ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಲಹೊಂಗಲ | ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ‌ ಜೆಡಿಎಸ್ ಪ್ರತಿಭಟನೆ

Published 16 ಜೂನ್ 2024, 13:05 IST
Last Updated 16 ಜೂನ್ 2024, 13:05 IST
ಅಕ್ಷರ ಗಾತ್ರ

ಬೈಲಹೊಂಗಲ: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ‌ ಜೆಡಿಎಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಭಾನುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪಟ್ಟಣದ ಇಂಚಲ ಕ್ರಾಸ್ ನಲ್ಲಿ ಸೇರಿದ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಕೂಗಿದರು.

ನೇತೃತ್ವ ವಹಿಸಿದ್ದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, 'ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಕಡಿಮೆ ಮಾಡಿದರೆ ರಾಜ್ಯ ಸರ್ಕಾರ ಏರಿಕೆ ಮಾಡಿರುವುದು ಸರಿಯಲ್ಲ. ಜನರ ಪಾಲಿಗೆ ಕಾಂಗ್ರೆಸ್ ಸರ್ಕಾರ ಶಾಪವಾಗಿದೆ. ಏರಿಕೆ ಮಾಡಿರುವ ಎಲ್ಲಾ ಬೆಲೆಗಳನ್ನು ಇಳಿಸಬೇಕು. ಇಲ್ಲದಿದ್ದರೆ ಅಧಿಕಾರದಿಂದ ಇಳಿಯಬೇಕು. ಬೆಲೆ ಇಳಿಸದಿದ್ದರೆ ಜನಾಂದೋಲನ ಮೂಲಕ ಅಧಿಕಾರದ ಗದ್ದುಗೆಯಿಂದ ಇಳಿಸಿ ತಕ್ಕ‌ ಪಾಠ ಕಲಿಸಬೇಕಾಗುತ್ತದೆ' ಎಂದು ಎಚ್ಚರಿಸಿದರು.

ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುನೀಲ ವೇರ್ನೆಕರ್ ಮಾತನಾಡಿ, 'ಜನಸಾಮಾನ್ಯರ ಜೀವನದ ಮೇಲೆ ಬರೆ ಎಳೆಯುತ್ತಿರುವ ರಾಜ್ಯ ಸರ್ಕಾರದ ಆಡಳಿತ ವೈಖರಿ ಖಂಡನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ನೀಡಿ ಸರ್ಕಾರ ವಿಸರ್ಜಿಸಿ, ನಾಡಿನ ಜನರ ಕ್ಷಮೆ ಕೇಳಬೇಕು' ಎಂದು ಒತ್ತಾಯಿಸಿದರು.

ಮುಖಂಡರಾದ ಈರಣ್ಣ ಹಾದಿಮನಿ, ಸಂಗೊಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಇಮಾಮ್ ಹುಸೇನ್ ಖುದ್ಧನವರ ಮಾತನಾಡಿದರು.

ಎಸ್.ಕೆ.ಪಾಟೀಲ, ಎಸ್.ಎಸ್. ಬಾಗೇವಾಡಿ, ಪಕ್ಕೀರ ಕಡಕೋಳ, ಸುರೇಶ್ ಯಲ್ಲನಾಯ್ಕರ್, ಬಡ್ಲಿ ನದಾಫ ,ನಾಗಪ್ಪ ಸಂಗೋಳ್ಳಿ ಇದ್ದರು.

ಇಂಚಲ ಕ್ರಾಸ್‌ನಲ್ಲಿ ರಸ್ತೆ ಬಂದ್ ಮಾಡಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT