ಭಾನುವಾರ, ಮಾರ್ಚ್ 7, 2021
32 °C

ಎನ್‌ಡಿಆರ್‌ಎಫ್ ನಿಯಮಾವಳಿ ಪರಿಷ್ಕರಿಸಲು ಕೇಂದ್ರಕ್ಕೆ ಮೊರೆ: ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದರೂರ (ಬೆಳಗಾವಿ ಜಿಲ್ಲೆ): 'ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ನೀಡಲು ಅಡ್ಡಿಯಾಗಿರುವ ಎನ್.ಡಿ.ಆರ್.ಎಫ್  ನಿಯಮಾವಳಿಗಳನ್ನು ಬದಲಾಯಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದ್ಯದಲ್ಲಿಯೇ ಮನವಿ ಸಲ್ಲಿಸಲಿದ್ದೇವೆ' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಅಥಣಿ ತಾಲ್ಲೂಕಿನ ದರೂರ ಗ್ರಾಮದಲ್ಲಿ  ಕೃಷ್ಣಾ ನದಿ ಪ್ರವಾಹ ಪೀಡಿತ ಜನರಿಗೆ ಶುಕ್ರವಾರ ಪರಿಹಾರ ವಿತರಿಸಿ ಅವರು ಮಾತನಾಡಿದರು.

'ಎನ್.ಡಿ.ಆರ್.ಎಫ್ ನಿಯಮಾವಳಿ ಪ್ರಕಾರ ಒಂದು ಹೆಕ್ಬೇರ್ ಬೆಳೆ  ಹಾನಿಗೆ ಕೇವಲ ₹ 13,500 ಪರಿಹಾರ ನೀಡಲು ಅವಕಾಶವಿದೆ. ಇದು ತುಂಬಾ ಕಡಿಮೆ ಎನ್ನುವುದು ನನಗೂ ಗೊತ್ತಿದೆ. ಆದರೆ, ಇದನ್ನು ಹೆಚ್ಚಿಸುವುದು ನನ್ನ ಕೈಯಲ್ಲಿ ಇಲ್ಲ' ಎಂದರು.

'ಈ ಸಮಸ್ಯೆ ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲ. ಇತರ ರಾಜ್ಯಗಳಲ್ಲೂ ಇದೆ. ಅಗತ್ಯಬಿದ್ದರೆ ಸಚಿವರ ನಿಯೋಗವನ್ನು ತೆಗೆದುಕೊಂಡು ಹೋಗಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಲಾಗುವುದು' ಎಂದು ಹೇಳಿದರು.

ಮಹಾರಾಷ್ಟ್ರ ಮಾದರಿ ಅಧ್ಯಯನಕ್ಕೆ ಸೂಚನೆ: 'ಬೆಳೆಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ನೀಡುತ್ತಿರುವ ಮಾದರಿಯನ್ನು ಅಧ್ಯಯನ ಮಾಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಅವರು ವರದಿ ನೀಡಿದ ಬಳಿಕ ಸರ್ಕಾರದ ಆರ್ಥಿಕ ಸ್ಥಿತಿ ಆಧರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದು ಅವರು ಭರವಸೆ ನೀಡಿದರು.

'ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದಿದ್ದರೂ ಮನೆ ಹಾನಿಗೆ ₹ 5 ಲಕ್ಷ ಪರಿಹಾರ ನೀಡುತ್ತಿದ್ದೇವೆ. ಸಂತ್ರಸ್ತರು ಇನ್ನೂ ಹೆಚ್ಚಿನ ನೆರವು ಬಯಸಿದರೆ ನೀಡಲು ಸಿದ್ಧನಿದ್ದೇನೆ' ಎಂದರು.

ಡಿಸಿಎಂ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಪಿ.ರಾಜೀವ, ಮಹಾಂತೇಶ ದೊಡ್ಡಗೌಡರ, ದುರ್ಯೋಧನ ಐಹೊಳೆ, ಮಹಾದೇವಪ್ಪ ಯಾದವಾಡ, ಪರಿಷತ್ ಸದಸ್ಯ ಹನಮಂತ ನಿರಾಣಿ, ಅನರ್ಹ ಶಾಸಕ ಶ್ರೀಮಂತ ಪಾಟೀಲ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ ಕಳಸದ, ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.