ಭಾನುವಾರ, ಮಾರ್ಚ್ 26, 2023
24 °C

ಹಾನಗಲ್ ಫಲಿತಾಂಶ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ: ಸತೀಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದು ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಜಿಲ್ಲೆಯ ಗೋಕಾಕದಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಮತದಾರರು ಕಾಂಗ್ರೆಸ್‌ಗೆ  ಬೆಂಬಲವಾಗಿ ನಿಲ್ಲಲಿದ್ದಾರೆ ಮತ್ತು ಬಿಜೆಪಿ ವಿರುದ್ಧ ಮತ ಚಲಾಯಿಸಲು ಕಾಯುತ್ತಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಿಂದಗಿಯಲ್ಲೂ ಗೆಲ್ಲುವ ನಿರೀಕ್ಷೆ ಇತ್ತು. ಏಕೆ ಸೋಲಾಯಿತು ಗೊತ್ತಿಲ್ಲ. ಹಾನಗಲ್ ನಮಗೆ ಪ್ರತಿಷ್ಠೆಯಾಗಿತ್ತು; ಅಲ್ಲಿ ಗೆದ್ದಿದ್ದೇವೆ. ಶ್ರೀನಿವಾಸ ಮಾನೆ ಅವರನ್ನು ಗೆಲ್ಲಿಸಲು ಪಕ್ಷದ ಹಿರಿಯ ನಾಯಕರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರ ದಂಡೆ ಶ್ರಮಿಸಿದೆ. ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದರಿಂದ ಗೆಲುವು ಸಾಧ್ಯವಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ನಾನು 15 ದಿನಗಳವರೆಗೆ ಕ್ಷೇತ್ರದಲ್ಲಿಯೇ ಇದ್ದು, ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ಪ್ರಚಾರ ಮಾಡಿದ್ದೆ. ಆಗ ಜನರ ಪ್ರತಿಕ್ರಿಯೆ ನೋಡಿ ಆತ್ಮವಿಶ್ವಾಸ ಮೂಡಿತ್ತು. ಸಚಿವರು ಯಾರೇ ಬರಬಹುದು; ಜನರಿಗೆ ಎಷ್ಟೇ ದುಡ್ಡು ಹಂಚಬಹುದು. ಆದರೆ, ಆಮಿಷದಿಂದ ಮತದಾರರನ್ನು ಸೆಳೆಯಲು ಆಗುವುದಿಲ್ಲ ಎನ್ನುವುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ’ ಎಂದು ವಿಶ್ಲೇಷಿಸಿದರು.

ಮುಖ್ಯಮಂತ್ರಿಗೆ ಮುಖಭಂಗ ಎನ್ನುವುದಿಲ್ಲ: ಲಕ್ಷ್ಮಿ

‘ಹಾನಗಲ್ ಜಿದ್ದಾಜಿದ್ದಿನ ಕ್ಷೇತ್ರವಾಗಿತ್ತು. ಪ್ರಬುದ್ಧ ಮತದಾರರು ಹೃದಯವಂತ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಕೆಲವೇ ತಿಂಗಳಾಗಿವೆ. ಅವರಿಗೆ ಮುಖಭಂಗವಾಗಿದೆ ಎನ್ನಲು ಬಯಸುವುದಿಲ್ಲ’ ಎಂದು ಕೆಪಿಸಿಸಿ ವಕ್ತಾರೆಯೂ ಅಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

‘ಕಷ್ಟ ಕಾಲದಲ್ಲಿ ಜನರಿಗೆ ಸ್ಪಂದಿಸುವವರನ್ನು ಜನರು ಕೈ ಹಿಡಿಯುತ್ತಾರೆ ಎನ್ನುವುದಕ್ಕೆ ಈ ಚುನಾವಣೆ ಸಾಕ್ಷಿಯಾಗಿದೆ. ಪ್ರಬುದ್ಧ ಮತದಾರರು ಜಾತಿ ರಾಜಕೀಯ ಮಾಡಿಲ್ಲ. ಕಷ್ಟಕಾಲದಲ್ಲಿ ಸ್ಪಂದಿಸಿದ ವ್ಯಕ್ತಿಗೆ ಮಣೆ ಹಾಕಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಹಾನಗಲ್ ಕ್ಷೇತ್ರದ ಚುನಾವಣೆ ಎಲ್ಲರಿಗೂ ಪಾಠವಾಗಿದೆ. ಬೆಲೆ ಏರಿಕೆ ಬಿಸಿ ಹಾನಗಲ್‌ನಲ್ಲಿ ಬಿಜೆಪಿಗೆ ತಟ್ಟಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.