ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸತ್ತರೆ ಯಾರೂ ಪ್ರಧಾನಿ ಆಗಲ್ಲವೇ?: ಶಾಸಕ ರಾಜು ಕಾಗೆ ಆಕ್ರೋಶ

ಪ್ರಿಯಾಂಕಾ ಪರ ಪ್ರಚಾರ ಸಭೆಯಲ್ಲಿ ಶಾಸಕ ಭರಮಗೌಡ (ರಾಜು) ಕಾಗೆ ಹೇಳಿಕೆ
Published 1 ಮೇ 2024, 22:27 IST
Last Updated 1 ಮೇ 2024, 22:27 IST
ಅಕ್ಷರ ಗಾತ್ರ

ಕಾಗವಾಡ: ‘ಪ್ರಧಾನಿ ನರೇಂದ್ರ ಮೋದಿ ಸತ್ತರೆ ಈ ದೇಶದಲ್ಲಿ ಮುಂದೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ? ಏಕೆ ಮೋದಿ...ಮೋದಿ... ಎಂದು ಕೂಗುತ್ತೀರಿ’ ಎಂದು ಶಾಸಕ ಭರಮಗೌಡ (ರಾಜು) ಕಾಗೆ ಹರಿಹಾಯ್ದರು.

ತಾಲ್ಲೂಕಿನ ಮದಬಾವಿಯಲ್ಲಿ ಮಂಗಳವಾರ ರಾತ್ರಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಯುವಜನರು ಮೋದಿ ಮೋದಿ... ಎನ್ನುತ್ತಾರೆ. ಮೋದಿಯನ್ನು ತೊಗೊಂಡು ನೆಕ್ಕುತ್ತೀರಾ’ ಎಂದೂ ಪ್ರಶ್ನಿಸಿದರು.

‘ನಾನೂ ಪದವೀಧರ. ನಾನೂ ಸಹ ಈ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತೇನೆ ಎನ್ನುವ ಆತ್ಮವಿಶ್ವಾಸವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬೇಕು, ದೇಶಕ್ಕೆ ಮೋದಿ ಬೇಕು ಎನ್ನುತ್ತಾರೆ. ಮೋದಿ ಇಲ್ಲಿ ಬಂದು ನಿಮ್ಮ ಸಮಸ್ಯೆ ಆಲಿಸುತ್ತಾರೆಯೇ? ಇಲ್ಲಿ ನಿಮಗೆ ಸಮಸ್ಯೆಯಾದರೆ ಸ್ಪಂದಿಸುವುದು ನಾನೇ’ ಎಂದರು.

‘ಉದ್ಯೋಗ ಸೃಷ್ಟಿಸುವುದಾಗಿ ಮೋದಿ 10 ವರ್ಷಗಳಿಂದ ಹೇಳುತ್ತಿದ್ದಾರೆ. ಲಕ್ಷಾಂತರ ಯುವಜನರು ಪದವಿ ಪಡೆದೂ ನಿರುದ್ಯೋಗಿ ಆಗಿದ್ದಾರೆ. ಉದ್ಯೋಗ ಕೊಡಿ ಎಂದು ಮೋದಿ ಅವರಿಗೆ ಕೇಳಿದರೆ ಪಕೋಡ ಮಾರಲು ಹೋಗಿ ಎನ್ನುತ್ತಾರೆ. ಆದರೂ ಯುವಕರು ಮೋದಿ...ಮೋದಿ... ಎನ್ನುತ್ತಿದ್ದಾರೆ’ ಎಂದು ಕಿಡಿ ಕಾರಿದರು.

ವಿದ್ಯುತ್‌ ಸ್ಥಗಿತ: ಕಾಗೆ ಬೆದರಿಕೆ:

ಕಾಗವಾಡ ತಾಲ್ಲೂಕಿನ ಮಂಗಾವತಿ ಮತ್ತು ಜುಗುಳ ಗ್ರಾಮಗಳಲ್ಲಿ ಪ್ರಚಾರ ಮಾಡಿ ಮಾತನಾಡಿದ ಭರಮಗೌಡ (ರಾಜು) ಕಾಗೆ, ‘ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ನಿರೀಕ್ಷಿತ ಮತ ಬರದೇ ಇದ್ದರೆ ನಿಮ್ಮೂರಿನ ವಿದ್ಯುತ್‌ ಕಡಿತಗೊಳಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆ. ಶಾಸಕರ ಈ ಹೇಳಿಕೆಗಳ ವಿಡಿಯೊ ತುಣುಕುಗಳು ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT