ್ತುಕೊಂಡು ನೀರಿಗಾಗಿ ಅವರಿವರ ಮನೆಗೆ ಅಲೆಯಬೇಕಾಗಿದೆ. ಮಳೆಗಾಲದಲ್ಲಿಯೇ ಇಂಥ ಸ್ಥಿತಿಯಾದರೆ ಬೇಸಿಗೆಯಲ್ಲಿ ನಮ್ಮ ಗೋಳು ಹೇಳತೀರದರು. ಈಗಲಾದರೂ ಜಿಲ್ಲಾ ಉಸ್ತುವಾರಿ ಸಚಿವರು ಖುದ್ದು ಭೇಟಿ ನೀಡಿ ಇಲ್ಲಿನ ಸಮಸ್ಯೆ ಬಗೆಹರಿಸಬೇಕು.

ರೂಪೇಶ ಪಾಟೀಲ, ವಿನೂತಾ ಕರಗಾಂವೆ, ರೋಹಿಣಿ ಮಜಗಾಂವ, ವೀರೇಶಕುಮಾರ ಹಿರೇಮಠ, ರಾಮತೀರ್ಥ ನಗರ ನಿವಾಸಿಗಳು

ರಸ್ತೆ ಉಬ್ಬು ನಿರ್ಮಿಸಿ

ಚಿಕ್ಕೋಡಿ: ಕರ್ನಾಟಕ– ಮಹಾರಾಷ್ಟ್ರ ಮಧ್ಯೆ ಸಂಪರ್ಕ ಕೊಂಡಿಯಾಗಿರುವ ಕಾರಣ ಚಿಕ್ಕೋಡಿ ಪಟ್ಟಣ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಉಪವಿಭಾಗೀಯ ಕೇಂದ್ರ ಸ್ಥಾನವಾಗಿರುವ ಚಿಕ್ಕೋಡಿ ಪಟ್ಟಣದಲ್ಲಿ ವಾಹನ ದಟ್ಟಣೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಬಳಿ ಶಾಲಾ– ಕಾಲೇಜು ಸಂಕೀರ್ಣವಿದೆ. ನಿತ್ಯ ಹಲವಾರು ವಿದ್ಯಾರ್ಥಿಗಳು ಓಡಾಡುತ್ತಾರೆ. ಇದಕ್ಕೆ ಹೊಂದಿಕೊಂಡ ಬಸ್ ನಿಲ್ದಾಣದ ಪಕ್ಕದಿಂದಲೇ ನಿಪ್ಪಾಣಿ– ಮುಧೋಳ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಇದರಿಂದಾಗಿ ಇಲ್ಲಿ ವಾಹನ ಮತ್ತು ಜನ ಸಂಚಾರ ಅಧಿಕ.

ರಸ್ತೆ ಉಬ್ಬುಗಳು ಇಲ್ಲದ ಕಾರಣ ವಾಹನಗಳ ವೇಗ ತಗ್ಗುವುದೇ ಇಲ್ಲ.‌ ಅತಿ ವೇಗದಿಂದಾಗಿ ಅಪಘಾತಗಳು ಸಂಭವಿಸಿದ ನಿದರ್ಶನಗಳಿವೆ. ಆದ್ದ
ರಿಂದ ಎನ್.ಎಂ. ರಸ್ತೆಯಲ್ಲಿ ಉಬ್ಬುಗಳನ್ನು ನಿರ್ಮಿಸುವ ಅಗತ್ಯವಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಇದರತ್ತ ಗಮನ ಹರಿಸಬೇಕು.

ರಾಜು ಸಂಕೇಶ್ವರೆ, ಚಿಕ್ಕೋಡಿ

ರಸ್ತೆ ದುರಸ್ತಿ ಯಾವಾಗ?

ಹುಲಕುಂದ: ರಾಮದುರ್ಗ ತಾಲ್ಲೂಕಿನ ಹುಲಕುಂದ ಗ್ರಾಮದ 1ನೇ ವಾರ್ಡಿನಲ್ಲಿ ರಸ್ತೆಗಳು ಹಾಳಾಗಿವೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪಿಡಿಒ ಅವರಿಗೆ ಪದೇಪದೇ ಮನವರಿಕೆ ಮಾಡಿದರೂ ರಸ್ತೆ ದುರಸ್ತಿ ಮಾಡಿಲ್ಲ.

ಕೆಲವು ಕಡೆ ಕಲ್ಲು–ಮಣ್ಣಿನ ರಸ್ತೆ ಇದ್ದರೂ ಮಳೆಗಾಲದಲ್ಲಿ ಸಂಚಾರ ಸಂಕಟವಾಗಿದೆ. ಈಗಲಾದರೂ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ದುರಸ್ತಿ ಮಾಡಬೇಕು.

ಗ್ರಾಮಸ್ಥರು, ಹುಲಕುಂದ

ಗಬ್ಬೆದ್ದು ನಾರುತ್ತಿದೆ ಮೂತ್ರಾಲಯ

ಕಟಕೋಳ: ರಾಮದುರ್ಗ ತಾಲ್ಲೂಕಿನ ಕಟಕೋಳ ಗ್ರಾಮದ ಬಸ್‌ ನಿಲ್ದಾಣದಲ್ಲಿರುವ ಪುರುಷರ ಮೂತ್ರಾಲಯ ಸ್ವಚ್ಛತೆ ಇಲ್ಲದೇ ಗಬ್ಬೆದ್ದು ನಾರುತ್ತಿದೆ.

ಹಲವರು ಗುಟ್ಕಾ, ಪಾನ್‌ ತಿಂದು ಎಲ್ಲೆಂದರಲ್ಲಿ ಉಗಿದಿದ್ದಾರೆ. ಈಗ ಮಳೆ ಬಂದಿದ್ದರಿಂದ ಮೂತ್ರಾಲಯದ ಸುತ್ತ ನೀರು ನಿಂತಿದೆ. ಇದರಲ್ಲಿಯೇ ಮೂತ್ರವು ಬೆರೆತಿದ್ದರಿಂದ ಬಸ್‌ ನಿಲ್ದಾಣದ ಪರಿಸರ ಮಾಲಿನ್ಯದಿಂದ ಕೂಡಿದೆ.

ದೂರದಲ್ಲಿ ಕುಳಿತ ಪ್ರಯಾಣಿಕರಿಗೂ ಇದರ ವಾಸನೆ ಅಸಹ್ಯವಾಗಿದೆ. ಸೊಳ್ಳೆ, ಕ್ರಿಮಿ– ಕೀಟಗಳ ಕಾಟ ಹೆಚ್ಚಾಗಿದೆ. ಜನರು ರೋಗಪೀಡಿತರಾಗುವ ಆತಂಕ ಎದುರಾಗಿದೆ. ಸಂಬಂಧಪಟ್ಟವರು ಕೂಡಲೇ ಇದನ್ನು ಸ್ವಚ್ಛಗೊಳಿಸಬೇಕು.

ಸುರೇಶ ಜಂಬಗಿ, ಗ್ರಾಮಸ್ಥ

ಹದಗೆಟ್ಟ ರಸ್ತೆ ದುರಸ್ತಿ ಮಾಡಿ

ಬೈಲಹೊಂಗಲ: ಸಮೀಪದ ಮುರಗೋಡ, ಕಾರಿಮನಿ ಗ್ರಾಮ ಪ್ರವೇಶಿಸುವ ಮುಖ್ಯ ರಸ್ತೆ ಡಾಂಬರು ಕಿತ್ತು ಸಂಪೂರ್ಣ ಹಾಳಾಗಿದೆ.

4 ಕಿ.ಮೀ. ರಸ್ತೆ ಹದಗೆಟ್ಟಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ರಸ್ತೆಯಲ್ಲಿ ಬರೀ ಕಲ್ಲು, ಮಣ್ಣು ಇವೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ, ಜಮೀನುಗಳಿಗೆ ತೆರಳುವ ರೈತರಿಗೆ ನಿತ್ಯ ತೊಂದರೆ ಆಗಿದೆ.

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಹದಗೆಟ್ಟ ಮುರಗೋಡ, ಕಾರಿಮನಿ ಮುಖ್ಯ ರಸ್ತೆ ದುರಸ್ತಿಗೊಳಿಸಬೇಕು.

ಚಿದಾನಂದ ಹಾರೂಗೊಪ್ಪ, ಚಿದಂಬರ ಮೇಟಿ, ಮುರಗೋಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು