ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ |ಅಧಿವೇಶನಕ್ಕೆ ಸಿದ್ಧತೆ: ಜೆಸಿಬಿ ಬಳಸಿ ಅಪಾರ ಹುಲ್ಲು ನಾಶ, ರೈತರ ಆಕ್ರೋಶ

ಸಂತೋಷ ಈ. ಚಿನಗುಡಿ
Published 24 ನವೆಂಬರ್ 2023, 6:54 IST
Last Updated 24 ನವೆಂಬರ್ 2023, 6:54 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದ ಸುತ್ತ ಬೆಳೆದ ಅಪಾರ ಪ್ರಮಾಣದ ಹುಲ್ಲನ್ನು ಜೆಸಿಬಿ ಬಳಸಿ ಕಿತ್ತೆಸೆಯಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ಹಲಗಾ, ಬಸ್ತವಾಡ, ಅಲಾರವಾಡ, ಕೊಂಡಸಕೊಪ್ಪ ಗ್ರಾಮಗಳ  ರೈತರು, ಜಿಲ್ಲಾಡಳಿತ ವಿರುದ್ಧ ಕಿಡಿ ಕಾರಿದ್ದಾರೆ.

ಬರೋಬ್ಬರಿ 127 ಎಕರೆ ಜಾಗವನ್ನು ಸುವರ್ಣ ವಿಧಾನಸೌಧಕ್ಕೆ ಬಳಸಿಕೊಳ್ಳಲಾಗಿದೆ. ಮುಖ್ಯ ಕಟ್ಟಡ ಹಾಗೂ ಸುತ್ತಲಿನ ಉದ್ಯಾನದ ಭಾಗವನ್ನು ಹೊರತು‍ಪಡಿಸಿದರೆ, ವಿಶಾಲವಾದ ಜಾಗ ಖಾಲಿ ಇದೆ. ಅಲ್ಲಿ ಅಪಾರ ಪ್ರಮಾಣದ ಹುಲ್ಲು ಹುಲುಸಾಗಿ ಬೆಳೆದಿದೆ. ಡಿ.4ರಿಂದ ಅಧಿವೇಶನ ನಡೆಯುತ್ತಿರುವ ಕಾರಣ ಎಲ್ಲ ಹುಲ್ಲನ್ನು ನಾಶ ಮಾಡಲಾಗುತ್ತಿದೆ. ಈ ಕೆಲಸಕ್ಕೆ ಐದು ಜೆಸಿಬಿಗಳನ್ನು ಬಳಸಿಕೊಳ್ಳಲಾಗಿದ್ದು, ವಾರದಿಂದ ಸ್ವಚ್ಛತಾ ಕಾರ್ಯ ನಡೆದಿದೆ.

ಸುವರ್ಣಸೌಧದ ಸುತ್ತಲೂ ಪ್ರತಿವರ್ಷ ಅಪಾರ ಪ್ರಮಾಣದ ಹುಲ್ಲು ಬೆಳೆಯುತ್ತದೆ. ಇದನ್ನು ಹಸಿ ಇದ್ದಾಗಲೇ ರೈತರಿಗೆ ಕೊಟ್ಟರೆ ದನಗಳಿಗೆ ‍ಪೌಷ್ಟಿಕ ಆಹಾರ ಸಿಗುತ್ತದೆ. ಸದ್ಯ ಹುಲ್ಲು ಒಣಗಿದ್ದರೂ ಅದನ್ನು ತುಂಡರಿಸಿ ಅಥವಾ ಹಿಂಡಿ ಮಾಡಿದರೆ ದನಗಳು ತಿನ್ನುತ್ತವೆ. ಆದರೆ, ಅಧಿಕಾರಿಗಳು ಸೌಧದ ಸುತ್ತ ಇರುವೆ ಸಿಳಿಯಲೂ ಬಿಡುವುದಿಲ್ಲ. ಹುಲ್ಲು ಇದ್ದಾಗಿಯೂ ದನಗಳು ಹಸಿವಿನಿಂದ ಬಳಲುಂತ ಸ್ಥಿತಿ ಇದೆ ಎಂಬುದು ಹಲಗಾ– ಬಸ್ತವಾಡ ರೈತರ ತಕರಾರು.

‘ಹುಲ್ಲು ಕತ್ತರಿಸಿಕೊಂಡು ಹೋಗಲು ಅವಕಾಶ ನೀಡಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರೂ ಅನುಮತಿ ಕೊಟ್ಟಿಲ್ಲ. ಈಗ ಜನಪ್ರತಿನಿಧಿಗಳನ್ನು ಮೆಚ್ಚಿಸಲು ಹಸಿ ಹುಲ್ಲನ್ನು ಜೆಸಿಬಿ ಬಳಸಿ ಕೀಳುತ್ತಿದ್ದಾರೆ. ಒಣಗಿದ ಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ಜಾನುವಾರುಗಳ ಆಹಾರಕ್ಕೇ ಬೆಂಕಿ ಇಟ್ಟ ಅಧಿಕಾರಿಗಳ ಕ್ರಮಕ್ಕೆ ಏನು ಹೇಳಬೇಕು?’ ಎಂದು ರೈತ ಮುಖಂಡ ಪ್ರಕಾಶ ನಾಯಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವರು ಗಮನಿಸಲಿ: ಈ ವರ್ಷ ಜಿಲ್ಲೆಯನ್ನು ಬರಗಾಲ ಪೀಡಿತ ಎಂದು ಘೋಷಿಸಲಾಗಿದೆ. ರೈತರು ದನಗಳ ಮೇವಿಗೆ ಚಿಂತಾಕ್ರಾಂತರಾಗಿದ್ದಾರೆ. ಸದ್ಯಕ್ಕೆ ಮೇವಿನ ಕೊರತೆ ಇಲ್ಲ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಜನವರಿಯಿಂದ ನೀರು– ಮೇವಿನ ತೀವ್ರ ಬರ ಕಾಡಲಿದೆ ಎಂದು ಸ್ವತಃ ಜಿಲ್ಲಾ ಉಸ್ತುವಾರಿ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರೇ ಹೇಳಿದ್ದಾರೆ. ಆದರೂ ಲೋಕೋಪಯೋಗಿ ಇಲಾಖೆಯಿಂದ ಈ ಹುಲ್ಲನ್ನು ವ್ಯರ್ಥ ಮಾಡಲಾಗುತ್ತಿದೆ ಎಂಬುದನ್ನು ಸಚಿವರು ಗಮನಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಸೌಧ ಕಟ್ಟುವ ಮುನ್ನ ಇದೇ ಗುಡ್ಡದಲ್ಲಿ ನಮ್ಮ ದನಗಳು ಮೇಯುತ್ತಿದ್ದವು. ಈಗ ಮೇಯಿಸಲು ಜಾಗವಿಲ್ಲ. ನಮ್ಮ ಭೂಮಿ ಕೂಡ ಸೌಧಕ್ಕೆ ಕೊಟ್ಟಿದ್ದೇವೆ. ಈಗ ಹುಲ್ಲನ್ನೂ ಸುಟ್ಟುಹಾಕಿದ್ದು ಬೇಸರ ತಂದಿದೆ
ಸುರೇಶ ಮರ್ಯಾಕಾಚೆ ಹಲಗಾ ಗ್ರಾಮದ ರೈತ
ಸುವರ್ಣ ಸೌಧ ಕಟ್ಟಲು ಜಾಗ ನೀಡಿದ ಹಲಗಾ– ಬಸ್ತವಾಡ ಗ್ರಾಮಗಳ ರೈತರಿಗೆ ಹುಲ್ಲು ಕೊಯ್ಯಲು ಅವಕಾಶ ನೀಡಬೇಕಿತ್ತು. ಅದನ್ನು ನಾಶ ಮಾಡಿದ್ದು ಖಂಡನೀಯ
ಪ್ರಕಾಶ ನಾಯಿಕ ರೈತ ಮುಖಂಡ
ಸುವರ್ಣ ವಿಧಾನಸೌಧದ ಸುತ್ತ ಬೆಳೆದ ಹುಲ್ಲನ್ನು ಕತ್ತರಿಸಿಕೊಳ್ಳದಂತೆ ನಿರ್ಬಂಧ ಹೇರಿಲ್ಲ. ಯಾರು ಬೇಕಾದರೂ ಒಯ್ಯಬಹುದು. ಬರುವ ವರ್ಷದಿಂದ ಮುಂಚಿತವಾಗಿಯೇ ಅನುಮತಿಸಲಾಗುವುದು
ನಿತೇಶ್‌ ಪಾಟೀಲ ಜಿಲ್ಲಾಧಿಕಾರಿ
ಇದು ಜೊಂಡು (ಖಡ್ಡ) ಹುಲ್ಲು. ದನಗಳು ತಿನ್ನುವುದಿಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಅದು ತಪ್ಪು ತಿಳಿವಳಿಕೆ. ಹಿಂಡುವ ದನಗಳಿಗೆ ಪೌಷ್ಟಿಕ ಆಹಾರವಿದು
ಕಿಶನ್‌ ನಂದಿ ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT