ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜಯನ ಬಾಳು ಬೆಳಗಿದ ‘ಬಾಳೆ’

ಹಲವು ಸಮಸ್ಯೆಗಳನ್ನು ಮೆಟ್ಟಿನಿಂತು, ಸಾವಯವ ಕೃಷಿ ಮಾಡಿ ಗಮನ ಸೆಳೆಯುತ್ತಿರುವ ರೈತ
Published 17 ನವೆಂಬರ್ 2023, 4:04 IST
Last Updated 17 ನವೆಂಬರ್ 2023, 4:04 IST
ಅಕ್ಷರ ಗಾತ್ರ

ಖಾನಾಪುರ: ತಾಲ್ಲೂಕಿನ ಜಾಂಬೋಟಿ ಹೋಬಳಿ ಬಹುತೇಕ ಅರಣ್ಯ ಪ್ರದೇಶದಿಂದ ಸುತ್ತುವರಿದಿದೆ. ಅರಣ್ಯಕ್ಕೆ ಹೊಂದಿಕೊಂಡಿರುವ ಇಲ್ಲಿನ ಕೃಷಿಭೂಮಿಯಲ್ಲಿ ತರಕಾರಿ ಮತ್ತು ತೋಟಗಾರಿಕೆ ಬೆಳೆ ಬೆಳೆಯಲು ರೈತರು ಹಿಂದೇಟು ಹಾಕುತ್ತಾರೆ. ಅತಿವೃಷ್ಟಿ ಮತ್ತು ವನ್ಯಜೀವಿಗಳ ಹಾವಳಿಯೂ ಇದಕ್ಕೆ ಕಾರಣ.

ಆದರೆ, ಇದೇ ಹೋಬಳಿಯ ಮೋದೆಕೊಪ್ಪ ಗ್ರಾಮದ ಹೊರವಲಯದ ಜಮೀನಿನಲ್ಲಿ ರೈತ ಸಂಜಯ ಮಗದುಮ್ಮ ಸಾವಯವ ಕೃಷಿ ಪದ್ಧತಿಯಡಿ ಬಾಳೆತೋಟ ನಿರ್ಮಿಸಿ ಗಮನಸೆಳೆದಿದ್ದಾರೆ. ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸಿ ಕೃಷಿಯಲ್ಲಿ ಖುಷಿ ಕಂಡಿದ್ದಾರೆ.

ವೃತ್ತಿಯಲ್ಲಿ ಉದ್ಯಮಿಯಾಗಿರುವ ಸಂಜಯ ಕೆಲ ವರ್ಷಗಳ ಹಿಂದೆ ಮೋದೆಕೊಪ್ಪದ ಬಳಿ ಮೂರು ಎಕರೆ ಕೃಷಿಭೂಮಿ ಖರೀದಿಸಿದ್ದಾರೆ. ಅದರಲ್ಲಿ ಎರಡು ಕೊಳವೆಬಾವಿ ಕೊರೆಯಿಸಿ, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಜಮೀನಿನ ದಡದ ಸುತ್ತಲೂ ಸಾಗವಾಣಿ ಮತ್ತು ಗಾಳಿ ಗಿಡಗಳನ್ನು ‘ಬೇಲಿ’  ಮಾದರಿಯಲ್ಲಿ ಬೆಳೆಸಿದ್ದಾರೆ. ದಡದ ಭೂಮಿಯಲ್ಲಿ ಕಬ್ಬು ಬೆಳೆದರೆ, ಮಧ್ಯ ಭಾಗದಲ್ಲಿ ಬಾಳೆ, ಭತ್ತ ಮತ್ತಿತರ ಬೆಳೆ ಬೆಳೆಯುತ್ತಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಜಿ-9 ತಳಿಯ ಬಾಳೆಯ ತೋಟವನ್ನು ಸಂಜಯ ನಿರ್ಮಿಸಿದ್ದಾರೆ. ತೋಟಗಾರಿಕೆಯಲ್ಲಿ ಪರಿಣಿತಿ ಹೊಂದಿದ ತಜ್ಞರ ಮಾರ್ಗದರ್ಶನದಂತೆ, ಗಿಡದಿಂದ ಗಿಡಕ್ಕೆ ಮತ್ತು ಸಾಲಿನಿಂದ ಸಾಲಿಗೆ ಸಾಕಷ್ಟು ಅಂತರ ಕಾಪಾಡಿದ್ದಾರೆ. ಸಮರ್ಪಕವಾಗಿ ಗಾಳಿ, ನೀರು ದೊರೆತು, ಬಾಳೆಗಿಡಗಳು ಸ್ವಚ್ಛಂದವಾಗಿ ಬೆಳೆಯುವಂತೆ ನೋಡಿಕೊಂಡಿದ್ದಾರೆ.

ಬಾಳೆ ಗಿಡಗಳ ಮಧ್ಯದಲ್ಲಿ ಅಡಿಕೆ, ಪರಂಗಿ ಗಿಡಗಳನ್ನು ಅಂತರಬೆಳೆಯಾಗಿ ಬೆಳೆಸಿದ್ದಾರೆ. ನಿರಂತರವಾಗಿ ಜೀವಾಮೃತ, ಗಂಜಲು, ಬೇವಿನ ಎಣ್ಣೆ ಮತ್ತಿತರ ದೇಶಿಯ ಔಷಧ ಸಿಂಪಡಿಸಿ, ಬಾಳೆಗಿಡಗಳು ರೋಗಮುಕ್ತವಾಗಿರುವಂತೆ ಕ್ರಮ ವಹಿಸಿದ್ದಾರೆ.

‘ಈ ತೋಟ ನನ್ನ ಪಾಲಿಗೆ ಕಲ್ಪವೃಕ್ಷ ಇದ್ದಂತೆ. ಇಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಬಾಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣಿ ಸಿಗುತ್ತಿದೆ’ ಎಂದು ಸಂಜಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಟಗಾಳಿ-ಮೋದೆಕೊಪ್ಪ ಮುಖ್ಯರಸ್ತೆಯಿಂದ 2 ಕಿ.ಮೀ ಒಳಗಿಗಿರುವ ದುರ್ಗಮ ಪ್ರದೇಶದಲ್ಲಿ ನನ್ನ  ಕೃಷಿ ಜಮೀನಿದೆ. ಜಮೀನಿಗೆ ತೆರಳಲು ಸರಿಯಾದ ರಸ್ತೆಯಿಲ್ಲ. ಮಳೆ ಬಂದಾಗ ಅದೂ ಕೆಸರುಮಯವಾಗುತ್ತದೆ. ಇಲ್ಲಿ ವಿದ್ಯುತ್‌ ಸೌಕರ್ಯ ಸಮರ್ಪಕವಾಗಿಲ್ಲ. ವನ್ಯಜೀವಿಗಳ ಹಾವಳಿಯೂ ಸಾಕಷ್ಟಿದೆ. ಕೆಲಸಕ್ಕೆ ಕೂಲಿ ಕಾರ್ಮಿಕರು ಸಿಗುವುದಿಲ್ಲ. ಹೀಗೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ. ಆದರೂ, ಯಾವುದಕ್ಕೂ ಧೃತಿಗೆಡದೆ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದೇನೆ. ಉತ್ತಮ ಆದಾಯ ಗಳಿಸುತ್ತಿದ್ದೇನೆ’ ಎಂದು ಸಂಭ್ರಮಿಸಿದರು.

ಸಂಜಯ ಮಗದುಮ್ಮ ಅವರ ತೋಟದಲ್ಲಿ ಬೆಳೆದಿರುವ ಬಾಳೆ
ಸಂಜಯ ಮಗದುಮ್ಮ ಅವರ ತೋಟದಲ್ಲಿ ಬೆಳೆದಿರುವ ಬಾಳೆ
ಸಂಜಯ
ಸಂಜಯ

ನನ್ನ ತೋಟದಲ್ಲಿ ಬೆಳೆದ ಬಾಳೆಹಣ್ಣು ತುಂಬಾ ರುಚಿಯಾಗಿದೆ. ಸ್ನೇಹಿತರು ಮತ್ತು ಜನರ ಪ್ರೋತ್ಸಾಹದಿಂದ ಹಲವು ಸಮಸ್ಯೆ ಮೆಟ್ಟಿನಿಂತು ಕೃಷಿ ಮಾಡುತ್ತಿದ್ದೇನೆ

-ಸಂಜಯ ಮಗದುಮ್ಮ ಬಾಳೆ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT