ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾಕರ ಕೋರೆ ನಮ್ಮೊಂದಿಗೇ ಇದ್ದಾರೆ: ಸಿ.ಎಂ ಬಸವರಾಜ ಬೊಮ್ಮಾಯಿ

Last Updated 11 ಜೂನ್ 2022, 10:38 IST
ಅಕ್ಷರ ಗಾತ್ರ

ಬೆಳಗಾವಿ: ‘ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ಅಮೆರಿಕಕ್ಕೆ ಹೋಗುವುದಾಗಿ ನನಗೆ ಮುಂಚೆಯೇ ಹೇಳಿದ್ದರು. ಆರು ತಿಂಗಳ ಹಿಂದೆಯೇ ಅವರ ಕಾರ್ಯಕ್ರಮ ನಿಗದಿಯಾಗಿದ್ದರಿಂದ, ವಿಧಾನ ಪರಿಷತ್‌ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಳ್ಳಲು ಅವರಿಗೆ ಆಗಿಲ್ಲ. ಆದರೆ, ನಮ್ಮ ಅಭ್ಯರ್ಥಿಗಳು ಗೆಲ್ಲಲು ಏನು ಬೇಕೋ ಅದನ್ನು ಮಾಡಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಕೋರೆ ಅವರು ನಮ್ಮ ಹಿರಿಯರು, ಮಾರ್ಗದರ್ಶಕ. ಅವರ ಕೊಡುಗೆಯನ್ನು ಪಕ್ಷವೂ ಗುರುತಿಸುತ್ತದೆ, ನಾವೂ ಗುರುತಿಸುತ್ತೇವೆ. ಸುದೀರ್ಘ ನಾಲ್ಕು ದಶಕಗಳ ಅವರ ಸಾರ್ವಜನಿಕ ಸೇವೆಯು ನಮಗೆ ಮಾರ್ಗದರ್ಶಿ. ಅವರಿಗೆ ಪಕ್ಷದಲ್ಲಿ ಮಹತ್ವ ನೀಡಿಲ್ಲ ಎಂಬುದು ಬರೀ ಊಹಾಪೋಹ’ ಎಂದು ಅವರು ನಗರದಲ್ಲಿ ಶನಿವಾರ ಮಧ್ಯಮದವರಿಗೆ ತಿಳಿಸಿದರು.

‘ಬೆಳಗಾವಿಯಲ್ಲಿ ಬಿಜೆಪಿ ಒಗ್ಗಟ್ಟಿನಿಂದ ಸಾಗಿದೆ. ಎಲ್ಲ ಶಾಸಕರು ಈಗಾಗಲೇ ಅವರ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಾರೆ. ಇಲ್ಲಿನ ಸಾಹುಕಾರ್‌ಗಳು (ಜಾರಕಿಹೊಳಿ ಹಾಗೂ ಕತ್ತಿ ಸಹೋದರರು) ಕೂಡ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ರಾಜ್ಯಸಭೆಯಲ್ಲಿ ಮೂರು ಸ್ಥಾನ ಗೆದ್ದಿರುವ ಖುಷಿಯಲ್ಲಿದ್ದೇವೆ. ವಿಧಾನ ಪರಿಷತ್‌ನಲ್ಲಿ ನಾಲ್ಕೂ ಸ್ಥಾನ ಗೆಲ್ಲುತ್ತೇವೆ. ಮುಂದಿನ ವಿಧಾನಸಭೆ ಚುನಾವಣೆಗೆ ಇದು ಹುಮ್ಮಸ್ಸು ನೀಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಪಕ್ಷವೇ ಬಿಜೆಯ ‘ಬಿ ಟೀಮ್‌’ ಎಂದು ಜೆಡಿಎಸ್‌ನವರು ಹೇಳುತ್ತಾರೆ. ಜೆಡಿಎಸ್‌ ಪಕ್ಷವೇ ಬಿಜೆಪಿಯ ‘ಬಿ ಟೀಮ್‌’ ಎಂದು ಕಾಂಗ್ರೆಸ್ಸಿಗರು ದೂರುತ್ತಾರೆ. ಹೀಗಾಗಿ, ಬಿಜೆಪಿ ಯಾವಾಗಲೂ ‘ಎ ಟೀಮ್‌’ ಎಂಬುದನ್ನು ಎಲ್ಲರೂ ಒಪ್ಪಿಕೊಂಡಂತಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಜೆಡಿಎಸ್‌ ಪಕ್ಷವನ್ನು ಮುಗಿಸಲು ಹೊರಟಿದ್ದೇವೆ ಎಂದು ಕುಮಾರಸ್ವಾಮಿ ಪದೇಪದೇ ಹೇಳುತ್ತಾರೆ. ಆದರೆ, ಯಾವುದೇ ಪಕ್ಷವನ್ನು ಯಾರೂ ಮುಗಿಸಲು ಸಾಧ್ಯವಿಲ್ಲ. ಆ ಪಕ್ಷ ಜನರಿಗೆ ಏನು ಮಾಡುತ್ತದೆಯೋ ಅದರ ಮೇಲೆ ಮುಳುಗುವ ಅಥವಾ ಮೇಲೇಳುವುದು ನಿರ್ಧಾರವಾಗುತ್ತದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT