ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಯುವ ಕೈಗೆ ಸಿಗದ ಕೆಲಸ; ತಾಯಿಗೆ ಅನ್ನ ಹಾಕಲಾಗದೇ ಉಸಿರು ಬಿಟ್ಟ ಯುವಕ!

ದುಡಿಯುವ ಕೈಗೆ ಸಿಗದ ಕೆಲಸ, ಎಷ್ಟು ಅಲೆದರು ಸಿಗದ ಊಟ, ನಿತ್ರಾಣಗೊಂಡ ತಾಯಿ ನೋಡಲಾಗದೇ ಸಾವು
Published 3 ಫೆಬ್ರುವರಿ 2024, 5:40 IST
Last Updated 3 ಫೆಬ್ರುವರಿ 2024, 5:40 IST
ಅಕ್ಷರ ಗಾತ್ರ

ಖಾನಾಪುರ: ಕಿತ್ತು ತಿನ್ನುವ ಬಡತನ, ಹಸಿದ ಹೊಟ್ಟೆ, ಕೇಳಿದರೂ ಸಿಗದ ಕೆಲಸ, ಅಲೆದು ಬಳಲಿದ ಜೀವ, ವಯಸ್ಸಾದ ತಾಯಿಗೆ ತುತ್ತು ಅನ್ನ ಹಾಕಲಾಗದೇ ಮನನೊಂದು ಆತ್ಮಹತ್ಯೆಗೆ ಶರಣಾದ ಯುವಕ!

ಹೌದು. ತಾಲ್ಲೂಕಿನ ನಂದಗಡ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಯುವಕನ ಆತ್ಮಹತ್ಯೆ ಮನಕಲಕುವ ದಾರುಣ ಕಥೆಯಿದೆ.

ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗೊತ್ತಾಗಿತ್ತು. ಆದರೆ, ಗುರುವಾರ ಪೊಲೀಸರು ನಡೆಸಿದ ತನಿಖೆ ಆತನ ಕಣ್ಣೀರ ಕಥೆ ಹೇಳುವಂತಿದೆ. ಹೊಟ್ಟೆಗೆ ಅನ್ನವಿಲ್ಲದೇ ತಾಯಿಯನ್ನು ನೋಡಿಕೊಳ್ಳಲಾಗದೇ ಆ ವ್ಯಕ್ತಿ ಕೊನೆಯುಸಿರು ಎಳೆದಿದ್ದಾನೆ ಎಂಬುದು ಗೊತ್ತಾಗಿದೆ.

ಹಾವೇರಿ ಜಿಲ್ಲೆಯ ಯಲಗಚ್ಚು ಗ್ರಾಮದ ಬಸವರಾಜ ವೆಂಕಟ (30) ಆತ್ಮಹತ್ಯೆ ಮಾಡಿಕೊಂಡವರು. ಇವರ ತಂದೆ ಬಹಳ ಹಿಂದೆಯೇ ತೀರಿಹೋಗಿದ್ದಾರೆ. ತಾಯಿ ಶಾಂತವ್ವ (55) ಜೊತೆ ವಾಸಿಸುತ್ತಿದ್ದರು. ಹೊಟ್ಟೆಪಾಡಿಗಾಗಿ ಊರು ತೊರೆದು ಅಲೆಮಾರಿಗಳಾಗಿದ್ದರು. ಕೆಲಸ ಸಿಕ್ಕರೆ ಮಾಡುವುದು, ಸಿಗದಿದ್ದಾಗ ಭಿಕ್ಷೆ ಬೇಡುವುದು ಅವರ ದಿನಚರಿ.

ಕಳೆದ ವಾರ ತಾಯಿ–ಮಗ ಹುಬ್ಬಳ್ಳಿಯಿಂದ ರೈಲನ್ನೇರಿ ಗೋವಾ ರಾಜ್ಯಕ್ಕೆ ತೆರಳಿದ್ದರು. ಅಲ್ಲಿಯೂ ಕೆಲಸ ಸಿಗದ ಕಾರಣ ಜ.30ರಂದು ಮರಳಿ ಹುಬ್ಬಳ್ಳಿಯತ್ತ ಹೊರಟಿದ್ದರು. ಇವರ ಬಳಿ ಟಿಕೆಟ್‌ ಇಲ್ಲದ ಕಾರಣ ಪೊಲೀಸರು ಅಳ್ನಾವರ ನಿಲ್ದಾಣದಲ್ಲಿ ರೈಲಿನಿಂದ ಕೆಳಗಿಳಿಸಿದ್ದರು.

ಗೋವಾದಲ್ಲಿ ಅಲೆದು ನಾಲ್ಕು ದಿನಗಳಿಂದ ಊಟವಿಲ್ಲದೇ ತಾಯಿ ನಿತ್ರಾಣಗೊಂಡಿದ್ದರು. ಅವರನ್ನು ನಿಲ್ದಾಣದಲ್ಲಿ ಕೂರಿಸಿದ ಬಸವರಾಜ, ಊಟ ತರುವುದಾಗಿ ಹೇಳಿ ಹೋಗಿದ್ದರು. ಅಳ್ನಾವರದಲ್ಲಿ ಕೆಲಸಕ್ಕಾಗಿ, ಊಟಕ್ಕಾಗಿ ಎಷ್ಟೇ ಅಲೆದರೂ ತುತ್ತು ಅನ್ನ ಸಿಗಲಿಲ್ಲ. ಹೆತ್ತ ತಾಯಿಗೆ ತುತ್ತು ಅನ್ನ ಹಾಕಲು ಆಗಲಿಲ್ಲ ಎಂದು ಭಾರವಾದ ಮನಸ್ಸಿನಿಂದ ಯುವಕ ದಿಕ್ಕು ತೋಚದೇ ಪರದಾಡಿದರು. ದುಃಖ ತಾಳದೇ ಲಿಂಗನಮಠ ಗ್ರಾಮದ ಬಳಿ ಮಾವಿನ ಮರಕ್ಕೆ ನೇಣು ಹಾಕಿಕೊಂಡರು ಎಂದು ಪೊಲೀಸರು ತಿಳಿಸಿದರು.

ಕರಳು ಹಿಂಡಿದ ತಾಯಿ ನೋವು: ಮೃತನ ಜೇಬಿನಲ್ಲಿದ್ದ ಮೊಬೈಲ್‌ನ ಜಾಡು ಹಿಡಿದು ಹೋದಾಗ ತಾಯಿ– ಮಗನ ವಿವರ ಗೊತ್ತಾಗಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಪೊಲೀಸರು ಶವವನ್ನು ತಾಯಿಗೆ ಒಪ್ಪಿಸಿದರು. ಆಸ್ಪತ್ರೆಯ ಬಳಿ ಮಗನ ಶವದ ಮುಂದೆ ದಿಕ್ಕು ತೋಚದೇ ಕುಳಿತ ತಾಯಿ ಕಂಡು ಮರುಕಪಡವರೇ ಇಲ್ಲ.

ಈ ವೇಳೆ ಅವರ ಸಹಾಯಕ್ಕೆ ಧಾವಿಸಿದ್ದು ಖಾನಾಪುರದ ಕದಂಬ ಫೌಂಡೇಶನ್ ಸಂಸ್ಥಾಪಕ ಜಾರ್ಡನ್ ಗೊನ್ಸಾಲ್ವಿಸ್. ತಮ್ಮ ಸ್ನೇಹಿತರಾದ ಕುಮಾರ ತಂಗಂ, ಮೈಕಲ್ ಅಂದ್ರಾದೆ ಅವರೊಂದಿಗೆ ಖಾನಾಪುರ ಪಟ್ಟಣ ಪಂಚಾಯಿತಿ ಸಂಪರ್ಕಿಸಿ, ಶವ ಸಾಗಿಸುವ ವಾಹನದಲ್ಲಿ ಬಸವರಾಜ ಅವರ ದೇಹವನ್ನು ನಂದಗಡಕ್ಕೆ ಸಾಗಿಸಿದರು. ಅಲ್ಲಿ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದರು.

ಶಾಂತಮ್ಮ
ಶಾಂತಮ್ಮ

ಸಿಗದ ‘ಗ್ಯಾರಂಟಿ’ ಸೌಕರ್ಯ

‘ಪತಿ ಕಳೆದುಕೊಂಡರೂ ಶಾಂತವ್ವ ಅವರಿಗೆ ವಿಧವಾ ವೇತನ ವೃದ್ಧಾಪ್ಯ ವೇತನ ಸಿಕ್ಕಿಲ್ಲ. ಕನಿಷ್ಠ ಪಕ್ಷ ಗೃಹಲಕ್ಷ್ಮಿ ಕೂಡ ಅವರಿಗೆ ದೊರೆತಿಲ್ಲ. ದುಡಿಯುವ ಶಕ್ತಿ ಇದ್ದರೂ ಮಗನಿಗೆ ಕೆಲಸ ಸಿಕ್ಕಿಲ್ಲ. ಮಗ ಹಸಿವಿನಿಂದ ಸತ್ತುಹೋದ. ತಾಯಿ ಸರ್ಕಾರಿ ಸೌಕರ್ಯ ಸಿಗದೇ ಬಳಲುತ್ತಿದ್ದಾರೆ’ ಎಂದು ಕದಂಬ ಫೌಂಡೇಶನ್ ಸಂಸ್ಥಾಪಕ ಜಾರ್ಡನ್ ಗೊನ್ಸಾಲ್ವಿಸ್ ಬೇಸರ ವ್ಯಕ್ತಪಡಿಸಿದರು.

‘ಅಲೆಮಾರಿಗಳಿಗೆ ಸರ್ಕಾರಿ ಸೌಲಭ್ಯ ತಲುಪಿಸುವ ಕೆಲಸ ಮಾಡಬೇಕು. ಅನಾಥವಾದ ಶಾಂತವ್ವ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯ ಕಲ್ಪಿಸಬೇಕು’ ಎಂದೂ ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT