ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕಾಕ | ವ್ಯಾಪಾರಿ ಅಪಹರಿಸಿ ₹6.90 ಲಕ್ಷ ವಸೂಲಿ: ಇಬ್ಬರು ಆರೋಪಿಗಳ ಬಂಧನ

Published 28 ನವೆಂಬರ್ 2023, 16:07 IST
Last Updated 28 ನವೆಂಬರ್ 2023, 16:07 IST
ಅಕ್ಷರ ಗಾತ್ರ

ಗೋಕಾಕ: ಮಹಾರಾಷ್ಟ್ರದ ಮೋಡ್ಕಾ (ಸ್ಕ್ರ್ಯಾಪ್‌) ವ್ಯಾಪಾರಿಯನ್ನು ಅಪಹರಿಸಿ ₹6.90 ಲಕ್ಷ ಹಣ ಪಡೆದಿದ್ದ ಇಬ್ಬರು ಆರೋಪಿಗಳನ್ನು ಗೋಕಾಕ ಶಹರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಚಿಕ್ಕೋಡಿ ಪಟ್ಟಣದ ಶಿವಾನಂದ ಪಾಟೀಲ (35) ಮತ್ತು ಪ್ರಕಾಶ ಪಾಟೀಲ (38) ಬಂಧಿತರು. ನ.19ರಂದು ವ್ಯಾಪಾರಿಯನ್ನು ಅಪಹರಣ ಮಾಡಿ, ಹಣ ಪಡೆದು ನ.23ರಂದು ಬಿಟ್ಟಿದ್ದರು. ಈ ಬಗ್ಗೆ ವ್ಯಾಪಾರಿ ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ಕಬ್ಬಿಣದ ವ್ಯರ್ಥ ಸಾಮಗ್ರಿಗಳ ವ್ಯಾಪಾರಿ, ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಪನ್ವೇಲ್ ತಾಲ್ಲೂಕಿನ ಕಲಾಂಬೋಳಿಯ ನಿವಾಸಿ ವೆಂಕಟೇಶ ಬಾಳಯ್ಯ ಬಿನ್ನಿ (58) ಅಪಹರಣಕ್ಕೆ ಒಳಗಾದವರು.

ಆರೋಪಿಗಳು ತಮ್ಮ ಬಳಿ ಅಪಾರ ಪ್ರಮಾಣದ ಮೋಡ್ಕಾ ಸಾಮಗ್ರಿ ಇದೆ ಎಂದು ನಂಬಿಸಿ ವ್ಯಾಪಾರಿಯನ್ನು ಕರೆಸಿದ್ದರು. ವ್ಯಾಪಾರಿ ಗೋಕಾಕ ನಗರಕ್ಕೆ ಬಂದಾಗ ಅಪಹರಿಸಿದ್ದರು. ಮೂರು ದಿನ ತಮ್ಮ ವಾಹನದಲ್ಲೇ ಊರಿಂದ ಊರಿಗೆ ಅಲೆದಾಡಿಸಿದ್ದರು. ಮುಧೋಳ, ಸಂಕೇಶ್ವರ, ನಿಪ್ಪಾಣಿಯಲ್ಲಿ ಒಂದೊಂದು ದಿನ ಜಾಗ ಬದಲಾಯಿಸಿದ್ದರು.

ವ್ಯಾಪಾರಿ ಪುತ್ರನಿಗೆ ಫೋನ್‌ ಮಾಡಿ ₹1 ಕೋಟಿ ಹಣ ಕೇಳಿದ್ದರು. ಹಣ ಕೊಡದಿದ್ದರೆ ವ್ಯಾಪಾರಿಗೆ ಪ್ರಜ್ಞೆ ತಪ್ಪುವ ಚುಚ್ಚುಮದ್ದು ನೀಡಿ, ರೈಲು ಹಳಿಗಳ ಮೇಲೆ ಮಲಗಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಹೆದರಿದ ವ್ಯಾಪಾರಿಯ ಪುತ್ರ ಬಳಿ ಇರುವ ₹6 ಲಕ್ಷ ಕೊಡುವುದಾಗಿ ಒಪ್ಪಿದ್ದರು.

ಅವರ ಪುತ್ರ ಗೋಕಾಕ ಬಂದ ಮೇಲೆ ಆತನಿಂದ ₹6 ಲಕ್ಷ ನಗದು ಪಡೆದಿದ್ದರು. ಅಲ್ಲದೇ ಸಂಕೇಶ್ವರದಲ್ಲಿ ವ್ಯಾಪಾರಿಯ ಎಟಿಎಂ ಬಳಸಿ ₹90 ಸಾವಿರ ತೆಗೆಸಿಕೊಂಡಿದ್ದರು. ತಂದೆ– ಮಗ ಇಬ್ಬರನ್ನೂ ನಿಪ್ಪಾಣಿಗೆ ಕರೆದೊಯ್ದು ರೈಲು ನಿಲ್ದಾಣದ ಬಳಿ ಬಿಟ್ಟು ಪರಾರಿಯಾಗಿದ್ದರು.

ಗೋಕಾಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಗೆ ಮಹಾರಾಷ್ಟ್ರಕ್ಕೆ ಪ್ರಕರಣ ವರ್ಗಾಯಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT