ಗುರುವಾರ , ಫೆಬ್ರವರಿ 27, 2020
19 °C
ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ರಾಜಹಂಸಗಡ ಅಭಿವೃದ್ಧಿಗೆ ₹3.50 ಕೋಟಿ: ಶಾಸಕಿ ಲಕ್ಷ್ಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆ ಸ್ಥಾಪಿಸುವುದಾಗಿ ಚುನಾವಣೆಗೂ ಮುನ್ನ ನೀಡಿದ್ದ ವಾಗ್ದಾನವನ್ನು ಈಗ ಈಡೇರಿಸುತ್ತಿದ್ದೇನೆ. ಇದು ನನ್ನ ಪಾಲಿಗೆ ಅತ್ಯಂತ ಅಭಿಮಾನ ಮತ್ತು ಗರ್ವದ ಕ್ಷಣವಾಗಿದೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ತಾಲ್ಲೂಕಿನ ರಾಜಹಂಸಗಡ ಕೋಟೆಯಲ್ಲಿ ₹3.50 ಕೋಟಿ ವೆಚ್ಚದಲ್ಲಿ ಆರಂಭಿಸಲಾದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪಿಸುವ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ತಿಳಿಸಲು ಹಾಗೂ ಆ ಮೂಲಕ ನಮ್ಮ ಅಮೂಲ್ಯ ಪರಂಪರೆಯ ರಕ್ಷಣೆಗಾಗಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಸುವರ್ಣ ವಿಧಾನಸೌಧದಿಂದ ನೋಡಿದರೆ ರಾಜಹಂಸಗಡ ಕೋಟೆ ಕಾಣಿಸುತ್ತದೆ. ಇಲ್ಲಿ ಸ್ಥಾಪಿಸಲಾಗುವ 50 ಅಡಿ ಎತ್ತರದ ಶಿವಾಜಿ ಮಹಾರಾಜರ ಪ್ರತಿಮೆ ಕೂಡ ಎಲ್ಲ ಕಡೆಯಿಂದಲೂ ಕಾಣುವ ರೀತಿಯಲ್ಲಿ ಇರಲಿದೆ’ ಎಂದು ತಿಳಿಸಿದರು.

₹15 ಕೋಟಿ: ‘ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಒಟ್ಟು ₹15 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಇಲ್ಲಿ ಕೈಗೊಳ್ಳಲಾಗುವುದು. ಕೆಲವೇ ದಿನಗಳಲ್ಲಿ ರಾಜಹಂಸಗಡ ಕೋಟೆಯು ಭವ್ಯವಾದ ಪ್ರವಾಸಿ ತಾಣವಾಗಿ ಮಾರ್ಪಾಡಾಗುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಶಾಸಕಿಯಾಗಿ 18 ತಿಂಗಳ ಅವಧಿಯಲ್ಲಿ ₹1200 ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಜನರ ಅಭಿಮಾನ ಹಾಗೂ ಪ್ರೀತಿ ಶಾಶ್ವತವಾಗಿ ಉಳಿಸಿಕೊಳ್ಳಲು ಅಹೋರಾತ್ರಿ ಶ್ರಮಿಸುತ್ತಿದ್ದೇನೆ. ಕ್ಷೇತ್ರದಲ್ಲಿನ ಶೇ. 60ಕ್ಕೂ ಅಧಿಕ ಜನ ಕೃಷಿ ಅವಲಂಬಿಸಿ ಬದುಕುತ್ತಿರುವುದು ನನಗೆ ಅರಿವಿದೆ. ಹೀಗಾಗಿಯೇ ಕ್ಷೇತ್ರದಲ್ಲಿನ ಕೆರೆಗಳನ್ನು ತುಂಬಿಸುವ, ಬಾಂದಾರ ಮತ್ತು ಡ್ಯಾಂಗಳನ್ನು ನಿರ್ಮಿಸುವ ಕೆಲಸಕ್ಕೆ ಅತಿ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ. ಇನ್ನೊಂದು ವರ್ಷದಲ್ಲಿ ಕ್ಷೇತ್ರದ 83 ಹಳ್ಳಿಗಳಿಗೆ ಮಲಪ್ರಭಾ ನದಿಯಿಂದ ನೀರು ಪೂರೈಸುವ ಯೋಜನೆ ಕಾರ್ಯಗತಗೊಳ್ಳಲಿದೆ. ಇದರಿಂದ ಹಳ್ಳಿಗಳ ಕೆರೆಗಳಲ್ಲಿ ನೀರು ತುಂಬಿಕೊಂಡು ಕೃಷಿಕರಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಸೌಹಾರ್ದದಿಂದ ಇದ್ದೇವೆ:

‘ಬೆಳಗಾವಿ ಗ್ರಾಮೀಣ ಕ್ಷೇತ್ರವು ಕನ್ನಡ ಮತ್ತು ಮರಾಠಿ ಭಾಷಿಕರ ಪವಿತ್ರ ಸಂಗಮದಂತಿದೆ. ಇಲ್ಲಿನ 112 ಹಳ್ಳಿಗಳಲ್ಲಿ ಅರ್ಧದಷ್ಟು ಕನ್ನಡ ಹಾಗೂ ಇನ್ನರ್ಧ ಮರಾಠಿ ಭಾಷಿಕರಿಂದ ಕೂಡಿವೆ. ನಾವೆಲ್ಲರೂ ಬಹಳ ಸೌಹಾರ್ದದಿಂದ ಬದುಕುತ್ತಿದ್ದೇವೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಯೋಜನೆಯ ಪ್ರಸ್ತಾವ ತಯಾರಿಸಿದ ಅಧಿಕಾರಿಗಳು, ಎಂಜಿನಿಯರ್, ಪ್ರತಿಮೆ ತಯಾರಕರನ್ನು ಸತ್ಕರಿಸಲಾಯಿತು. ಪ್ರತಿಮೆ ಸಿದ್ಧಪಡಿಸಲು ₹50 ಲಕ್ಷ ಚೆಕ್ ಅನ್ನು ಮೂರ್ತಿಕಾರ ವಿಕ್ರಮ ಪಾಟೀಲ ಅವರಿಗೆ ಹಸ್ತಾಂತರಿಸಲಾಯಿತು.

ಕೋಟೆಯಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಎಲ್ಲರಿಗೂ ಭಗವಾ ಪೇಟಾ ತೊಡಿಸಿದ್ದರಿಂದ ವಾತಾವರಣ ಸಂಪೂರ್ಣ ಭಗವಾಮಯವಾಗಿತ್ತು. ಶಿವಾಜಿ ಮಹಾರಾಜರ ಜೀವನಚರಿತ್ರೆ ಸಾರುವ ಪೋವಾಡಾ ಹಾಗೂ ಝಾಂಜ್ ಪಥಕ್‌ಗಳು ಆಕರ್ಷಣೆಯಾಗಿದ್ದವು.

ಶ್ರೀರಾಮಸೇನಾ ಹಿಂದೂಸ್ತಾನ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ, ಶಿವಪ್ರತಿಷ್ಠಾನ ಅಧ್ಯಕ್ಷ ಕಿರಣ ಗಾವಡೆ, ಕೋಟೆ ಸಿದ್ಧೇಶ್ವರ ದೇವಸ್ಥಾನದ ಪಂಚ ಸಮಿತಿ ಸದಸ್ಯ ಸಿದ್ದಪ್ಪ ಛತ್ರೆ, ಸುಳಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರವಿಂದ ಪಾಟೀಲ, ಯುವ ಮುಖಂಡ ಮೃಣಾಲ ಹೆಬ್ಬಾಳಕರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)