ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರ: ಅನಾಥವಾದ ಸರ್ಕಾರಿ ಕಟ್ಟಡಗಳು

ಸೂಕ್ತ ಬಳಕೆ ಇಲ್ಲದೇ ಪಾಳುಬಿದ್ದ ಕಟ್ಟಡಗಳು, ಸರ್ಕಾರಿ ಕಚೇರಿಗಳತ್ತಲೂ ನಿರ್ಲಕ್ಷ್ಯ: ಸಾರ್ವಜನಿಕರ ಅಸಮಾಧಾನ
Published 11 ಡಿಸೆಂಬರ್ 2023, 5:10 IST
Last Updated 11 ಡಿಸೆಂಬರ್ 2023, 5:10 IST
ಅಕ್ಷರ ಗಾತ್ರ

ಖಾನಾಪುರ: ಪಟ್ಟಣದಲ್ಲಿರುವ ವಿವಿಧ ಇಲಾಖೆಗಳ ಕಟ್ಟಡಗಳು ಇದ್ದೂ ಇಲ್ಲದಂತಾಗಿವೆ. ಬಹುಪಾಲು ಕಚೇರಿಗಳು ಮಿನಿ ವಿಧಾನಸೌಧಕ್ಕೆ ಸ್ಥಳಾಂತರವಾದ ಮೇಲೆ ಪಾಳುಬಿದ್ದಿವೆ. ಅವುಗಳನ್ನು ಸೂಕ್ತವಾಗಿ ಬಳಕೆ ಮಾಡದ ಕಾರಣ ಭೂತಬಂಗಲೆಗಳಾಗಿ ಪರಿವರ್ತನೆಯಾಗಿವೆ. ಸ್ಥಳೀಯ ಜನಪ್ರತಿನಿಧಿಗಳ ನಿರಾಸಕ್ತಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬುದು ಪಟ್ಟಣವಾಸಿಗಳ ದೂರು.

ಮೀನುಗಾರಿಕೆ ಸೇರಿದಂತೆ ಹಲವು ಇಲಾಖೆಗಳ ಕಚೇರಿಗಳಿಗೆ ಇಲ್ಲಿ ಸ್ವಂತ ಕಟ್ಟಡಗಳೇ ಇಲ್ಲ. ಬಾಡಿಗೆ ಕಟ್ಟಡದಲ್ಲಿ ಅವು ಕಾರ್ಯನಿರ್ವಹಿಸುತ್ತಿವೆ. ಹೀಗಿರುವಾಗ ಹಳೆಯ ಕಟ್ಟಡಗಳನ್ನು ಬಳಸಿಕೊಳ್ಳದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ತಹಶೀಲ್ದಾರ್ ಕಚೇರಿ:

ಹಳೆಯ ತಹಶೀಲ್ದಾರ್‌ ಕಚೇರಿ ಆವರಣದಲ್ಲೇ ತಹಶೀಲ್ದಾರ್‌, ಸಬ್ ರಿಜಿಸ್ಟ್ರಾರ್‌, ಉಪಖಜಾನೆ, ತಾಲ್ಲೂಕು ಕಾರಾಗೃಹ, ಅಬಕಾರಿ ಇಲಾಖೆ ಕಚೇರಿ ಕೆಲಸ ಮಾಡುತ್ತಿದ್ದವು. 2009ರಲ್ಲಿ ಮಿನಿ ವಿಧಾನಸೌಧಕ್ಕೆ ಈ ಕಚೇರಿಗಳನ್ನು ಸ್ಥಳಾಂತರಿಸಲಾಯಿತು. ಆದರೆ, ನಂತರದ ವರ್ಷಗಳಲ್ಲಿ ಹಳೆಯ ಕಟ್ಟಡ ಬಳಕೆಯಾಗ ಕಾರಣ, ಶಿಥಿಲಾವಸ್ಥೆ ತಲುಪಿದೆ. ಕಟ್ಟಡದ ಹೆಂಚುಗಳು ಒಡೆದಿವೆ. ಕಿಟಕಿ, ಬಾಗಿಲು ಮುರಿದಿದ್ದು, ಚಾವಣಿಯೂ ಹಾಳಾಗಿದೆ. ಒಂದು ಕಾಲದಲ್ಲಿ ತಾಲ್ಲೂಕಿನ ಶಕ್ತಿಕೇಂದ್ರವಾಗಿದ್ದ ಈ ಕಟ್ಟಡ ಇಂದು ಯಾರಿಗೂ ಬೇಡವಾಗಿದೆ.

ಪ‍ಟ್ಟಣದಲ್ಲಿ ಈ ಹಿಂದೆ ಅಸ್ತಿತ್ವದಲ್ಲಿದ್ದ ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಕಚೇರಿಯದ್ದೂ ಇದೇ ಸ್ಥಿತಿ. ಬ್ರಿಟಿಷ್‌ ಅವಧಿಯಲ್ಲಿ ನಿರ್ಮಾಣವಾಗಿದ್ದ ಈ ಸುಂದರವಾದ ಕಟ್ಟಡ, ಇಂದು ಬೀಗ ಜಡಿದ ಸ್ಥಿತಿಯಲ್ಲಿದೆ. ವಿಷಜಂತುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ನಂದಗಡ ಮತ್ತು ಖಾನಾಪುರ ಪೊಲೀಸ್ ಠಾಣೆಗಳೂ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಆ ಠಾಣೆಗಳ ಹಳೆಯ ಕಟ್ಟಡ ದಯನೀಯ ಸ್ಥಿತಿ ತಲುಪಿವೆ.

ಕುಡುಕರ ಹಾವಳಿ:

ಪಟ್ಟಣದ ಶಿವಸ್ಮಾರಕ ವೃತ್ತದ ಬಳಿ ಇರುವ ತಾಲ್ಲೂಕು ಪಂಚಾಯ್ತಿಗೆ ಸೇರಿದ ಹಳೆಯ ನ್ಯಾಯಾಲಯ ಕಟ್ಟಡವೂ ಶಿಥಿಲ ಹಂತದಲ್ಲಿದೆ. ಈ ಕಟ್ಟಡದ ಸುತ್ತಲೂ ಮದ್ಯದಂಗಡಿಗಳಿವೆ. ಹಾಗಾಗಿ ಕತ್ತಲಾಗುತ್ತಿದ್ದಂತೆ ಜನರು ನಿರಾತಂಕವಾಗಿ ಕಟ್ಟಡದ ಆವರಣ ಪ್ರವೇಶಿಸಿ, ಮೋಜು–ಮಸ್ತಿ ಮಾಡುತ್ತಿರುವುದು ಕಂಡುಬರುತ್ತಿದೆ. ಹಳೆಯ ನ್ಯಾಯಾಲಯದ ಪಕ್ಕದಲ್ಲೇ 20ಕ್ಕೂ ಅಧಿಕ ಮಳಿಗೆಗಳು ಅಕ್ರಮವಾಗಿ ನಿರ್ಮಾಣವಾಗಿವೆ.

‘ಹಳೆಯ ನ್ಯಾಯಾಲಯ ಕಟ್ಟಡದ ಸುತ್ತ ಅಕ್ರಮವಾಗಿ ತಲೆ ಎತ್ತಿದ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಬೇಕು. ಇಡೀ ಜಾಗವನ್ನು ಸರ್ಕಾರದ ಸುಪರ್ದಿಗೆ ಪಡೆದು,  ಇದೇ ಜಾಗದಲ್ಲಿ ಹೊಸ ವಾಣಿಜ್ಯ ಸಂಕೀರ್ಣ ನಿರ್ಮಿಸಬೇಕೆಂಬ ಬೇಡಿಕೆಯಿದೆ. ಈ ಸಂಬಂಧ ಹಲವು ಬಾರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂಬುದು ಸ್ಥಳೀಯರ ತಕರಾರು.

ಬಳಕೆಯಾಗದ ವಸತಿಗೃಹಗಳು:

ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವಾಸ್ತವ್ಯಕ್ಕೆ ಅನುಕೂಲವಾಗಲೆಂದು ಖಾನಾಪುರ ಪಟ್ಟಣದ ವಿವಿಧೆಡೆ ವಸತಿಗೃಹಗಳನ್ನು ನಿರ್ಮಿಸಲಾಗಿದೆ.

ಅವುಗಳ ಪೈಕಿ ಕೆಎಸ್ಆರ್‌ಪಿ ರಸ್ತೆಯ ಒಂದು ಬದಿಯಲ್ಲಿರುವ ಪೊಲೀಸ್ ವಸತಿಗೃಹಗಳು, ರಾಜ್ಯ ಪೊಲೀಸ್ ತರಬೇತಿ ಶಾಲೆ ಆವರಣದಲ್ಲಿರುವ ಸಿಬ್ಬಂದಿ ವಸತಿಗೃಹಗಳು, ತಾಲ್ಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿರುವ ವಸತಿಗೃಹಗಳು, ಪೊಲೀಸ್ ಠಾಣೆ ಎದುರಿನ ಅಧಿಕಾರಿಗಳ ವಸತಿಗೃಹಗಳು ಬಳಕೆಯಾಗುತ್ತಿಲ್ಲ. ಇದರಿಂದಾಗಿ ಅವು ದುಃಸ್ಥಿತಿಗೆ ತಲುಪುತ್ತಿವೆ.

ಖಾನಾಪುರ ಪಟ್ಟಣದಲ್ಲಿರುವ ಹಳೆಯ ತಹಶೀಲ್ದಾರ್‌ ಕಟ್ಟಡ          / ಪ್ರಜಾವಾಣಿ ಚಿತ್ರ
ಖಾನಾಪುರ ಪಟ್ಟಣದಲ್ಲಿರುವ ಹಳೆಯ ತಹಶೀಲ್ದಾರ್‌ ಕಟ್ಟಡ          / ಪ್ರಜಾವಾಣಿ ಚಿತ್ರ

ಶಾಸಕರಿಗೂ ಬೇಡವಾದ ಕಚೇರಿ:

ಖಾನಾಪುರ ಕ್ಷೇತ್ರ ಪ್ರತಿನಿಧಿಸುವ ಶಾಸಕರು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗಲಿ ಎಂಬ ಉದ್ದೇಶದಿಂದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಶಾಸಕರ ಜನಸಂಪರ್ಕ ಕಚೇರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಶಾಸಕ ವಿಠ್ಠಲ ಹಲಗೇಕರ್‌ ಅಧಿಕೃತ ಸರ್ಕಾರಿ ಕಚೇರಿ ಬಳಸುತ್ತಿಲ್ಲ. ಹಿಂದೆ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದವರೂ ಬಳಸದ್ದರಿಂದ ಈ ಕಚೇರಿ ಐದಾರು ವರ್ಷಗಳಿಂದ ಬೀಗ ಹಾಕಿದ ಸ್ಥಿತಿಯಲ್ಲಿದೆ.

ಖಾನಾಪುರ ಪಟ್ಟಣದಲ್ಲಿ ಪಾಳುಬಿದ್ದ ಸಬ್‌ ರಿಜಿಸ್ಟ್ರಾರ್‌ ಕಚೇರಿ        / ಪ್ರಜಾವಾಣಿ ಚಿತ್ರ
ಖಾನಾಪುರ ಪಟ್ಟಣದಲ್ಲಿ ಪಾಳುಬಿದ್ದ ಸಬ್‌ ರಿಜಿಸ್ಟ್ರಾರ್‌ ಕಚೇರಿ        / ಪ್ರಜಾವಾಣಿ ಚಿತ್ರ

ಯಾರು ಏನಂತಾರೆ?

ಶಾಸಕರ ಜನಸಂಪರ್ಕ ಕಚೇರಿ ಬಳಕೆ ವಿಷಯದಲ್ಲಿ ರಾಜಕಾರಣ ಮಧ್ಯಪ್ರವೇಶಿಸಿದೆ. ರಾಜ್ಯದಲ್ಲಿರುವ ಆಡಳಿತ ಪಕ್ಷದ ಮುಖಂಡರು ಹೇಳಿದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಶಾಸಕರ ಜನಸಂಪರ್ಕ ಕಚೇರಿ ಆರಂಭಿಸುವತ್ತ ಅವರು ಗಮನಹರಿಸುತ್ತಿಲ್ಲ
-ವಿಠ್ಠಲ ಹಲಗೇಕರ ಶಾಸಕ
ಖಾನಾಪುರದಲ್ಲಿನ ಸಿಪಿಐ ಕಚೇರಿ ಪೊಲೀಸ್ ಠಾಣೆಯ ಹಳೆಯ ಕಟ್ಟಡ ಮತ್ತು ಪೊಲೀಸ್ ವಸತಿಗೃಹಗಳ ದುರಸ್ತಿ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಕಟ್ಟಡಗಳನ್ನು ಬಳಸುವ ಕುರಿತು ಚರ್ಚಿಸಿ ಕ್ರಮ ವಹಿಸಲಾಗುವುದು
–ಮಂಜುನಾಥ ನಾಯ್ಕ ಪೊಲೀಸ್‌ ಇನ್‌ಸ್ಪೆಕ್ಟರ್‌ ಖಾನಾಪುರ
ಹಳೆಯ ತಹಶೀಲ್ದಾರ್‌ ಕಚೇರಿಯಲ್ಲಿದ್ದ ಕಚೇರಿಗಳನ್ನೆಲ್ಲ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ನಂತರ ಈ ಕಟ್ಟಡ ಬಳಕೆಯತ್ತ ಯಾರೊಬ್ಬರೂ ಗಮನಹರಿಸದ್ದರಿಂದ ಶಿಥಿಲಾವಸ್ಥೆ ತಲುಪಿದೆ
-ಜಯಂತ ತಿಣೈಕರ ಸಾಮಾಜಿಕ ಕಾರ್ಯಕರ್ತ
ತಾಲ್ಲೂಕು ಪಂಚಾಯ್ತಿಗೆ ಸೇರಿದ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ನೀಡುವ ಟೆಂಡರ್ ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಅವ್ಯವಹಾರವಾಗಿದೆ. 2000ನೇ ಇಸ್ವಿಯಲ್ಲಿ ತಿಂಗಳಿಗೆ ₹500 ಬಾಡಿಗೆ ಕೊಡುತ್ತಿದ್ದವರು ಈಗಲೂ ₹700ರಿಂದ ₹800 ಕೊಡುತ್ತಿದ್ದಾರೆ. ಆದರೆ ಬೇರೆಯವರಿಗೆ ಆ ಮಳಿಗೆಗಳನ್ನೇ ಮತ್ತೆ ಬಾಡಿಗೆಗೆ ಕೊಟ್ಟು ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ
–ಜಾರ್ಡನ್ ಗೋನ್ಸಾಲ್ವಿಸ್ ಹೋರಾಟಗಾರ
ತಾಲ್ಲೂಕು ಪಂಚಾಯಿತಿ ಆಸ್ತಿ ಒತ್ತುವರಿ
ಖಾನಾಪುರ ಪಟ್ಟಣದ ಹೃದಯಭಾಗದಲ್ಲಿ ತಾಲ್ಲೂಕು ಅಭಿವೃದ್ಧಿ ಮಂಡಳಿ (ಈಗಿನ ತಾಲ್ಲೂಕು ಪಂಚಾಯಿತಿ) ಒಡೆತನದಲ್ಲಿ ಐದಾರು ಎಕರೆ ಆಸ್ತಿ ಇದೆ. ಆದರೆ ಅಧಿಕಾರಿಗಳು ಸರಿಯಾಗಿ ಆಸ್ತಿ ನಿರ್ವಹಿಸದಿರುವುದರಿಂದ ಪ್ರಭಾವಿಗಳು ಇದನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಶಿವಸ್ಮಾರಕ ವೃತ್ತದ ಸ್ಟೇಷನ್ ರಸ್ತೆಯಲ್ಲಿ ತಾಲ್ಲೂಕು ಪಂಚಾಯಿತಿಗೆ ಸೇರಿದ 30ಕ್ಕೂ ಅಧಿಕ ವಾಣಿಜ್ಯ ಮಳಿಗೆಗಳಿವೆ. ಈ ಮಳಿಗೆಗಳನ್ನು ಬಾಡಿಗೆಗೆ ನೀಡುವ ವಿಚಾರವಾಗಿ 2000ನೇ ಇಸ್ವಿಯಿಂದ ಟೆಂಡರ್ ಪ್ರಕ್ರಿಯೆಯೇ ನಡೆದಿಲ್ಲ. ಹತ್ತಾರು ವರ್ಷಗಳಿಂದ ಈ ಮಳಿಗೆಯಲ್ಲಿರುವವರು ಅತ್ಯಲ್ಪ ಬಾಡಿಗೆ ಪಾವತಿಸುತ್ತಿದ್ದಾರೆ. ಇದರಿಂದಾಗಿ ತಾಲ್ಲೂಕು ಪಂಚಾಯ್ತಿಗೆ ಬರಬೇಕಿದ್ದ ಆದಾಯಕ್ಕೆ ಕೊಡಲಿ ಪೆಟ್ಟು ಬಿದ್ದಿದೆ ಎನ್ನುವ ಆರೋಪ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT