ಸೋಮವಾರ, ನವೆಂಬರ್ 18, 2019
23 °C

ವೇತನ ಪರಿಷ್ಕರಣೆಗೆ ಆಗ್ರಹಿಸಿ ಮನವಿ

Published:
Updated:
Prajavani

ಅಥಣಿ: ‘ಹಲವು ವರ್ಷಗಳಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಅರೆಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ತಮಗೆ ವೇತನ ಹೆಚ್ಚಿಸಬೇಕು ಮತ್ತು ಸೇವಾ ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿ ಉಪನ್ಯಾಸಕರರು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಿದರು.

ಉಪನ್ಯಾಸಕ ಆರ್‌.ಎ. ಬಡಿಗೇರ ಮಾತನಾಡಿ, ‘ನಮಗೆ ತಿಂಗಳಿಗೆ ₹ 7500 ವೇತನ ನಿಗದಿಪಡಿಸಲಾಗಿದೆ. ವಾರ್ಷಿಕ ಒಮ್ಮೆ ಅಥವಾ ಎರಡು ಬಾರಿ ವೇತನ ಕೊಡಲಾಗುತ್ತಿದೆ. ವರ್ಷದಲ್ಲಿ 8 ತಿಂಗಳ ಮಾತ್ರ ವೇತನ ದೊರೆಯುತ್ತಿದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಾಗೂ ಕಾಲೇಜಿನ ಅಭಿವೃದ್ಧಿಯಲ್ಲಿ ನಾವು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಆದರೆ, ಸರ್ಕಾರ ನಮ್ಮನ್ನು ಕಡೆಗಣಿಸಿದೆ’ ಎಂದು ದೂರಿದರು.

‘ಪ್ರೌಢಶಾಲೆಗಳ ಅಥಿತಿ ಉಪನ್ಯಾಸಕರಿಗೆ ₹ 8000 ವೇತನ ಕೊಡಲಾಗುತ್ತಿದೆ. ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು ₹ 12ಸಾವಿರವನ್ನು 10 ತಿಂಗಳಿಗೆ ಪಡೆಯುತ್ತಿದ್ದಾರೆ. ಆದರೆ, ನಮಗೆ ತಾರತಮ್ಯ ಮಾಡಲಾಗುತ್ತಿದೆ. 13 ವರ್ಷಗಳಿಂದ ವೇತನ ಪರಿಷ್ಕರಣೆ ಮಾಡಲಾಗಿಲ್ಲ. ಈಗಲಾದರೂ ಅನ್ಯಾಯ ಸರಿಪಡಿಸಬೇಕು’ ಎಂದು ಕೋರಿದರು.

ಬಾಳಪ್ಪ ನಂದೇಶ್ವರ, ರಾವಸಾಬ ಅಂಬಿ, ಬಸವರಾಜ ಹಿಪ್ಪರಗಿ, ಮಂಜುನಾಥ ಬಡಿಗೇರ, ಸುರೇಶ ಚೌಗಲಾ, ವಿಠಲ ಕೆಂಪವಾಡ, ಶಿವಾನಂದ ಕೆಂಪವಾಡ, ಸುರೇಶ ಪುಟಾಣಿ ಇದ್ದರು.

ಪ್ರತಿಕ್ರಿಯಿಸಿ (+)