ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಭವಿಷ್ಯ ರೂಪಿಸುತ್ತಿರುವ ಆರ್‌ಡಿಎಸ್ ಕಾಲೇಜು

ಮೂಡಲಗಿಯ ಗ್ರಾಮೀಣ ವಿದ್ಯಾರ್ಥಿಗಳ ಆಶಾಕಿರಣ
Last Updated 3 ಜೂನ್ 2021, 12:43 IST
ಅಕ್ಷರ ಗಾತ್ರ

ಮೂಡಲಗಿ (ಬೆಳಗಾವಿ ಜಿಲ್ಲೆ): ಇಲ್ಲಿನ ರೂರಲ್ ಡೆವೆಲಪ್‌ಮೆಂಟ್‌ ಸೊಸೈಟಿ (ಆರ್‌ಡಿಎಸ್‌)ಯು ತನ್ನ ಕಾಲೇಜಿನಲ್ಲಿ ಹಲವು ಪದವಿ ಕೋರ್ಸ್‌ಗಳನ್ನು ಪ್ರಾರಂಭಿಸುವ ಮೂಲಕ ಗ್ರಾಮೀಣ ಯುವಕರ ಭವಿಷ್ಯ ರೂಪಿಸುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶಿಕ್ಷಣದ ಬಗ್ಗೆ ಅಪಾರ ಪ್ರೇಮ ಹೊಂದಿದ್ದ ದಿ.ತಮ್ಮಣ್ಣ ಪಾರ್ಶಿ ಅವರು 2002-03ರಲ್ಲಿ ಸಮಾಜ ಕಾರ್ಯ (ಬಿ.ಎಸ್.ಡಬ್ಲ್ಯು) ಪದವಿ ಕಾಲೇಜು ಪ್ರಾರಂಭಿಸಿದರು. ಕೇವಲ 16 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಕಾಲೇಜು ನೂರಾರು ವಿದ್ಯಾರ್ಥಿಗಳ ದಾಖಲಾತಿಯಿಂದ ಶೈಕ್ಷಣಿಕವಾಗಿ ಗಮನಸೆಳೆಯಿತು.

ಇಲ್ಲಿ ಸಮಾಜ ಕಾರ್ಯದಲ್ಲಿ ಪದವಿ ಮಾಡಿಕೊಂಡ ನೂರಾರು ಗ್ರಾಮೀಣ ಯುವಕರು ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಗಳಲ್ಲಿ ವೃತ್ತಿ ಮಾಡುತ್ತಿದ್ದಾರೆ. ಕೆಲವರು ಎಂ.ಎಸ್‌.ಡಬ್ಲ್ಯು. ಸ್ನಾತಕೋತ್ತರ ಪದವಿ ಮುಗಿಸಿ ಸ್ವಂತಃ ಎನ್‌ಜಿಒ ತೆರೆದು ಬದುಕು ರೂಪಿಸಿಕೊಂಡಿರುವುದು ಈ ಕಾಲೇಜು ಕೊಟ್ಟಿರುವ ಕೊಡುಗೆಯಾಗಿದೆ.

2016ರಲ್ಲಿ ಬಿ.ಎ., ಬಿ.ಕಾಂ. ಕೋರ್ಸ್‌ಗಳು ಮತ್ತು 2018ರಲ್ಲಿ ಬಿ.ಎಸ್ಸಿ. ಪದವಿ ಕೋರ್ಸ್‌ ಪ್ರಾರಂಭಗೊಂಡಿದ್ದರಿಂದ ಒಂದೇ ಕ್ಯಾಂಪಸ್‌ನಲ್ಲಿ ವಿವಿಧ ಕೋರ್ಸ್‌ಗಳ ಕಲಿಕೆಗೆ ಅವಕಾಶ ಇಲ್ಲಿದೆ. ಪ್ರಸಕ್ತ ಸಾಲಿನಲ್ಲಿ 1,248 ವಿದ್ಯಾರ್ಥಿಗಳ ದಾಖಲಾತಿ ಇದೆ.

ವಿವಿಧ ಸೌಲಭ್ಯ:

ಮೂರೂವರೆ ಎಕರೆ ಸ್ವಂತ ನಿವೇಶನದಲ್ಲಿ ಸುಸಜ್ಜಿತವಾದ ಕಟ್ಟಡ ಮೈದಳೆದಿದೆ. ಬೋಧನಾ ಕೊಠಡಿಗಳು, ಸಭಾಭವನ, 10 ಸಾವಿರಕ್ಕೂ ಅಧಿಕ ಪುಸ್ತಕಗಳ ಗ್ರಂಥಾಲಯ, ಕಂಪ್ಯೂಟರ್ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಸುಸಜ್ಜಿತ ಪ್ರಯೋಗಾಲಯಗಳು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿವೆ.

‘ಎನ್ಎಸ್ಎಸ್, ರೆಡ್‌ಕ್ರಾಸ್, ವೃತ್ತಿ ಮಾರ್ಗದರ್ಶನ ಮತ್ತು ಮಹಿಳಾ ಸಬಲೀಕರಣ ಘಟಕಗಳ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ’ ಎಂದು ಪ್ರಾಚಾರ್ಯ ಎಸ್.ಬಿ. ಗೋಟೂರ ತಿಳಿಸಿದರು.

‘‌32 ಜನ ಬೋಧಕರು ಮತ್ತು 11 ಮಂದಿ ಬೋಧಕೇತರ ಸಿಬ್ಬಂದಿ ಇದ್ದು, ಪ್ರತಿ ವಾರ ವಿದ್ಯಾರ್ಥಿಗಳ ಜ್ಞಾನ ವಿಕಾಸಕ್ಕಾಗಿ ವಿಚಾರಸಂಕಿರಣ, ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ’ ಎಂದು ಆಡಳಿತಾಧಿಕಾರಿ ಶಿವಾನಂದ ಸತ್ತಿಗೇರಿ ತಿಳಿಸಿದರು.

ಕ್ರೀಡೆಗೆ ಉತ್ತೇಜನ:

ಪ್ರತಿ ವರ್ಷ ಕ್ರೀಡೆಗಳನ್ನು ಸಂಘಟಿಸುವ ಮೂಲಕ ಕ್ರೀಡೆಗೆ ಉತ್ತೇಜನ ನೀಡುತ್ತಿದ್ದು, ಸಾಕಷ್ಟು ವಿದ್ಯಾರ್ಥಿಗಳು ಆರ್‌ಸಿಯು ಬ್ಲೂ ಆಗಿ ಹೊರಹೊಮ್ಮಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ.

ರಾಷ್ಟ್ರಮಟ್ಟದ ಯುವಜನ ಮತ್ತು ಭಾವೈಕ್ಯ ಮೇಳ ಆಯೋಜನೆ, ಸಾಹಿತ್ಯ, ಹಳ್ಳಿಮೇಳಗಳಂತ ಕಾರ್ಯಕ್ರಮಗಳ ಸಂಘಟನೆಗಳಿಂದ ಕ್ಯಾಂಪಸ್‌ ಸದಾ ಲವಲವಿಕೆಯಿಂದ ಕೂಡಿರುತ್ತದೆ. ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಅವರು ಸಂಸ್ಥೆಗೆ ಮಾರ್ಗದರ್ಶಕರಾಗಿದ್ದರಿಂದ ಕಾಲೇಜಿಗೆ ಆಗಾಗ ಭೇಟಿ ನೀಡಿ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಉಪನ್ಯಾಸವನ್ನು ನೀಡುತ್ತಿದ್ದಾರೆ.

ಸಂಸ್ಥೆಯವರು, ಸರ್ಕಾರದ ಅನುದಾನ ಇಲ್ಲದಿದ್ದರೂ ಕಳೆದ ಎರಡು ದಶಕಗಳಿಂದ ಕಾಲೇಜಿನಲ್ಲಿ ಶೈಕ್ಷಣಿಕವಾಗಿ ಯಾವ ಕೊರತೆಗಳನ್ನೂ ಮಾಡದೆ ಮುನ್ನಡೆಸುತ್ತಿದ್ದಾರೆ.

‘ತಂದೆಯ ಅಕಾಲಿಕ ನಿಧನದಿಂದ ಸಂಸ್ಥೆ ನಡೆಸುವ ಜವಾಬ್ದಾರಿ ಹೊರಬೇಕಾಯಿತು. ತಂದೆಯ ಕನಸಿನಂತೆ ಕಾಲೇಜು ಇಂದು ಶೈಕ್ಷಣಿಕವಾಗಿ ಉತ್ತರೋತ್ತರವಾಗಿ ಬೆಳೆಯುತ್ತಲಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಸಂತೋಷ ಪಾರ್ಶಿ ತಿಳಿಸಿದರು. ‌

‘ಕಡು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ’ ಎಂದರು.

* ಶಿಕ್ಷಣ ಪ್ರಸಾರ ಮಾಡುವುದಕ್ಕಾಗಿ ಆರ್‌ಡಿಎಸ್‌ ಸೊಸೈಟಿ ಹುಟ್ಟು ಹಾಕಿದ್ದು, ಧ್ಯೇಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ

–ಸಂತೋಷ ಪಾರ್ಶಿ, ಅಧ್ಯಕ್ಷ, ಆರ್‌ಡಿಎಸ್‌, ಮೂಡಲಗಿ

* ಸರ್ಕಾರದ ಅನುದಾನವಿಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಆರ್‌ಡಿಎಸ್‌ ಸಂಸ್ಥೆಯದು ಶ್ಲಾಘನೀಯ ಕಾರ್ಯವಾಗಿದೆ.

–ಡಾ.ಗುರುರಾಜ ಕರಜಗಿ, ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT