ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ, ಮುಸ್ಲಿಂ ಸಮನ್ವಯತೆಯ ಸಂಗಮ; ಸಾವಳಗಿಯ ಶಿವಲಿಂಗೇಶ್ವರ ಜಾತ್ರೆ 21ರಿಂದ

Last Updated 20 ಏಪ್ರಿಲ್ 2019, 10:35 IST
ಅಕ್ಷರ ಗಾತ್ರ

ಮೂಡಲಗಿ: ಹಿಂದೂ, ಮುಸ್ಲಿಂ ಸೇರಿದಂತೆ ಸರ್ವ ಧರ್ಮಗಳ ಭಾವೈಕ್ಯತೆಯನ್ನು ಸಾರುವ ಸಾವಳಗಿಯ ಶಿವಲಿಂಗೇಶ್ವರ ಜಾತ್ರೆಯು ಇದೇ 21ರಿಂದ 29ರವರೆಗೆ ಪೀಠಾಧಿಪತಿ ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿ ಸನ್ನಿಧಿಯಲ್ಲಿ ಜರುಗಲಿದೆ.

'ಕಾಶಿ ಕಾಬಾ ಒಂದೇ, ಪುರಾಣ ಕುರಾಣ ಒಂದೇ, ಈಶ್ವರ ಅಲ್ಲಾ ಒಬ್ಬನೇ' ಎನ್ನುವ ಹಿಂದೂ ಮುಸ್ಲಿಂ ಸಾಮರಸ್ಯವನ್ನು ಸಾರುವ ಸಂದೇಶವು ಅಕ್ಷರಶ: ಗೋಕಾಕ ತಾಲ್ಲೂಕಿನ ಸಾವಳಗಿಯ ಶಿವಲಿಂಗೇಶ್ವರ ಪೀಠದಲ್ಲಿ ನಿಜವೆನಿಸಿದೆ. ಸಾವಳಗಿಯ ಶಿವಲಿಂಗೇಶ್ವರ ಹಾಗೂ ಕಲಬುರ್ಗಿಯ ಖಾಜಾ ಬಂದೇನವಾಜರ ಸ್ನೇಹದ ಸಂಕೇತವಾಗಿ ಜಾತ್ಯಾತೀತೆಯನ್ನು ಸಾರುವ ಧಾರ್ಮಿಕ ಸ್ಥಳವೆನಿಸಿದೆ. ಪವಾಡ ಪುರುಷ, ಶಿವಯೋಗಿ ಶಿವಲಿಂಗೇಶ್ವರರು ಮತ್ತು ಅವರ ಪರಮ ಭಕ್ತೆ ಶರಣೆ ಮರುಳಮ್ಮನ ಸಮಾಧಿಗಳು ಒಂದೆಡೆ ಇರುವುದರಿಂದ ಸಾವಳಗಿಯು ನಾಡಿನ ಅತ್ಯಂತ ಜಾಗೃತ ಕ್ಷೇತ್ರವೆನಿಸಿದೆ. ಅಸಂಖ್ಯಾತ ಭಕ್ತರ ಶ್ರದ್ಧಾ ತಾಣವಾಗಿದೆ.

ಹಿನ್ನೆಲೆ: ದೈವಾಂಶ ಪುರುಷರು ಆಗಿರುವ ಸಾವಳಗಿಯ ಶಿವಲಿಂಗೇಶ್ವರರು ಕಲಬುರ್ಗಿ ಜಿಲ್ಲೆಯ ಹಿರೇಸಾವಳಗಿ ಬಳಿಯ ಕೊಳ್ಳೂರು ಗ್ರಾಮದಲ್ಲಿ ಜನನವಾಗಿದ್ದರು. ತಮ್ಮ ದೈವತ್ವ ಸಾಕ್ಷತ್ಕಾರದ ಮೂಲಕ ಲೋಕ ಕಲ್ಯಾಣ ಮಾಡುತ್ತಾ ಸಾವಳಗಿಯಲ್ಲಿ ನೆಲೆಸಿದರು. ಇವರ ತಪಸ್ಸಿನ ಪ್ರಭಾವವು ಕಲಬುರ್ಗಿಯ ಬಾದಷಾಹ ಸುಲ್ತಾನ್ ರೋಜ್ ಬಹದ್ದೂರರ ಗುರು ಬಂದೇನವಾಜ್ ವಲಿಯವರ ಮೇಲೆ ಬೀರಿತ್ತು. ಮುಸಲ್ಮಾನ್ ಗುರು ಖಾಜಾ ಬಂದೇ ನವಾಜ್ರು ವೀರಶೈವ ಗುರು ಶಿವಲಿಂಗೇಶ್ವರರ ಸಖ್ಯವನ್ನು ಬೆಳೆಸಿರುವ ಪ್ರತೀಕವಾಗಿ ಸಾವಳಗಿಯ ಶ್ರೀಮಠವು ಇಂದಿಗೂ ಭಾವೈಕ್ಯತೆಯನ್ನು ಬಿಂಬಿಸುವ ಜಾಗೃತ ಸ್ಥಳವಾಗಿದೆ. ಮುಸ್ಲಿಂ ಗುರುಗಳು ನೀಡಿದ ಕಾಣಿಕೆ, ಬಟ್ಟೆ ಬರೆಗಳು ಅವರ ಹೆಸರಿನಲ್ಲಿ ಪೀಠದಲ್ಲಿವೆ.

ಮಠ, ಮಸೀದಿ ವಾಸ್ತುಶಿಲ್ಪ

ಸಾವಳಗಿ ಪೀಠವು ಮೊದಲ ನೋಟದಲ್ಲಿ ಇದು ಮಠವೋ, ಮಸೀದಿಯೋ ಎನ್ನುವ ಸಂದೇಹ ಬರುವುದು ಸಹಜ. ಮಠದಲ್ಲಿ ಕಮಾನುಗಳು, ಗುಮ್ಮಟ, ಮಿನಾರುಗಳು ಮುಸ್ಲಿಂ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದು, ಇಲ್ಲಿ ಬರುವ ಭಕ್ತರಿಗೆ ಮಠ ಮತ್ತು ಮಸೀದಿಯ ಎರಡೂ ಒಂದೆಡೆ ಕಾಣುವಂತಾಗುತ್ತದೆ.

'ಮಸಜಿದ ಮಂದಿರ ಏಕ ಹೈ; ಈಶ್ವರ ಅಲ್ಲಾ ಏಕ ಹೈ' ಎನ್ನುವ ಸದ್ಭಾವನೆ ಇಲ್ಲಿ ಮೂಡುತ್ತದೆ. ಜಾತ್ರೆ, ದಸರಾ ಉತ್ಸವಗಳಲ್ಲಿ ಸನ್ನಿಧಿಯವರು ಈಗಲೂ ಮುಸ್ಲಿಂ ಪದ್ಧತಿಯ ಹಸಿರು ಬಣ್ಣದ ಪೇಟಾ, ಶೈಲಿ, ಶಮನ ಮುಂತಾದ ರಾಜ ಪೋಷಾಕುಗಳನ್ನು ಧರಿಸುತ್ತಾರೆ. ಭಕ್ತರು 'ಧೀನ್ ಹರ ಹರ' ಎಂಬ ಧರ್ಮ ಸಮನ್ವಯವನ್ನು ಸಾರುವ ಉದ್ಘೋಷ ಮಾಡುತ್ತಾರೆ. ಹಿಂದೂ ಮತ್ತು ಮುಸ್ಲಿಂ ಮನೆತನಗಳು ಮಠದ ಸೇವೆಯನ್ನು ಭಕ್ತಿಯಿಂದ ಸಲ್ಲಿಸುತ್ತಾ ಬಂದಿವೆ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಮತ್ತು ತಮಿಳುನಾಡು, ಕಾಶ್ಮೀರ ಸೇರಿದಂತೆ ದೇಶಾದ್ಯಂತ 360ಕ್ಕೂ ಅಧಿಕ ಶಿವಲಿಂಗೇಶ್ವರರ ಮಠಗಳಿದ್ದು, 1100ಕ್ಕೂ ಅಧಿಕ ಗದ್ಗುಗೆಗಳಿವೆ. ಶಿವಲಿಂಗೇಶ್ವರರ ಕಾಲವು ಕ್ರಿ.ಶ. 1645ರಿಂದ ಕ್ರಿ.ಶ. 1748 ಇದ್ದು, ಸಾವಳಗಿ ಮಠದ ನೆಲಮಾಳಿಗೆಯಲ್ಲಿ ತಪಸ್ಸಿನಲ್ಲಿ ಜೀವಂತ ಸಮಾಧಿಯಾಗಿರುವ ಕುರುಹುಗಳು ಇವೆ.

ಸದ್ಯ ಸಾವಳಗಿಯಲ್ಲಿಯ ಶಿವಲಿಂಗೇಶ್ವರರ ಮೂಲ ಮಠದಲ್ಲಿ ನಿರಂಜನ ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು 15ನೇ ಪೀಠಾಧಿಪತಿಗಳಾಗಿ ಲಕ್ಷಾಂತರ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ. ಗದ್ಗುಗೆಗೆ ಮೂರು ಹೊತ್ತು ಶಾಸ್ತ್ರೋಕ್ತ ಪೂಜೆ ಸೇರಿದಂತೆ ಎಲ್ಲ ಸಂಪ್ರದಾಯಗಳನ್ನು ಕಾಲ ಕಾಲಕ್ಕೆ ಜರಗುತ್ತಲಿವೆ. ಜಾತ್ರೆಯ ನಿಮಿತ್ತವಾಗಿ ಪುರಾಣ, ಸಂಗೀತ, ಕಲೆ, ಸಾಹಿತ್ಯ, ಸಾಂಸ್ಕೃತಿಕ, ಕೃಷಿ, ಜಾನುವಾರುಗಳ ಮೇಳ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT