ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಮುಷ್ಕರ; ರೋಗಿಗಳ ಪರದಾಟ

Last Updated 28 ಜುಲೈ 2018, 13:51 IST
ಅಕ್ಷರ ಗಾತ್ರ

ಬೆಳಗಾವಿ:ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ನಗರದಲ್ಲಿ ಶನಿವಾರ ಖಾಸಗಿ ವೈದ್ಯರು ಪ್ರತಿಭಟನೆ ನಡೆಸಿದರು. ಚಿಕಿತ್ಸೆ ದೊರಕದೆ ರೋಗಿಗಳು ಪರದಾಡುವಂತಾಯಿತು.

ಬೆಳಿಗ್ಗೆಯಿಂದಲೇ ಆಸ್ಪತ್ರೆಗಳ ಬಾಗಿಲು ತೆರೆದಿರಲಿಲ್ಲ. ಆಸ್ಪತ್ರೆಗಳ ಹೊರಗೆ ‘ಬಂದ್‌’ ಎನ್ನುವ ಫಲಕ ಹಾಕಲಾಗಿತ್ತು. ಚಿಕಿತ್ಸೆಗೆಂದು ದೂರದ ಊರುಗಳಿಂದ ಬಂದಿದ್ದ ರೋಗಿಗಳು ವಾಪಸ್‌ ಮರಳುತ್ತಿದ್ದ ದೃಶ್ಯ ಕಂಡುಬಂದಿತು. ನಂತರ ಅವರು ಜಿಲ್ಲಾಸ್ಪತ್ರೆಯತ್ತ ಹೆಜ್ಜೆ ಹಾಕಿದರು. ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದವರಿಗೆ ಎಂದಿನಂತೆ ಚಿಕಿತ್ಸೆ ದೊರೆಯಿತು. ವೈದ್ಯರು ನಿಯಮಿತದಂತೆ ಬಂದು ಪರೀಕ್ಷಿಸಿ, ಚಿಕಿತ್ಸೆ ನೀಡಿದರು. ಹೊರಹೋಗಿಗಳ ವಿಭಾಗ ಹೊರತುಪಡಿಸಿದರೆ ಆಸ್ಪತ್ರೆಯ ಪ್ರಯೋಗಾಲಯಗಳು, ಔಷಧಿ ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಸರ್ಕಾರಿ ಆಸ್ಪತ್ರೆಗಳತ್ತ ದೌಡು: ನಗರದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಉದ್ದುದ್ದ ಸಾಲುಗಳು ಕಂಡುಬಂದವು. ವಡಗಾಂವ ಹಾಗೂ ರುಕ್ಮಿಣಿ ನಗರ ಸೇರಿದಂತೆ ಹಲವು ಕಡೆ ಇರುವ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸುತ್ತಮುತ್ತಲಿನ ಜನರು ಬಂದು, ಚಿಕಿತ್ಸೆ ಪಡೆದುಕೊಂಡು ಹೋದರು.

ಭಾರತೀಯ ವೈದ್ಯರ ಸಂಘವು (ಐಎಂಎ) ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಸೇವೆಗೆ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಪ್ಪಾಸಾಹೇಬ ನರಹಟ್ಟಿ ಅವರು ಎಲ್ಲ ವೈದ್ಯರಿಗೂ ಆಸ್ಪತ್ರೆಯಲ್ಲಿ ಇರುವಂತೆ ಮುನ್ಸೂಚನೆ ನೀಡಿದ್ದರು. ರಜೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ರದ್ದುಪಡಿಸಿದರು. ಈಗಾಗಲೇ ರಜೆ ಮೇಲೆ ಹೋಗಿದ್ದ ವೈದ್ಯರನ್ನು ಹಾಗೂ ಆಸ್ಪತ್ರೆಗಳ ಸಿಬ್ಬಂದಿಗಳನ್ನು ವಾಪಸ್‌ ಕರೆಸಿಕೊಂಡಿದ್ದರು.

‘ಖಾಸಗಿ ವೈದ್ಯರ ಮುಷ್ಕರದಿಂದ ಜನರಿಗೆ ತೊಂದರೆ ಉಂಟಾಗಬಾರದೆಂದು ಎಲ್ಲ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಎಲ್ಲ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ರಜೆ ಹಾಕದಂತೆ ಮನವಿ ಮಾಡಿಕೊಳ್ಳಲಾಗಿದೆ. ಆಸ್ಪತ್ರೆಯಲ್ಲಿದ್ದು ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೇನೆ’ ಎಂದು ಅಪ್ಪಾಸಾಹೇಬ ನರಹಟ್ಟಿ ಸುದ್ದಿಗಾರರಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT