ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಶಕ್ತಿ: ಸಂಘಟಿತರಾಗಲು ಸಲಹೆ

ಮಾದಿಗ (ನೇರವಾದಿ) ಸಮಾಜದ ಚಿಂತನಾ ಸಭೆ
Last Updated 1 ಜುಲೈ 2018, 11:42 IST
ಅಕ್ಷರ ಗಾತ್ರ

ಬೆಳಗಾವಿ: ಮಾದಿಗ ಸಮಾಜದವರು ರಾಜಕೀಯ ಶಕ್ತಿ ಪಡೆದುಕೊಳ್ಳಲು ಸಂಘಟಿತರಾಗಬೇಕು ಎಂದು ವಿಧಾನಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪೂರ ಹೇಳಿದರು.

ಇಲ್ಲಿನ ಪಶು ವೈದ್ಯರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಾದಿಗ (ನೇರವಾದಿ) ಸಮಾಜದ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು. ‘ಸಮಾಜ ಅಭಿವೃದ್ಧಿ ಹೊಂದಲು ರಾಜಕೀಯ ಶಕ್ತಿಯ ಕೀಲಿ ಅತ್ಯಗತ್ಯ. ಇದು ದೊರೆಯದೇ ಇರುವುದರಿಂದ, ನ್ಯಾ.ಸದಾಶಿವ ಆಯೋಗದ ವರದಿ ಶಿಫಾರಸು ಜಾರಿಗೆ ತರುವುದಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಪ್ರಸ್ತುತ ಸರ್ಕಾರದ ಸಚಿವ ಸಂಪುಟದಲ್ಲಿ ಸಮಾಜಕ್ಕೆ ಪ್ರಾತಿನಿಧ್ಯ ದೊರೆತಿಲ್ಲ. ಇದರಿಂದಾಗಿ ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತಾಡುವವರು ಇಲ್ಲವಾಗಿದ್ದೇವೆ’ ಎಂದು ವಿಷಾದಿಸಿದರು.

ಸಹಿಸಿಕೊಳ್ಳಬಾರದು:

‘ಅನ್ಯಾಯವಾಗಿರುವುದು ಪ್ರಸ್ತಾಪಿಸಿದರೆ, ಸಮಾಜದವರ ಸಭೆ ನಡೆಸಿದರೆ ಸಚಿವ ಸ್ಥಾನಕ್ಕಾಗಿ ಹೀಗೆ ಮಾತನಾಡುತ್ತಿದ್ದಾರೆ ಎನ್ನುತ್ತಾರೆ. ಹೀಗಾಗಿ, ಸುಮ್ಮನಿದ್ದೇನೆ. ಮಂತ್ರಿಯಾಗಲಿ, ಬಿಡಲಿ ಸಮಾಜದ ಕೆಲಸಗಳಿಗೆ ಮುಂದಿರುತ್ತೇನೆ. ಬೆಳೆಯುವ ನಾಯಕರನ್ನು ಹತ್ತಿಕ್ಕಲು ಷಡ್ಯಂತ್ರ ನಡೆಯುತ್ತಿರುತ್ತದೆ. ಇದನ್ನು ವಿರೋಧಿಸಿ ಶಕ್ತಿ ಪ್ರದರ್ಶಿಸಬೇಕು. ನಾಯಕರು ಬಲಿಯಾದರೆ ಇಡೀ ಸಮಾಜಕ್ಕೆ ತೊಂದರೆ ಆಗುತ್ತದೆ ಎನ್ನುವುದನ್ನು ಮರೆಯಬಾರದು’ ಎಂದು ಮಾರ್ಮಿಕವಾಗಿ ಹೇಳಿದರು. ‘ಆಯೋಗದ ವರದಿ ಶಿಫಾರಸು ಯಥಾವತ್ತಾಗಿ ಜಾರಿಯಾಗದಿದ್ದರೂ, ಇಂದಲ್ಲ ನಾಳೆ ಜನಸಂಖ್ಯೆಗೆ ಅನುಗುಣವಾಗಿ ಸಮಾಜಕ್ಕೆ ಮೀಸಲಾತಿ ಸಿಕ್ಕೇ ಸಿಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೌಲಭ್ಯ ಬಳಸಿಕೊಳ್ಳಿ:

‘ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ, ಗುತ್ತಿಗೆದಾರರಿಗೆ ಮೀಸಲಾತಿ ಜಾರಿಗೊಳಿಸಲಾಗಿದೆ. ಇದನ್ನು ಬಳಸಿಕೊಳ್ಳಬೇಕು. ಆರ್ಥಿಕವಾಗಿ ಮುಂದೆ ಬರಬೇಕು. ಸಮಾಜದವರು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸಹಾಯ ಮಾಡಬೇಕು. ರಾಜಕೀಯ ಲಾಭ ಪಡೆದುಕೊಳ್ಳುವವರ ಕುಮ್ಮಕ್ಕಿಗೆ ಒಳಗಾಗಿ ಜಾತಿನಿಂದನೆ ಪ್ರಕರಣ ದಾಖಲಿಸುವುದನ್ನು ಬಿಡಬೇಕು’ ಎಂದು ಸಲಹೆ ನೀಡಿದರು.

ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ‘36 ವಿಧಾನಸಭಾ ಕ್ಷೇತ್ರಗಳು ಮೀಸಲಾಗಿವೆ. ಇದರಲ್ಲಿ ಅರ್ಧದಷ್ಟು ಮಂದಿಯಾದರೂ ಮಾದಿಗ ಸಮಾಜದವರು ಆಯ್ಕೆ ಆಗಬೇಕಾಗಿತ್ತು. ನಮಗೆ ದನಿ ಇಲ್ಲದಿರುವುದರಿಂದ ತೊಂದರೆಯಾಗುತ್ತಿದೆ. ದನಿ ಇರುವವರು ಸರ್ಕಾರದ ಮೇಲೆ ಒತ್ತಡ ಹಾಕಿ, ನ್ಯಾ.ಸದಾಶಿವ ಆಯೋಗದ ವರದಿಯ ಶಿಫಾರಸು ಜಾರಿಯಾಗದಂತೆ ನೋಡಿಕೊಳ್ಳುತ್ತಾರೆ’ ಎಂದು ಆರೋಪಿಸಿದರು.

‘ನಾನು ಬಿಜೆಪಿಯಲ್ಲಿದ್ದರೂ ಸಮಾಜದ ವಿಷಯ ಬಂದಾಗ ಹೋರಾಟಕ್ಕೆ ಹಿಂಜರಿಯುವುದಿಲ್ಲ. ಈ ಸರ್ಕಾರದಲ್ಲಿ ತಿಮ್ಮಾಪೂರ ಅವರನ್ನು ಸಚಿವರನ್ನಾಗಿ ಮಾಡಬೇಕಿತ್ತು’ ಎಂದರು.

ಯುವಜನರು ಎಚ್ಚೆತ್ತುಕೊಳ್ಳಬೇಕು:

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಮಾತನಾಡಿ, ‘ದೇಶದಲ್ಲಿ ಪ್ರತಿ ದಿನ ದಲಿತರ 24 ಮನೆಗಳಿಗೆ ಬೆಂಕಿ ಹಾಕಲಾಗ್ತಿದೆ. ಮೂವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಪ್ರತಿ 18 ನಿಮಿಷಕ್ಕೊಬ್ಬ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎನ್ನುತ್ತವೆ ಅಂಕಿ ಅಂಶಗಳು. ನಾಲ್ಕು ವರ್ಷದಲ್ಲಿ 50ಸಾವಿರಕ್ಕಿಂತಲೂ ಹೆಚ್ಚಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದು ಕಳವಳಕಾರಿ ಸಂಗತಿಯಾಗಿದೆ’ ಎಂದು ತಿಳಿಸಿದರು.

ಮಾದಿಗ ಸಮಾಜದ ಉಪಾಧ್ಯಕ್ಷ ಬಿ.ಎಸ್. ಮಾಳಗಿ ಮಾತನಾಡಿ, ‘ಸಮಾಜಕ್ಕೆ ಹಿಂದಿನಿಂದಲೂ ಅನ್ಯಾಯವಾಗಿದೆ. ದೇವದಾಸಿ ಪದ್ಧತಿಗೆ ದೂಡಲಾಗಿದೆ. ಅಸ್ಪೃಶ್ಯರಲ್ಲಿ ಅಸ್ಪೃಶ್ಯರಾಗಿದ್ದೇವೆ. ರಾಜಕೀಯವಾಗಿಯೂ ಬಹಳ ಅನ್ಯಾಯವಾಗಿದೆ.ಇದೆಲ್ಲವನ್ನೂ ಅರಿಯುವ ಕಾಲ ಈಗ ಬಂದಿದೆ. ಯುವಜನರು ಎಚ್ಚೆತ್ತುಕೊಳ್ಳಬೇಕು’ ಎಂದರು.

ಮುಖಂಡ ಹನುಮಂತಪ್ಪ ಅಲ್ಕೋಡ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ರಾಜೇಂದ್ರ ಐಹೊಳೆ, ಪ್ರಶಾಂತರಾವ ಐಹೊಳೆ, ಯಲ್ಲಪ್ಪ ವಕ್ಕುಂದ, ಮೀನಾಕ್ಷಿ ಜೋಡಟ್ಟಿ, ಎನ್. ಪರುಶಪ್ಪ, ಬಾಬು ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT