ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: 20 ಗುಂಡಿ ತೋಡಿ ಅಂತ್ಯಕ್ರಿಯೆಗೆ ಸಿದ್ಧತೆ!

Last Updated 1 ಮೇ 2021, 14:28 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್–19 ಮತ್ತಿತರ ಕಾರಣದಿಂದ ಮೃತರಾದವರ ಅಂತ್ಯಸಂಸ್ಕಾರಕ್ಕೆ ಇಲ್ಲಿನ ಸ್ಮಶಾನಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಿದ್ಧತೆಯನ್ನು ಇತ್ತೀಚೆಗೆ ಮಾಡಿಕೊಳ್ಳಲಾಗುತ್ತಿದೆ. ಮರಣ ಪ್ರಮಾಣ ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

ಸದಾಶಿವನಗರ ಸ್ಮಶಾನದಲ್ಲಿ ಅಲ್ಲಲ್ಲಿ ಕಟ್ಟಿಗೆಗಳಿಂದ ಚಿತೆ ಸಿದ್ಧ‍ಪಡಿಸಲಾಗಿದೆ. ಶುಕ್ರವಾರ ಒಂದೇ ದಿನ ಅಲ್ಲಿ 14 ಅಂತ್ಯಸಂಸ್ಕಾರ ನಡೆದಿತ್ತು. ಇನ್ನೊಂದೆಡೆ, ಅಂಜುಮನ್ ಇಸ್ಲಾಂ ಖಬರಸ್ತಾನದಲ್ಲಿ ಗುಂಡಿಗಳನ್ನು ತೆಗೆದು ಸಿದ್ಧತೆ ಕೈಗೊಳ್ಳಲಾಗಿದೆ. ಜೆಸಿಬಿ ಬಳಸಿ ಒಂದೇ ದಿನ 20 ಗುಂಡಿಗಳನ್ನು ಅಲ್ಲಿನ ಸಿಬ್ಬಂದಿ ತೋಡಿಸಲಾಗಿದೆ. ಮೃತದೇಹಗಳನ್ನು ಹೂಳುವುದಕ್ಕಾಗಿ ಈ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು.

ಅಂಜುಮನ್-ಇ-ಇಸ್ಲಾಂ ಸಂಸ್ಥೆಯ ಸ್ವಯಂಸೇವಕರು ಅಲ್ಲಿ ಕೋವಿಡ್ ಭೀತಿಯ ನಡುವೆಯೂ ಎಲ್ಲ ಧರ್ಮೀಯರ ಅಂತ್ಯಕ್ರಿಯೆ ನೆರವೇರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

‘ಸುಡುವುದು ಹಾಗೂ ಹೂಳುವ ಮೂಲಕ ಅಂತ್ಯಸಂಸ್ಕಾರ ಮಾಡುತ್ತಿದ್ದೇವೆ. ಆಯಾ ಧರ್ಮದವರ ವಿಧಿವಿಧಾನದ ಪ್ರಕಾರ ನೆರವೇರಿಸುತ್ತಿದ್ದೇವೆ. ಮಾನವೀಯತೆ ಆಧಾರದ ಮೇಲೆ ಈ ಕೆಲಸ ನಿರ್ವಹಿಸುತ್ತಿದ್ದೇವೆ. ಸದಾಶಿವ ನಗರ ಸ್ಮಶಾನ ಹಾಗೂ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದೇವೆ. ಶುಕ್ರವಾರ ಐದು ಶವಗಳ ಅಂತ್ಯಕ್ರಿಯೆ ಮಾಡಿದ್ದೇವು. ಶನಿವಾರ ನಾಲ್ಕು ನಡೆಸಿದ್ದೇವೆ’ ಎಂದು ಅಲ್ಲಿನ ಮುಖಂಡ ಅಶ್ಫಾಕ್ ತಿಳಿಸಿದರು.

‘ಯಾವುದೇ ಸಮಯದಲ್ಲಿ ಬಂದರೂ ನೆರವೇರಿಸುತ್ತಿದ್ದೇವೆ. ನಗರದಲ್ಲಿ ಕ್ರಮೇಣ ಮರಣ ಪ್ರಮಾಣ ಹೆಚ್ಚಾಗುತ್ತಿದೆ. ಖಬರಸ್ತಾನದಲ್ಲಿ ಹಿಂದೆ ನಿತ್ಯ 2–3 ಶವಗಳನ್ನು ಹೂಳುತ್ತಿದ್ದೆವು. ಕೆಲವು ದಿನಗಳಿಂದ ನಿತ್ಯ ಸರಾಸರಿ ವಿವಿಧ ಕಾರಣಗಳಿಂದ 10 ಅಂತ್ಯಕ್ರಿಯೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.

‘ಆಮ್ಲಜನಕ ಸಿಲಿಂಡರ್‌ ಪೂರೈಕೆ, ಔಷಧಿ, ಅಂತ್ಯಕ್ರಿಯೆಗೆ ನೆರವು ಸೇರಿದಂತೆ ತುರ್ತು ಸಂದರ್ಭದಲ್ಲಿ ಸಂಸ್ಥೆಯನ್ನು ಸಂಪರ್ಕಿಸಬಹುದು. ನಮ್ಮ ಸ್ವಯಂಸೇವಕರು ತ್ವರಿತವಾಗಿ ಸಹಾಯ ಮಾಡುತ್ತಾರೆ’ ಎಂದು ಅಂಜುಮನ್-ಇ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ರಾಜು ಸೇಠ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT