ಗುರುವಾರ , ಮಾರ್ಚ್ 4, 2021
30 °C
ಶ್ಲಾಘನೆ

ವಿಶಿಷ್ಟ ರೀತಿಯಲ್ಲಿ ಶತಮಾನೋತ್ಸವ ಆಚರಣೆ: 5000 ವಿದ್ಯಾರ್ಥಿಗಳಿಗೆ ಸಸಿ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಅಥಣಿ: ಪರಿಸರ ಉಳಿದರೆ ನಾವು ಉಳಿಯುತ್ತೆವೆ ಎಂಬ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಿವಾನಂದ ಹೊಸಮನಿ ಹೇಳಿದರು.

ಇಲ್ಲಿನ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಜಾಧವಜಿ ಶಿಕ್ಷಣ ಸಂಸ್ಥೆ, ಅರಣ್ಯ ಇಲಾಖೆ ಘಟಪ್ರಭಾ ವಿಭಾಗ ಹಾಗೂ ಗೋಕಾಕ ಪ್ರಾದೇಶಿಕ ವಲಯ ಸಹಯೋಗದಲ್ಲಿ ಜಾಧವಜಿ ಶಿಕ್ಷಣ ಸಂಸ್ಥೆ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ‘ಹಸಿರು ಕರ್ನಾಟಕ’ ಕಾರ್ಯಕ್ರಮದಲ್ಲಿ 5000 ವಿದ್ಯಾರ್ಥಿಗಳಿಗೆ ಸಸಿ ವಿತರಿಸುವ ಸಮಾರಂಭ ಉದ್ಘಾಟಿಸಿ, ಹಸಿರು ಧ್ವಜ ಅನಾವರಣಗೊಳಿಸಿ ಮಾತನಾಡಿದರು.

‘ಎಲ್ಲರೂ ಪರಿಸರ ರಕ್ಷಣೆಯ ಜವಾಬ್ದಾರಿ ನಿರ್ವಹಿಸಬೇಕು. ಈ ಭಾಗದ ಪ್ರಮುಖ ಶಿಕ್ಷಣ ಸಂಸ್ಥೆಯು ಸಸಿಗಳನ್ನು ನೆಡುವ, ವಿತರಿಸುವ ಕಾರ್ಯಕ್ರಮದ ಮೂಲಕ ವಿಶಿಷ್ಟವಾಗಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಶ್ಲಾಘನೀಯ’ ಎಂದರು.

‘ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ಪರಿಸರದ ನಡುವಿನ ತಿಕ್ಕಾಟದಿಂದಾಗಿ ಅರಣ್ಯ ಪ್ರದೇಶದ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಕಾಡು ಪ್ರಾಣಿಗಳು ನಾಡಿಗೆ ಬರುವಂತಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ‘ರೈತರು ವೃಕ್ಷ ಆಧಾರಿತ ಕೃಷಿ ಪದ್ಧತಿ ಅನುಸರಿಸಬೇಕು’ ಎಂದು ಸಲಹೆ ನೀಡಿದರು.

ಜೆ.ಎ. ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಅರವಿಂದರಾವ ದೇಶಪಾಂಡೆ, ‘ಈಚೆಗೆ ಉದ್ಘಾಟನೆಗೊಂದ ಶತಮಾನೋತ್ಸವ ಕಾರ್ಯಕ್ರಮದಲ್ಲಿ 100 ಮಂದಿ ಹಳೆಯ ವಿದ್ಯಾರ್ಥಿಗಳಿಗೆ ಮಾತ್ರ ಸಸಿ ವಿತರಿಸಲಾಗಿತ್ತು. ಈಗ ಆಡಳಿತ ಮಂಡಳಿ ನಿರ್ಧಾರದಂತೆ 5000 ಸಸಿಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಅರಣ್ಯ ಇಲಾಖೆಯು ಸಹಕಾರ ನೀಡಿದೆ’ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ರಾಮ ಕುಲಕರ್ಣಿ, ‘ಓಝೋನ್ ಪದರವು ತೆಳುವಾಗಿ, ರಂದ್ರವಾಗಿ ಕ್ಷೀಣಿಸಲು ಪರಿಸರ ಮಾಲಿನ್ಯ ಕಾರಣವಾಗಿದೆ. ಇದರಿಂದ ಮಾನವನ ಭವಿಷ್ಯ ಆತಂಕಕಾರಿಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಬೆಳಗಾವಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಬಿ. ಕರುಣಾಕರ ಮಾತನಾಡಿದರು. ಅಥಣಿ ಅರಣ್ಯ ಅಧಿಕಾರಿ ಪ್ರಶಾಂತ ಗೌರಾಣಿ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಎಸ್.ವಿ. ಜೋಶಿ, ಎಸ್.ಕೆ. ಸಂಗೋರಾಮ, ಎಸ್.ಎಮ್. ಪಾಟೀಲ, ಅನಿಲ ದೇಶಪಾಂಡೆ, ಡಾ.ಪಿ.ಎಸ್. ಕುಲಕರ್ಣಿ, ಎಂ.ವಿ. ಜೋಶಿ, ಆರ್.ಬಿ. ದೇಶಪಾಂಡೆ ಇದ್ದರು.

ಸಾಹಿತಿ ವಾಮನ ಕುಲಕರ್ಣಿ ನಿರೂಪಿಸಿದರು. ಸತೀಶ ಕುಲಕರ್ಣಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು